2019ರಲ್ಲಿ ಅಂಗೀಕರಿಸಲಾದ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು (CAA) ಲೋಕಸಭೆ ಚುನಾವಣೆಗೆ ಮುನ್ನ ಜಾರಿಗೆ ತರಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಶನಿವಾರ ಹೇಳಿದ್ದಾರೆ. ಜಾಗತಿಕ ವ್ಯಾಪಾರ ಶೃಂಗಸಭೆ 2024ರಲ್ಲಿ ಮಾತನಾಡಿದ ಅವರು ಸಿಎಎ ಅನುಷ್ಠಾನದ ಸುಳಿವು ನೀಡಿದ್ದಾರೆ. ಈ ಕಾಯಿದೆ ಕುರಿತು ನಮ್ಮ ಮುಸ್ಲಿಂ ಸಹೋದರರನ್ನು ದಾರಿತಪ್ಪಿಸಲಾಗುತ್ತಿದೆ ಮತ್ತು ಪ್ರಚೋದಿಸಲಾಗುತ್ತಿದೆ. ಸಿಎಎ ಕೇವಲ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಕಿರುಕುಳವನ್ನು ಎದುರಿಸಿ ಭಾರತಕ್ಕೆ ಬಂದವರಿಗೆ ಪೌರತ್ವವನ್ನು ನೀಡಲು ಉದ್ದೇಶಿಸಿದೆ. ಇದು ಯಾವುದೇ ವ್ಯಕ್ತಿಯ ಭಾರತೀಯ ಪೌರತ್ವವನ್ನು ಕಸಿದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಕಾಯ್ದೆ ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್), ಮೂಲಭೂತ ಹಕ್ಕಾದ ಸಮಾನತೆಯ ಹಕ್ಕನ್ನು ಈ ಕಾಯ್ದೆಯು ಉಲ್ಲಂಘಿಸುತ್ತದೆ ಎಂದು ಹೇಳಿತ್ತು. ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಆರ್‌ಜೆಡಿ ನಾಯಕ ಮನೋಜ್ ಝಾ, ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ ಮತ್ತು ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಮುಂತಾದವರು ಈ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಕೇಂದ್ರ ಸರ್ಕಾರದ ವಾದ ಆಲಿಸುವವರೆಗೆ ಸಿಎಎಗೆ ತಡೆ ನೀಡಲಾಗುವುದಿಲ್ಲ ಎಂದು 2020ರ ಜನವರಿಯಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು. ಕಾಯಿದೆ ನೀತಿ ನಿರೂಪಣೆಗಳು ಸಂಸತ್ತಿನ ಹೊಣೆಗಾರಿಕೆ; ಅದರಲ್ಲಿ ತಾನು ಮೂಗು ತೂರಿಸುವುದಿಲ್ಲ ಎಂದು ಕೋರ್ಟ್ ಹೇಳುತ್ತ ಬಂದಿರುವುದರಿಂದ, ಕಾಯಿದೆ ಜಾರಿಗೆ ನ್ಯಾಯಾಂಗ ಯಾವುದೇ ರೀತಿಯಲ್ಲಿ ಅಡ್ಡಿಯಾಗಿಲ್ಲ ಎಂಬುದು ಸ್ಪಷ್ಟ.
ಈ ತಿದ್ದುಪಡಿ ಮಸೂದೆಯನ್ನು 2019ರಲ್ಲಿ ಆಂಗೀಕರಿಸಲಾಗಿತ್ತು. ನೆರೆ ರಾಷ್ಟ್ರಗಳಿಂದ ಭಾರತಕ್ಕೆ ವಲಸೆ ಬಂದಿರುವ ಮುಸ್ಲಿಂಯೇತರ ಧರ್ಮೀಯರಿಗೆ ಭಾರತರ ಪೌರತ್ವ ನೀಡುವ ಕಾಯ್ದೆ ಇದಾಗಿದೆ. ಈ ಕಾಯ್ದೆಯಲ್ಲಿ ಮುಸ್ಲಿಮರನ್ನು ಕೈಬಿಟ್ಟ ಕಾರಣ ವಿರೋಧ ಪಕ್ಷಗಳಿಂದ ಮತ್ತು ಮುಸ್ಲಿಂ ಸಮುದಾಯದಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಆದರೆ ಇದರಲ್ಲಿ ಹುರುಳಿಲ್ಲ. ಮುಸ್ಲಿಮರಿಗೂ ಈ ಕಾಯಿದೆಗೂ ಯಾವುದೇ ಸಂಬಂಧವಿಲ್ಲ. ಹಿಂದೂ, ಸಿಖ್, ಬೌದ್ಧರಿಗೆ ಭಾರತ ಹೊರತುಪಡಿಸಿ ಪೌರತ್ವ ಪಡೆಯಲು ಬೇರೆ ದೇಶಗಳೇ ಇಲ್ಲ.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ದೇಶಕ್ಕೆ ಅಮೂಲ್ಯ ಕೊಡುಗೆ ನೀಡಿದ ಮೂರು ಭಾರತ ರತ್ನಗಳು
ಇತಿಹಾಸವನ್ನು ನೋಡಿದರೆ, ಭಾರತ, ಆಫ್ಘಾನಿಸ್ಥಾನ, ಪಾಕಿಸ್ಥಾನ ಮತ್ತು ಬಾಂಗ್ಲಾದೇಶದ ಗಡಿಯುದ್ದಕ್ಕೂ ವಲಸೆ ನಡೆದಿರುವುದು ತಿಳಿಯುತ್ತದೆ. ಧರ್ಮದ ಕಾರಣಕ್ಕಾಗಿ ದೌರ್ಜನ್ಯಕ್ಕೆ ಒಳಗಾಗಿ ಭಾರತಕ್ಕೆ ಆಶ್ರಯ ಕೋರಿ ಬಂದಿರುವ ಸಮುದಾಯಗಳಲ್ಲಿ ಅನೇಕರ ಟ್ರಾವೆಲ್ ಡಾಕ್ಯುಮೆಂಟ್‌ಗಳ ಅವಧಿ ಮುಗಿದಿದೆ ಅಥವಾ ಅಪೂರ್ಣ ದಾಖಲೆಗಳನ್ನು ಹೊಂದಿದ್ದಾರೆ, ಅಥವಾ ಅವರ ಬಳಿ ದಾಖಲೆಗಳೇ ಇಲ್ಲ. ಮೋದಿ ಸರ್ಕಾರವು ತನ್ನ ಮೊದಲನೇ ಅವಧಿಯಲ್ಲಿ ಈ ರೀತಿಯ ವಲಸಿಗರಿಗೆ ಪಾಸ್‌ಪೋರ್ಟ್ ಅಧಿನಿಯಮ(ಭಾರತ ಪ್ರವೇಶಕ್ಕೆ) 1920ರ ಹಾಗೂ ವಿದೇಶಿ ಅಧಿನಿಯಮ 1946ರ ಪ್ರತಿಕೂಲ ದಂಡನಾರ್ಹ ಅಂಶಗಳಿಂದಲೂ ವಿನಾಯಿತಿ ನೀಡಿದೆ. ಇದಷ್ಟೇ ಅಲ್ಲದೇ 2016ರಲ್ಲಿ ಮೋದಿ ಸರ್ಕಾರ ಈ ನಿರಾಶ್ರಿತರಿಗೆ ದೀರ್ಘಕಾಲಿಕ ವೀಸಾ ಪಡೆಯಲೂ ಅರ್ಹರನ್ನಾಗಿಸಿದೆ. ಪೌರತ್ವ ತಿದ್ದುಪಡಿ ಕಾಯ್ದೆಯು ಒಟ್ಟಲ್ಲಿ, ಧಾರ್ಮಿಕ ಹಿಂಸೆಗೆ ತುತ್ತಾಗಿರುವವರಿಗೆ ನಾಗರಿಕತೆ ದೊರಕುವಂತೆ ಮಾಡಲು ಸಶಕ್ತಗೊಳಿಸುತ್ತದೆ.
ಸಂವಿಧಾನದ ಅನುಚ್ಛೇದ 25, ಪ್ರತಿಯೊಬ್ಬ ವ್ಯಕ್ತಿಗೂ ತನಗೆ ಇಷ್ಟವಾದ ಧರ್ಮವನ್ನು ಮುಕ್ತವಾಗಿ ಅನುಸರಿಸಲು, ಆಚರಿಸಲು ಸಮಾನ ಹಕ್ಕನ್ನು ನೀಡುತ್ತದೆ. ಪೌರತ್ವ ತಿದ್ದುಪಡಿ ಕಾಯ್ದೆಯು ಯಾವುದೇ ರೀತಿಯಲ್ಲೂ ಈ ಅಂಶಗಳನ್ನು ಉಲ್ಲಂಘಿಸಿಲ್ಲ. ಈ ಸತ್ಯವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ಸ್ಪಷ್ಟವಾಗಿ ಹೇಳಿದ್ದಾರೆ. “”ಸಿಎಎಯಿಂದಾಗಿ ಭಾರತೀಯ ಅಲ್ಪಸಂಖ್ಯಾತರ ಹಕ್ಕುಗಳ, ಭಾರತೀಯ ಜಾತ್ಯಾತೀತ ಮೌಲ್ಯಗಳ ಮತ್ತು ಸಂಪ್ರದಾಯಗಳ ಹನನವಾಗುವುದಿಲ್ಲ” ಎಂದವರು ಸ್ಪಷ್ಟಪಡಿಸಿದ್ದಾರೆ.
ಸಿಎಎ ಎನ್ನುವುದು ಅನ್ಯಾಯವನ್ನು ಎದುರಿಸುತ್ತಿರುವ ಸಾವಿರಾರು ನಿರ್ವಸಿತ ಕುಟುಂಬಗಳನ್ನು ಸಬಲೀಕರಣಗೊಳಿಸುವ ಐತಿಹಾಸಿಕ ಹೆಜ್ಜೆಯಾಗಿದೆ. ಇದು ಕಾಯಿದೆಯಾಗಿ ಜಾರಿಗೆ ಬಂದಿದೆ. ಸಮರ್ಪಕವಾಗಿ ಅನುಷ್ಠಾನಕ್ಕೂ ಬಂದರೆ, ಆಗ ಅದು ಇನ್ನಷ್ಟು ಅರ್ಥಪೂರ್ಣವಾಗುತ್ತದೆ.