Site icon Vistara News

LIC: ಎಸ್‌ಬಿಐಅನ್ನೂ ಹಿಂದಿಕ್ಕಿದ ಎಲ್‌ಐಸಿ; ಷೇರು ನೆಗೆತ, ದೇಶದಲ್ಲೇ ಮೌಲ್ಯಯುತ ಸಂಸ್ಥೆ ಗರಿ

LIC

ಮುಂಬೈ: ಭಾರತೀಯ ಜೀವ ವಿಮಾ ನಿಗಮವು (LIC) ಆರಂಭಿಕ ಸಾರ್ವಜನಿಕ ಷೇರು ಮಾರಾಟ (IPO) ಆರಂಭಿಸಿದ ಬಳಿಕ ಷೇರುಗಳ ಮೌಲ್ಯ ಭಾರಿ ಪ್ರಮಾಣದಲ್ಲಿ ಕುಸಿದ ಕಾರಣ ಭಾರಿ ಟೀಕೆಗಳು ವ್ಯಕ್ತವಾಗಿದ್ದವು. ಆದರೆ, ಎಲ್‌ಐಸಿ ಷೇರುಗಳ ಮೌಲ್ಯವು ಗಣನೀಯವಾಗಿ ಜಾಸ್ತಿಯಾಗಿದ್ದು, ಮಾರ್ಕೆಟ್‌ ಕ್ಯಾಪ್‌ (Market Cap) ದೃಷ್ಟಿಯಿಂದ ಈಗ ಭಾರತದಲ್ಲೇ ಅತಿ ಮೌಲ್ಯಯುತ ಸಾರ್ವಜನಿಕ ವಲಯದ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತೀಯ ಸ್ಟೇಟ್‌ ಬ್ಯಾಂಕ್‌ (SBI) ಅನ್ನೂ ಹಿಂದಿಕ್ಕಿ ಎಲ್‌ಐಸಿ ಈ ಸಾಧನೆ ಮಾಡಿದೆ.

ಬುಧವಾರ (ಜನವರಿ 17) ಷೇರು ಮಾರುಕಟ್ಟೆಯಲ್ಲಿ ಎಲ್‌ಐಸಿ ಷೇರುಗಳ ಮೌಲ್ಯವು ದಾಖಲೆಯ 919.45 ರೂಪಾಯಿ ತಲುಪಿತು. ಇದರಿಂದಾಗಿ ಎಲ್‌ಐಸಿ ಮಾರುಕಟ್ಟೆ ಕ್ಯಾಪ್‌ (Market capitalization) 5.8 ಲಕ್ಷ ಕೋಟಿ ರೂ. ತಲುಪಿತು. ಹಾಗೆಯೇ, ಎಸ್‌ಬಿಐ ಮಾರುಕಟ್ಟೆ ಕ್ಯಾಪ್‌ (ಬಿಎಸ್‌ಇ) 5.62 ಲಕ್ಷ ಕೋಟಿ ರೂ. ಇರುವುದರಿಂದ ಭಾರತದಲ್ಲಿಯೇ ಎಲ್‌ಐಸಿಯು ಮಾರುಕಟ್ಟೆ ಕ್ಯಾಪ್‌ ಮಾನದಂಡದಲ್ಲಿ ಅತಿ ಹೆಚ್ಚು ಮೌಲ್ಯ ಹೊಂದಿರುವ ಸಾರ್ವಜನಿಕ ವಲಯದ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಹೂಡಿಕೆದಾರರು ನಿರಾಳ

2022ರಲ್ಲಿ ಎಲ್‌ಐಸಿಯು ಮೊದಲ ಬಾರಿಗೆ ಐಪಿಒ ಆರಂಭಿಸಿತ್ತು. ಒಂದು ಷೇರಿಗೆ 904 ರೂ. ಪಾವತಿಸಿ ಹೂಡಿಕೆದಾರರು ಖರೀದಿಸಿದ್ದರು. ಆದರೆ, ಐಪಿಒ ಆರಂಭಿಸುತ್ತಲೇ ಎಲ್‌ಐಸಿ ಷೇರುಗಳ ಬೆಲೆಯು ಕುಸಿದಿತ್ತು. ಇದರಿಂದಾಗಿ ಜನ ಕೇಂದ್ರ ಸರ್ಕಾರವನ್ನು ಟೀಕಿಸಿದ್ದರು. ಎಲ್‌ಐಸಿ ಕೂಡ ಮುಚ್ಚಿಹೋಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ, ಬುಧವಾರ ಎಲ್‌ಐಸಿಯ ಒಂದು ಷೇರಿನ ಮೌಲ್ಯವು ದಾಖಲೆಯ 919 ರೂ. ತಲುಪಿದೆ. ಎಲ್‌ಐಸಿ ಐಪಿಒ ಆರಂಭಿಸಿದ ಬಳಿಕ ಇದೇ ಮೊದಲ ಭಾರಿಗೆ ಐಪಿಒ ಮೂಲ ಬೆಲೆಗಿಂತ ಮೌಲ್ಯವು ಜಾಸ್ತಿಯಾಗಿದೆ. ಸಹಜವಾಗಿಯೇ ಎಲ್‌ಐಸಿ ಐಪಿಒ ಖರೀದಿಸಿದ ಹೂಡಿಕೆದಾರರು ಖುಷಿಯಲ್ಲಿದ್ದಾರೆ.

ಇದನ್ನೂ ಓದಿ: Scholarships: ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್‌; ಎಲ್‌ಐಸಿ ಸ್ಕಾಲರ್‌ಶಿಪ್‌ಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ

ಕಳೆದ ವರ್ಷದ ನವೆಂಬರ್‌ನಿಂದಲೂ ಎಲ್‌ಐಸಿ ಷೇರುಗಳ ಮೌಲ್ಯವು ಏರಿಕೆಯಾಗುತ್ತಲೇ ಇದೆ. ಕಳೆದ ನವೆಂಬರ್‌ನಿಂದ ಇದುವರೆಗೆ ಎಲ್‌ಐಸಿ ಷೇರುಗಳ ಮೌಲ್ಯವು ಶೇ.50ರಷ್ಟು ಏರಿಕೆಯಾಗಿದೆ. 2023ರ ಮಾರ್ಚ್‌ನಲ್ಲಿ ಷೇರುಗಳ ಮೌಲ್ಯವು 530 ರೂ.ಗೆ ಇಳಿಕೆಯಾಗಿತ್ತು. ಆದರೀಗ, ದಾಖಲೆ ಪ್ರಮಾಣದಲ್ಲಿ ಎಲ್‌ಐಷಿ ಷೇರುಗಳ ಮೌಲ್ಯವು ಜಾಸ್ತಿಯಾಗಿರುವುದು ಹೂಡಿಕೆದಾರರಿಗೆ ಖುಷಿಯ ಸಂಗತಿಯಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version