Site icon Vistara News

ಗ್ರೇ ಮಾರ್ಕೆಟ್‌ನಲ್ಲಿ LIC IPO ಮೌಲ್ಯ ಹೆಚ್ಚಳ: ₹45-₹80ರ ವರೆಗೆ GMP

lic

ಬೆಂಗಳೂರು: ದೇಶದ ಅತಿ ದೊಡ್ಡ ಹಾಗೂ ಸರ್ಕಾರಿ ಸ್ವಾಮ್ಯದ ಷೇರು ಮಾರಾಟ ಸಂಸ್ಥೆ ಭಾರತೀಯ ಜೀವ ವಿಮಾ ನಿಗಮದ (LIC) ಷೇರುಗಳ ಗ್ರೇ ಮಾರ್ಕೆಟ್‌ ಮೌಲ್ಯ ದಿನದಿಂದ ದಿನಕ್ಕೆ ಏರುತ್ತಲೇ ಇದೆ.

ಕೇಂದ್ರ ಸರ್ಕಾರ 100% ಪಾಲು ಹೊಂದಿರುವ ಸಂಸ್ಥೆಯ ಸುಮಾರು 3.5% ಪಾಲನ್ನು ಸಾರ್ವಜನಿಕ ಷೇರುಗಳ ರೂಪದಲ್ಲಿ (IPO) ಮೇ 4ರಂದು ಬಿಡುಗಡೆ ಮಾಡಲಿದೆ. ಮೇ 9ರವರೆಗೆ ಮಾರಾಟವಾಗಲಿರುವ ಷೇರುಗಳ ಮೌಲ್ಯವನ್ನು ₹902- ₹949 ವರೆಗೆ ನಿಗದಿ ಮಾಆಡಲಾಗಿದೆ. ಎಲ್‌ಐಸಿ ನೌಕರರಿಗೆ ₹60 ರೂ. ಹಾಗೂ ಎಲ್‌ಐಸಿ ವಿಮಾದಾರರಿಗೆ ಪ್ರತಿ ಷೇರಿನ ಮೇಲೆ ₹45 ರಿಯಾಯಿತಿಯನ್ನು ಘೋಷಣೆ ಮಾಡಿದೆ.

ಆದರೆ ಬಿಡುಗಡೆಗೂ ಮುನ್ನ ಗ್ರೇ ಮಾರ್ಕೆಟ್‌ನಲ್ಲಿ ಎಲ್‌ಐಸಿ ಷೇರಿನ ಮೌಲ್ಯ ₹45- ₹80ವರೆಗೆ ಇದೆ. ಗ್ರೇ ಮಾರ್ಕೆಟ್‌ ಎಂದರೆ ಯಾವುದೇ ಷೇರುಗಳು ಪ್ರಾರಂಭಿಕ ಹೂಡಿಕೆಗೆ ಬಿಡುಗಡೆ ಆಗುವ ಮುನ್ನ ನಡೆಯುವ ಲೆಕ್ಕಾಚಾರ. ಗ್ರೇ ಮಾರ್ಕೆಟ್‌ ಪ್ರೀಮಿಯಂ(GMP) ಎಂದು ಇದನ್ನು ಕರೆಯಲಾಗುತ್ತದೆ. ಷೇರು ಮಾರಾಟದ ದಿನಾಂಕ ಘೋಷಣೆಯಾದ ಕೂಡಲೆ ಈ ಲೆಕ್ಕಾಚಾರ ನಡೆಯುತ್ತದೆ.

ಜಿಎಂಪಿ ಎಂದರೆ ಮಾರುಕಟ್ಟೆಯಲ್ಲಿ ಅದರ ಮೌಲ್ಯ ಎಷ್ಟಿದ ಎನುವುದನ್ನು ಸೂಚಿಸುತ್ತದೆ. ಉದಾಹರಣೆಗೆ ಒಂದು ಐಪಿಒದ ಜಿಎಂಪಿ ₹20 ಇದೆ ಎಂದುಕೊಳ್ಳೋಣ. ಕಂಪನಿಯು ಪ್ರತಿ ಐಪಿಒಗೆ ₹100 ನಿಗದಿ ಮಾಡಿದೆ ಎಂದುಕೊಳ್ಳೋಣ. ಈ ಉದಾಹರಣೆಯಲ್ಲಿ, ಐಪಿಒ ಬಡುಗಡೆಯಾದ ದಿನಾಂಕದಂದು ಷೇರುಗಳು ₹120 ರಲ್ಲಿ ಮಾರಾಟ ಆಗುತ್ತವೆ ಎಂದಾಗುತ್ತದೆ.

ಹೆಚ್ಚಿನ ಓದಿಗಾಗಿ | ಮೇ 4ರಿಂದ LIC IPO: ಷೇರು ಖರೀದಿ ಹೇಗೆ ಮಾಡಬೇಕು? ಇಲ್ಲಿದೆ ವಿವರ

ಎಲ್‌ಐಸಿ ಕಂಪನಿಯ ಮೇಲೆ ಸಾರ್ವಜನಿಕ ವಲಯದಲ್ಲಿ ಹಾಗೂ ಷೇರು ಹೂಡಿಕೆದಾರರಲ್ಲೂ ಸಾಕಷ್ಟು ನಿರೀಕ್ಷೆಗಳಿವೆ. ದೇಶದಲ್ಲಿ ಅನೇಕ ವಿಮಾ ಕಂಪನಿಗಳಿದ್ದರೂ ಎಲ್‌ಐಸಿ ಹಾಗೂ ಇತರೆ ಕಂಪನಿಗಳ ವಹಿವಾಟಿನ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಕೇಂದ್ರ ಸರ್ಕಾರ ತನ್ನ ಪಾಲಿನ 5% ಷೇರನ್ನು ಮಾರಾಟ ಮಾಡುವುದಾಗಿ ಫೆಬ್ರವರಿಯಲ್ಲಿ ತಿಳಿಸಿತ್ತು. ಇದೀಗ ಘೋಷಣೆ ವೇಳೆಗೆ 3.5% ಪಾಲನ್ನು ಮಾತ್ರ ಮಾರಾಟ ಮಾಡುವುದಾಗಿ ಹೇಳಿದೆ. ಸುಮಾರು 21 ಕೋಟಿ ಷೇರುಗಳನ್ನು ಮಾರಾಟ ಮಾಡುವ ಮೂಲಕ ಅಂದಾಜು ₹21 ಸಾವಿರ ಕೋಟಿ ಹೂಡಿಕೆ ಗಳಿಸುವ ನಿರೀಕ್ಷೆಯನ್ನು ಎಲ್‌ಐಸಿ ಹೊಂದಿದೆ.

ಗುರುವಾರ ಗ್ರೇ ಮಾರ್ಕೆಟ್‌ನಲ್ಲಿ ಎಲ್‌ಐಸಿ ಮೌಲ್ಯ ₹25 ರಿಂದ ₹50ರ ವರೆಗೆ ಇತ್ತು. ಶುಕ್ರವಾರ ಜಿಎಂಪಿ ₹45 ರಿಂದ ₹80ರವರೆಗೆ ಏರಿಕೆ ಕಂಡಿದೆ. ಅಂದರೆ ಎಲ್‌ಐಸಿ ಐಪಿಒದ ಒಟ್ಟು ಮೌಲ್ಯ ₹950 ರಿಂದ ₹1,100ರಷ್ಟಾಗುವ ಅಂದಾಜಿದೆ.

ಗ್ರೇ ಮಾರ್ಕೆಟ್‌ ಎನ್ನುವುದು ಯಾವುದೇ ಅಧಿಕೃತ ಸಂಸ್ಥೆ ಅಲ್ಲ. ಷೇರು ಹೂಡಿಕೆದಾರರು ಷೇರಿನ ಮೌಲ್ಯವನ್ನು ಅಂದಾಜಿಸುವುದರ ಆಧಾರದಲ್ಲಿ ಈ ಮೌಲ್ಯ ನಿರ್ಧಾರವಾಗುತ್ತದೆ. ಇದು ಅಧಿಕೃತ ಮಾರುಕಟ್ಟೆ ಅಲ್ಲವಾದರೂ ಕಾನೂನುಬಾಹಿರ ಚಟುವಟಿಕೆ ಅಲ್ಲ. ಹಾಗೂ, ಅನೇಕ ಸಂದರ್ಭಗಳಲ್ಲಿ ಜಿಎಂಪಿ ದರಗಳು ಸತ್ಯವೆಂದು ಸಾಬೀತಾಗಿವೆ. ಹೀಗಾಗಿ ಯಾವುದೇ ಐಪಿಒ ಬಿಡುಗಡೆಗೂ ಮುನ್ನ ಜಿಎಂಪಿ ದರಗಳ ಮೇಲೆ ಎಲ್ಲರ ಕಣ್ಣಿರುತ್ತದೆ.

Exit mobile version