ನವ ದೆಹಲಿ: ಭಾರತೀಯ ಜೀವ ವಿಮೆ ನಿಗಮ (Life Insurance Corporation of India) ಬುಧವಾರ ಕಳೆದ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ 13,428 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷ ( LIC Q4 Results) ಇದೇ ಅವಧಿಯಲ್ಲಿ ಸಂಸ್ಥೆ 2,371 ಕೋಟಿ ರೂ. ಲಾಭ ಗಳಿಸಿತ್ತು. ಎಲ್‌ಐಸಿಯ ನಿವ್ವಳ ಲಾಭ 466% ಏರಿಕೆಯಾಗಿದೆ. ಆದರೆ ನಿವ್ವಳ ಪ್ರೀಮಿಯಂ ಆದಾಯ 8% ತಗ್ಗಿದೆ.
ಎಲ್‌ಐಸಿ ಪ್ರತಿ ಷೇರಿಗೆ 10 ರೂ. ಡಿವಿಡೆಂಡ್ ಅನ್ನೂ ಘೋಷಿಸಿದೆ. ಸಂಸ್ಥೆಯ ನಿವ್ವಳ ಪ್ರೀಮಿಯಂ ಆದಾಯ 8% ಇಳಿಕೆಯಾಗಿದ್ದು, 1.31 ಲಕ್ಷ ಕೋಟಿ ರೂ.ಗಳಾಗಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ 1.43 ಲಕ್ಷ ಕೋಟಿ ರೂ. ಸಂಗ್ರಹವಾಗಿತ್ತು.
ಪ್ರೀಮಿಯಂ ಆದಾಯ ಇಳಿಕೆ:
ಎಲ್‌ಐಸಿಯ ಮೊದಲ ವರ್ಷದ ಪ್ರೀಮಿಯಂ 12,811 ಕೋಟಿ ರೂ.ಗಳಾಗಿದ್ದು, 12% ಇಳಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಮೊದಲ ವರ್ಷದ ಪ್ರೀಮಿಯಂ 14,614 ಕೋಟಿ ರೂ.ಗಳಾಗಿತ್ತು. ಹೂಡಿಕೆಯಿಂದ ಆದಾಯ ಕಳೆದ ಜನವರಿ-ಮಾರ್ಚ್ ಅವಧಿಯಲ್ಲಿ 67,846 ಕೋಟಿ ರೂ.ಗಳಾಗಿದ್ದು, ಏರಿಕೆ ದಾಖಲಿಸಿದೆ. ಕಳೆದ ವರ್ಷ ಇದೆ ಅವಧಿಯಲ್ಲಿ 67,498 ಕೋಟಿ ರೂ. ಆದಾಯ ಗಳಿಸಿತ್ತು.
ನಿವ್ವಳ ಕಮಿಶನ್ 5% ಏರಿಕೆಯಾಗಿದ್ದು, 8,428 ಕೋಟಿ ರೂ.ಗೆ ಏರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಇದು 7,996 ಕೋಟಿ ರೂ.ಗಳಾಗಿತ್ತು. ಇಡೀ ವರ್ಷದ ಲೆಕ್ಕದಲ್ಲಿ ಎಲ್‌ಐಸಿಯ ಲಾಭದಲ್ಲಿ 10% ಇಳಿಕೆಯಾಗಿದ್ದು, 36,397 ಕೋಟಿ ರೂ.ಗಳಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 40,431 ಕೋಟಿ ರೂ.ಗಳಾಗಿತ್ತು.
ಕಳೆದ ವರ್ಷ ಸಂಚಲನ ಮೂಡಿಸಿದ್ದ ಎಲ್‌ಐಸಿಯ ಐಪಿಒದಲ್ಲಿ ಹೂಡಿಕೆ ಮಾಡಿದ್ದವರಿಗೆ ಕಳೆದೊಂದು ವರ್ಷದಲ್ಲಿ ಭಾರಿ ನಿರಾಸೆಯಾಗಿದೆ. (LIC Stock) ಹೂಡಿಕೆದಾರರಿಗೆ ಒಂದೇ ವರ್ಷದಲ್ಲಿ 2.5 ಲಕ್ಷ ಕೋಟಿ ರೂ. ನಷ್ಟದ ಆಘಾತ ಎದುರಿಸುವಂತಾಗಿದೆ. (Life Insurance Corporation India-LIC)
2022ರ ಮೇ 17ರಂದು ಎಲ್‌ಐಸಿ ಷೇರು ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ನೋಂದಣಿಯಾಗಿತ್ತು. ಐಪಿಒ ದರ ಪ್ರತಿ ಷೇರಿಗೆ 949 ರೂ. ಆಗಿತ್ತು. ಈ ಮಟ್ಟದಿಂದ ದರದಲ್ಲಿ 40% ಇಳಿಕೆಯಾಗಿದೆ. ಇದರ ಪರಿಣಾಮ ಎಲ್‌ಐಸಿಯ ಮಾರುಕಟ್ಟೆ ಮೌಲ್ಯದಲ್ಲಿ ಒಟ್ಟು 2.5 ಲಕ್ಷ ಕೋಟಿ ರೂ. ನಷ್ಟವಾಗಿದೆ.
ಸರ್ಕಾರ ಈಗಲೂ ಎಲ್‌ಐಸಿಯಲ್ಲಿ 96.5% ಷೇರು ಪಾಲನ್ನು ಹೊಂದಿದೆ. ಮ್ಯೂಚುವಲ್ ಫಂಡ್‌ಗಳು ಮತ್ತು ಎಫ್‌ಐಐಗಳು ಎಲ್‌ಐಸಿಯಲ್ಲಿ ಕಳೆದೊಂದು ವರ್ಷದಲ್ಲಿ ಹೂಡಿಕೆಯನ್ನು ತಗ್ಗಿಸಿವೆ. ಎಲ್‌ಐಸಿಯಲ್ಲಿ ರಿಟೇಲ್ ಹೂಡಿಕೆದಾರರ ಸಂಖ್ಯೆಯೂ ಇಳಿದಿದೆ.
ಇದನ್ನೂ ಓದಿ: LIC Stock : ಎಲ್‌ಐಸಿ ಷೇರು ಹೂಡಿಕೆದಾರರಿಗೆ ಒಂದೇ ವರ್ಷದಲ್ಲಿ 2.5 ಲಕ್ಷ ಕೋಟಿ ರೂ. ಭಾರಿ ನಷ್ಟ