Site icon Vistara News

Consumer Court : ಪೇಪರ್​ ಬ್ಯಾಗ್​ಗೆ 7 ರೂಪಾಯಿ ಪಡೆದಿದ್ದ ಬಟ್ಟೆ ಮಳಿಗೆಗೆ ಬಿತ್ತು 3000 ರೂ. ದಂಡ!

LifeStyle Mall

ನವದೆಹಲಿ: ಭಾರತದ ಅತಿದೊಡ್ಡ ಬಟ್ಟೆ ಮಳಿಗೆಗಳಲ್ಲಿ ಒಂದಾಗಿರುವ ಲೈಫ್​ಸ್ಟೈಲ್​​ ಸಣ್ಣ ಕಾರಣವೊಂದಕ್ಕೆ ಗ್ರಾಹಕರಿಗೆ 3000 ರೂಪಾಯಿ ದಂಡ ಪಾವತಿ ಮಾಡುವಂತಾಗಿದೆ. ಬಟ್ಟೆ ಮಳಿಗೆ ಪಾಲಿಗೆ ಇದು ಸಣ್ಣ ವಿಚಾರವಾದರೂ ಗ್ರಾಹಕ ಕಾನೂನಿನ ಪಾಲಿಗೆ ದೊಡ್ಡ ಜಯ. ಹೇಗೆಂದರೆ ಬಟ್ಟೆ ಮಳಿಗೆಯು ಗ್ರಾಹಕರಿಗೆ ತಿಳಿಯದೆ ಕಾಗದದ ಶಾಪಿಂಗ್​ ಚೀಲಕ್ಕೆ 7 ರೂ.ಗಳನ್ನು ವಿಧಿಸಿತ್ತು. ಅದು ಸರಿಯಾದ ಕ್ರಮವಲ್ಲ ಎಂದು ಅಭಿಪ್ರಾಯಪಟ್ಟ ಗ್ರಾಹಕ ನ್ಯಾಯಾಲಯ (Consumer Court) 3,000 ರೂ.ಗಳ ಪರಿಹಾರವನ್ನು ಪಾವತಿಸುವಂತೆ ಹೇಳಿದೆ.

ದೆಹಲಿ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ (ಡಿಸಿಡಿಆರ್​​ಸಿ ) ಈ ಆದೇಶ ಹೊರಡಿಸಿದೆ. 2020ರ ಡಿಸೆಂಬರ್​ನಲ್ಲಿ ಗ್ರಾಹಕರಿಗೆ ಗೊತ್ತಿಲ್ಲದೇ ಕಾಗದದ ಶಾಪಿಂಗ್ ಚೀಲಕ್ಕಾಗಿ ಶುಲ್ಕ 7 ವಿಧಿಸಿದ್ದಕ್ಕಾಗಿ ಅವರಿಗೆ 3,000 ರೂ.ಗಳ ಪರಿಹಾರ ಪಾವತಿಸುವಂತೆ ಸೂಚಿಸಿದೆ.

“ಕ್ಯಾರಿ ಬ್ಯಾಗ್​ಗ್​ಗಳಿಗೆ, ವಿಶೇಷವಾಗಿ ಔಟ್​ಲೆಟ್​ಗಳಿಂದ ಖರೀದಿಸಿದ ವಸ್ತುಗಳ ಬ್ಯಾಗ್​ಗೆ ದರ ವಿಧಿಸಬಾರದು. ಬ್ಯಾಗ್​ಗೆ ಗ್ರಾಹಕರಿಂದ ಯಾವುದೇ ಶುಲ್ಕ ವಿಧಿಸುವುದು ಸೇವೆಯ ಕೊರತೆಯಾಗುತ್ತದೆ ಎಂದು ಆಯೋಗ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ದೂರುದಾರ ಅನ್ಮೋಲ್ ಮಲ್ಹೋತ್ರಾ ಅವರು ತಮಗೆ ತಿಳಿಯದಂತೆ ಕಾಗದದ ಚೀಲಕ್ಕಾಗಿ ಶುಲ್ಕ ವಿಧಿಸಿದ್ದು ತಮ್ಮ ಶಾಪಿಂಗ್ ಅನುಭವಕ್ಕೆ ಧಕ್ಕೆ ಎಂದು ಹೇಳಿದ್ದಾರೆ. ಹೀಗಾಗಿ ಲೈಫ್​ಸ್ಟೈಲ್​ ಹೆಚ್ಚುವರಿ ಶುಲ್ಕಗಳನ್ನು ವಿಧಿಸಿದಂತಾಗಿದೆ. ಇದು ಗ್ರಾಹಕರಿಗೆ ಅನಾನುಕೂಲತೆಯನ್ನುಂಟು ಮಾಡಿದೆ ಎಂದು ಕೋರ್ಟ್​ ಹೇಳಿದೆ.

ಇದನ್ನೂ ಓದಿ : LPG Subsidy: ಎಲ್‌ಪಿಜಿ ಸಬ್ಸಿಡಿ ಸಿಗಬೇಕೆಂದರೆ ಡಿಸೆಂಬರ್‌ 31ರೊಳಗೆ ಈ ಕೆಲಸ ಮಾಡಲೇಬೇಕು!

ಲೈಫ್​ಸ್ಟೈಲ್​ನಂಥ ಬಟ್ಟೆ ಮಾರುಕಟ್ಟೆ ಮಳಿಗೆಗಳು ತಮ್ಮ ಗ್ರಾಹಕರಿಗೆ ಮುಂಚಿತವಾಗಿ ತಿಳಿಸದೆ. ಕ್ಯಾರಿ ಬ್ಯಾಗ್ ಗೆ ಹೆಚ್ಚುವರಿ ಶುಲ್ಕ ವಿಧಿಸಬಹುದೇ ಎಂಬ ಅಂಶವನ್ನೂ ನ್ಯಾಯಾಲಯ ಪರಿಗಣನೆಗೆ ತೆಗೆದುಕೊಂಡಿತು. ಭಾರತದಾದ್ಯಂತ ಪ್ಲಾಸ್ಟಿಕ್ ಚೀಲಗಳನ್ನು ನಿಷೇಧಿಸಿದಾಗಿನಿಂದ, ಲೈಫ್​ಸ್ಟೈಲ್​ ಸೇರಿದಂತೆ ಹಲವು ಚಿಲ್ಲರೆ ಮಳಿಗೆಗಳು ಕಾಗದದ ಕ್ಯಾರಿ ಬ್ಯಾಗ್​ಗಳಿಗೆ ಗ್ರಾಹಕರಿಗೆ ಶುಲ್ಕ ವಿಧಿಸಲು ಪ್ರಾರಂಭಿಸಿವೆ. ಆದಾಗ್ಯೂ, ಗ್ರಾಹಕರು ಬಿಲ್ಲಿಂಗ್ ಕೌಂಟರ್ ನಲ್ಲಿದ್ದಾಗ ಹೆಚ್ಚುವರಿ ಶುಲ್ಕಗಳ ಬಗ್ಗೆ ತಿಳಿಸಬೇಕಾಗುತ್ತದೆ.

ದೂರುದಾರರ ಪರವಾಗಿ ತೀರ್ಪು ನೀಡಿದ ಆಯೋಗವು, ಯಾವುದೇ ಗ್ರಾಹಕರಿಗೆ ಮುಂಚಿತವಾಗಿ ತಿಳಿಸದೆ ಕಾಗದದ ಚೀಲಕ್ಕಾಗಿ ಶುಲ್ಕ ವಿಧಿಸಲು ಅವಕಾಶವಿಲ್ಲ ಎಂದು ಹೇಳಿದೆ.

“ಪಾವತಿ ಮಾಡುವ ಸಮಯದಲ್ಲಿ ದರ ವಿಧಿಸುವ ಮಾಹಿತಿಯು ಗ್ರಾಹಕರಿಗೆ ಕಿರುಕುಳವನ್ನುಂಟು ಮಾಡುತ್ತದೆ. ಹೆಚ್ಚುವರಿ ವೆಚ್ಚದ ಹೊರೆಯನ್ನು ಹೊರಿಸುತ್ತದೆ. ನಿರ್ದಿಷ್ಟ ಮಳಿಗೆಯನ್ನು ಆಯ್ಕೆ ಮಾಡಬೇಕೇ ಅಥವಾ ಬೇಡವೇ ಎಂಬ ನಿರ್ಧಾರವನ್ನು ತೆಗೆದುಕೊಳ್ಳುವ ಅವರ ಹಕ್ಕುಗಳ ಮೇಲೆ ಪರಿಣಾಮ ಬೀರುತ್ತದೆ” ಎಂದು ಡಿಸಿಡಿಆರ್​ಸಿ ಹೇಳಿದೆ.

Exit mobile version