Site icon Vistara News

Liquid Nitrogen Paan: ನೀವು ಲಿಕ್ವಿಡ್ ನೈಟ್ರೋಜನ್‌ ಪಾನ್‌ ಸೇವಿಸ್ತೀರಾ? ಹಾಗಿದ್ರೆ ಎಚ್ಚರ.. ಎಚ್ಚರ

Liquid Nitrogen Paan

ಬೆಂಗಳೂರು: ಪಾನ್‌(ಬೀಡಾ)(Liquid Nitrogen Paan) ಸೇವಿಸೋದಂದ್ರೆ ಬಹುತೇಕ ಎಲ್ಲರಿಗೂ ಇಷ್ಟ ಇರುತ್ತದೆ. ಮೊದಲೆಲ್ಲಾ ವಯಸ್ಸಾದವರು ಪಾನ್‌ ಸೇವಿಸೋ ಅಭ್ಯಾಸ ಇಟ್ಟುಕೊಂಡಿದ್ದರು. ಈಗೀಗ ಯುವಕರೂ ಪಾನ್‌ ಹಾಕುವ ಶೋಕಿ ರೂಢಿಸಿಕೊಂಡಿದ್ದಾರೆ. ಇದೀಗ ಬಾಲಕಿಯೊಬ್ಬಳು ಪಾನ್‌ ಸೇವಿಸಿ ಪ್ರಾಣಕ್ಕೆ ಅಪಾಯವನ್ನು ತಂದೊಡ್ಡಿಕೊಂಡಿದ್ದಾಳೆ. ಬೆಂಗಳೂರಿ(Bangalore)ನಲ್ಲಿ ಈ ಘಟನೆ ನಡೆದಿದ್ದು, ಮದುವೆಯ ಆರತಕ್ಷತೆ ಸಮಾರಂಭದಲ್ಲಿ 12 ವರ್ಷದ ಬಾಲಕಿಯೊಬ್ಬಳು ಲಿಕ್ವಿಡ್ ನೈಟ್ರೋಜನ್ ತುಂಬಿದ ಪಾನ್ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾಳೆ.

ಘಟನೆ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ನಡೆದಿದ್ದು, ಆಕೆಯ ಹೊಟ್ಟೆಯಲ್ಲಿ ರಂಧ್ರವಾಗಿರುವುದನ್ನು ವೈದ್ಯರು ಗಮನಿಸಿ ಶಾಕ್‌ ಆಗಿದ್ದಾರೆ. ಬಾಯಲ್ಲಿ ಹಾಕಿದ ಕೂಡಲೇ ಹೊಗೆ ತರಿಸುವ ಈ ಲಿಕ್ವಿಡ್ ನೈಟ್ರೋಜನ್ ಪಾನ್ ಇತ್ತೀಚೆಗೆ ಟ್ರೆಂಡ್ ಆಗಿದೆ. ಆದರೆ, ಟ್ರೆಂಡಿ ಫುಡ್‌ಗಳು ಕೆಲವೊಮ್ಮೆ ಹೇಗೆ ಪ್ರಾಣಕ್ಕೆ ಕುತ್ತಾಗಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ..

ಬಾಲಕಿಯನ್ನು ಇಂಟ್ರಾಆಪರೇಟಿವ್ OGD ಸ್ಕೋಪಿಯೊಂದಿಗೆ ಪರಿಶೋಧನಾತ್ಮಕ ಲ್ಯಾಪರೊಟಮಿಗೆ ಒಳಪಡಿಸಲಾಯಿತು. ಅಲ್ಲಿ ಅನ್ನನಾಳ, ಹೊಟ್ಟೆ ಮತ್ತು ಡ್ಯುವೋಡೆನಮ್ ಅನ್ನು ಪರೀಕ್ಷಿಸಲು ಎಂಡೋಸ್ಕೋಪ್ ಬಳಸಲಾಯಿತು. ಈ ಸಂದರ್ಭದಲ್ಲಿ ಹೊಟ್ಟೆಯಲ್ಲಿ ಸುಮಾರು 4×5 ಸೆಂ.ಮೀ ಅಳತೆಯ ಅನಾರೋಗ್ಯಕರ ಪ್ಯಾಚ್ ಕಂಡುಬಂದಿದೆ. ಇದೀಗ ಶಸ್ತ್ರ ಚಿಕಿತ್ಸೆ ಯಶಸ್ವಿ ಆಗಿದ್ದು, ಬಾಲಕಿ ವೈದ್ಯರ ನಿಗಾದಲ್ಲಿದ್ದಾಳೆ.

ಏನಿದು ಲಿಕ್ವಿಡ್‌ ನೈಟ್ರೋಜನ್‌ ಪಾನ್‌?

ಬಾಯಲ್ಲಿ ಪಾನ್ ಹಾಕಿಕೊಂಡ ಕೂಡಲೇ ಹೊಗೆ ಬರುವಂತಹ ಟ್ರೆಂಡಿ ಪಾನ್‌ ಈ ಲಿಕ್ವಿಡ್ ನೈಟ್ರೋಜನ್ ಪಾನ್. ಪಾನ್‌ನಲ್ಲಿ ದ್ರವರೂಪದಲ್ಲಿ ಸಾರಜನಕವನ್ನು ತುಂಬಲಾಗುತ್ತದೆ. ಇದನ್ನು ಸೇವಿಸಿದಾಗ ಬಾಯಲ್ಲಿ ಹೊಗೆ ಬರಲು ಶುರು ಆಗುತ್ತದೆ. ಇದು ಬಾಯಿಯ ಚರ್ಮವನ್ನು ಹಾನಿಗೊಳಿಸುತ್ತದೆ ಮತ್ತು ತೀವ್ರ ಆರೋಗ್ಯ ಸಮಸ್ಯೆಯನ್ನುಂಟು ಮಾಡುತ್ತದೆ. ಈ ಆವಿಯನ್ನು ಉಸಿರಾಡುವುದರಿಂದ ಉಸಿರಾಟದ ಸಮಸ್ಯೆ ಎದುರಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಲಿಕ್ವಿಡ್ ನೈಟ್ರೋಜನ್ ಜಗತ್ತಿನಲ್ಲಿಯೇ ಅತಿ ತಣ್ಣನೆಯ ವಸ್ತುವಾಗಿದ್ದು, ಅದನ್ನು ಸಾರಜನಕದ ದ್ರವೀಕರಣದಿಂದ ಮಾಡಲಾಗುತ್ತದೆ. ಅದರ ತಂಪಿನಲ್ಲಿ ಎಷ್ಟೊಂದು ತೀಕ್ಷ್ಣತೆ ಇರುತ್ತದೆ ಎಂದರೆ ಅಂಗೈ ಮೇಲೆ ಸುರಿದುಕೊಂಡರೆ ಅಂಗೈ ತೂತಾಗುತ್ತದೆ. ಇದನ್ನು ಸೇವಿಸುವುದರಿಂದ ಇದು ಅಂಗಾಂಶಗಳಿಗೆ ಆಮ್ಲಜನಕದ ಪೂರೈಕೆಯನ್ನು ಕಡಿತಗೊಳಿಸುವ ಮೂಲಕ ಉಸಿರುಕಟ್ಟುವಿಕೆಗೆ ಕಾರಣವಾಗುತ್ತದೆ. ಸ್ಮೋಕ್‌ ಬಿಸ್ಕತ್‌, ಬಿಯರ್‌, ಐಸ್‌ ಕ್ರೀಂಗಳಲ್ಲಿ ಇದನ್ನು ಬಳಸಲಾಗುತ್ತಿದೆ. ಈಗಾಗಲೇ ತಮಿಳುನಾಡು ಇದರ ನೇರ ಬಳಕೆಯನ್ನು ನಿಷೇಧಿಸಿದ್ದು, ಕರ್ನಾಟಕದಲ್ಲೂ ಬ್ಯಾನ್ ಮಾಡುವಂತೆ ಹಲವರು ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ:Mrs India Karnataka: ಮಿಸಸ್ ಕರ್ನಾಟಕ ಮಂಗಳೂರು ಗ್ರ್ಯಾಂಡ್ ಫಿನಾಲೆ; ಸಾಂಪ್ರದಾಯಿಕ, ಮಾಡರ್ನ್ ಉಡುಗೆಯಲ್ಲಿ ಮಿಂಚಿದ ನಾರಿಯರು

ಕೆಲವು ತಿಂಗಳ ಹಿಂದೆ ದಾವಣಗೆರೆಯಲ್ಲೂ ಇಂತಹದ್ದೇ ಒಂ ಘಟನೆ ವರದಿ ಆಗಿತ್ತು. ವಸ್ತುಪ್ರದರ್ಶನದಲ್ಲಿ ಬಾಲಕನೊಬ್ಬ ‘ಸ್ಮೋಕ್ ಬಿಸ್ಕೆಟ್’ ಸೇವಿಸಿದ ಬಳಿಕ ಅತೀವ್ರ ಹೊಟ್ಟೆನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದ. ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಘಟನೆ ಬಳಿಕ ಲಿಕ್ವಿಡ್ ನೈಟ್ರೋಜನ್ ಬಳಕೆ ನಿಷೇಧ ಕುರಿತು ಹಲವರು ದ್ವನಿಯೆತ್ತಿದ್ದರು. ಇದರ ಬೆನ್ನಲ್ಲೇ ತಮಿಳುನಾಡು ಸರ್ಕಾರ ಅದನ್ನು ಬ್ಯಾನ್‌ ಮಾಡಿತ್ತು.

Exit mobile version