ಭೋಪಾಲ್: ಗಂಡ-ಹೆಂಡತಿ ವಿಚ್ಛೇದನ (Divorce) ಪಡೆದ ನಂತರ, ಗಂಡನು ಹೆಂಡತಿಗೆ ಮಾಸಿಕವಾಗಿ ಇಂತಿಷ್ಟು ಜೀವನಾಂಶ ಕೊಡಬೇಕು ಎಂಬುದಾಗಿ ಕೋರ್ಟ್ ಆದೇಶಿಸುತ್ತದೆ. ಅದರಂತೆ ಮಾಜಿ ಗಂಡನು ಮಾಜಿ ಹೆಂಡತಿಗೆ ಮಾಸಿಕವಾಗಿ ಜೀವನಾಂಶ ನೀಡುತ್ತಾನೆ. ಆದರೆ, ಲಿವ್ ಇನ್ ರಿಲೇಷನ್‌ಶಿಪ್ (Live In Relationship) ಸಂಬಂಧದಲ್ಲಿದ್ದು, ಬ್ರೇಕ್ ಆದ ಬಳಿಕ ಯುವಕನು ಮಾಜಿ ಪ್ರೇಯಸಿಗೆ ಜೀವನಾಂಶ ನೀಡಬೇಕು ಎಂದು ಮಧ್ಯಪ್ರದೇಶ ಹೈಕೋರ್ಟ್ (Madhya Pradesh High Court) ಆದೇಶಿಸಿದೆ. ಇದು ಈಗ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿರುವವರಲ್ಲಿ ಆತಂಕ ಮೂಡಿಸಿದೆ.
ಹೌದು, ವ್ಯಕ್ತಿಯೊಬ್ಬರು ಲಿವ್ ಇನ್ ರಿಲೇಷನ್‌ಶಿಪ್ ಬ್ರೇಕಪ್ ಆದ ಬಳಿಕವೂ ಮಹಿಳೆಗೆ ಮಾಸಿಕ 1,500 ರೂ. ಜೀವನಾಂಶ ನೀಡಬೇಕು ಎಂದು ಅಧೀನ ನ್ಯಾಯಾಲಯ ನೀಡಿದ ತೀರ್ಪು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದರು. ಈಗ ಹೈಕೋರ್ಟ್ ಕೂಡ ಮಾಸಿಕ 1,500 ರೂ. ನೀಡಬೇಕು ಎಂಬುದಾಗಿ ವ್ಯಕ್ತಿಗೆ ಆದೇಶಿಸಿದೆ. ಇದು ಈಗ ವ್ಯಕ್ತಿಗೆ ಲಿವ್ ಇನ್ ಸಂಬಂಧ ಬ್ರೇಕಪ್ ಆದ ದುಃಖಕ್ಕಿಂತ ಪರಿಹಾರ ನೀಡಬೇಕು ಎಂಬ ತೀರ್ಪೇ ಜಾಸ್ತಿ ದುಃಖ ತಂದಿದೆ ಎಂದು ಹೇಳಲಾಗುತ್ತಿದೆ.
ಜೀವನಾಂಶ ಯಾವಾಗ ಕೊಡಬೇಕು?
“ಯಾವುದೇ ಒಬ್ಬ ವ್ಯಕ್ತಿಯು ಇನ್ನೊಬ್ಬ ಮಹಿಳೆಯ ಜತೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದು, ಇಬ್ಬರೂ ಲೈಂಗಿಕ ಸಂಪರ್ಕ ಹೊಂದಿದ್ದರೆ ಆಗ ವ್ಯಕ್ತಿಯು ಬ್ರೇಕಪ್ ಬಳಿಕ ಜೀವನಾಂಶ ಕೊಡಬೇಕು” ಎಂದು ಸ್ಪಷ್ಟಪಡಿಸಿತು. ಅದರಲ್ಲೂ, ಮಧ್ಯಪ್ರದೇಶ ವ್ಯಕ್ತಿಯ ಪ್ರಕರಣದಲ್ಲಿ ಅಧೀನ ನ್ಯಾಯಾಲಯದ ವಿಶೇಷ ಪ್ರಸ್ತಾಪವನ್ನು ಹೈಕೋರ್ಟ್ ಗಮನ ಸೆಳೆಯಿತು. “ಇಬ್ಬರೂ ಗಂಡ-ಹೆಂಡತಿ ರೀತಿಯೇ ಹಲವು ವರ್ಷಗಳಿಂದ ವಾಸಿಸುತ್ತಿದ್ದಾರೆ. ಇಬ್ಬರೂ ಸಂಬಂಧದಲ್ಲಿದ್ದಾಗ ಮಗು ಕೂಡ ಜನಿಸಿದೆ. ಹಾಗಾಗಿ, ಪರಿಹಾರ ನೀಡಬೇಕು” ಎಂಬುದಾಗಿ ಕೋರ್ಟ್ ತಿಳಿಸಿದೆ.
ಲಿವ್ ಇನ್ ಸಂಬಂಧದ ಕುರಿತು ಮಧ್ಯಪ್ರದೇಶ ಹೈಕೋರ್ಟ್ ನೀಡಿದ ತೀರ್ಪು ಈಗ ಜನರಿಂದ ಮೆಚ್ಚುಗೆಗೆ ವ್ಯಕ್ತವಾಗಿದೆ. ಮದುವೆಯಾಗದೆ, ಇಬ್ಬರೂ ಒಟ್ಟಿಗೆ ವಾಸಿಸುವ ವೇಳೆ ಲೈಂಗಿಕ ಸಂಪರ್ಕ ಸಾಧಿಸಿ, ನಂತರ ಇಬ್ಬರೂ ಬೇರೆಯಾದಾಗ ಮಹಿಳೆಗೆ ಮಾಸಿಕ ಜೀವನಾಂಶ ಕೊಡುವುದು ಹೆಣ್ಣುಮಕ್ಕಳ ಹಕ್ಕುಗಳ ರಕ್ಷಣೆ ಮಾಡಿದಂತೆ ಎಂಬುದಾಗಿ ವಿಶ್ಲೇಷಿಸಲಾಗಿದೆ. ಮತ್ತೊಂದು ಗಮನಾರ್ಹ ಸಂಗತಿ ಎಂದರೆ, ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ರೂಪಿಸಲಾಗಿದ್ದು, ಅದರಲ್ಲಿ ಮದುವೆ, ವಿಚ್ಛೇದನದ ಜತೆಗೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿರುವವರು ಕೂಡ ನೋಂದಣಿ ಮಾಡಿಕೊಳ್ಳಬೇಕು ಎಂಬ ನಿಯಮ ರೂಪಿಸಿದೆ.
ಇದನ್ನೂ ಓದಿ: ಲಿವ್ ಇನ್ ಪಾರ್ಟ್‌ನರ್‌ನನ್ನೇ ಕೊಂದು ಪೊಲೀಸರಿಗೆ ಕರೆ ಮಾಡಿದಳು ಕೊಲೆಗಾತಿ! ಮುಂದೇನಾಯ್ತು?