Site icon Vistara News

LK Advani: ಭಾರತ ರತ್ನ ಘೋಷಣೆಯಾಗುತ್ತಿದ್ದಂತೆ ಭಾವುಕರಾದ ಅಡ್ವಾಣಿ; ಗಣ್ಯರಿಂದ ಶುಭಾಶಯಗಳ ಮಹಾಪೂರ

prathibha advani

prathibha advani

ನವದೆಹಲಿ: ಅಯೋಧ್ಯೆಯ ರಾಮ ಜನ್ಮಭೂಮಿ ಚಳವಳಿಯ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದ ಹಿರಿಯ ನಾಯಕ ಲಾಲ್‌ ಕೃಷ್ಣ ಅಡ್ವಾಣಿ (LK Advani) ಅವರಿಗೆ ಭಾರತ ರತ್ನ ಘೋಷಿಸಲಾಗಿದೆ. ಈ ಸುದ್ದಿಯನ್ನು ಕೇಳಿ ಎಲ್‌.ಕೆ.ಆಡ್ವಾಣಿ ಭಾವುಕರಾಗಿದ್ದಾರೆ. ಈ ವೇಳೆ ಜತೆಗಿದ್ದ ಪುತ್ರಿ ಪ್ರತಿಭಾ ಅಡ್ವಾಣಿ ಅವರು ತಂದೆಗೆ ಸಿಹಿ ತಿನ್ನಿಸಿ ಸಂತಸದ ಕ್ಷಣದಲ್ಲಿ ಭಾಗಿಯಾಗಿದ್ದಾರೆ. ಅಡ್ವಾಣಿ ಅವರು ದೇಶದ ಜನತೆಗೆ ಕೈ ಮುಗಿದು ಧನ್ಯವಾದ ಅರ್ಪಿಸಿದ್ದಾರೆ.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರತಿಭಾ ಅಡ್ವಾಣಿ, ʼʼತಂದೆ ಸಂತಸದ ಕ್ಷಣಗಳನ್ನು ಅನುಭವಿಸುತ್ತಿದ್ದಾರೆ. ಅವರು ಮಿತಭಾಷೆ. ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆ ಅವರ ಕಣ್ಣಿನಲ್ಲಿ ನೀರು ಕಂಡು ಬಂತು. ಅವರು ತಮ್ಮ ಜೀವನವನ್ನೇ ರಾಷ್ಟ್ರಕ್ಕಾಗಿ ಮುಡಿಪಿಟ್ಟಿದ್ದಾರೆ. ಪ್ರಶಸ್ತಿ ಘೋಷಣೆಯಿಂದ ನಮಗೆ ತುಂಬಾ ಸಂತೋಷವಾಗಿದೆ. ಅಡ್ವಾಣಿ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ದೇಶದ ಜನತೆಗೆ ಧನ್ಯವಾದ ಅರ್ಪಿಸಿದ್ದಾರೆʼʼ ಎಂದು ಹೇಳಿದ್ದಾರೆ.

ಇತ್ತ ಅಡ್ವಾಣಿ ಅವರ ಪುತ್ರ ಜಯಂತ್‌ ಅಡ್ವಾಣಿ ಪ್ರತಿಕ್ರಿಯಿಸಿ, ʼʼಇದು ನಮ್ಮ ಕುಟುಂಬ ಮತ್ತು ದೇಶದ ಎಲ್ಲರಿಗೂ ಸಂತೋಷದ ವಿಷಯ. ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆಯೂ ನೆರವೇರಿದೆ. ಇದೀಗ ಅಡ್ವಾಣಿ ಅವರಿಗೆ ಭಾರತ ರತ್ನ ಘೋಷಿಸಿರುವುದು ಸಂತಸ ತಂದಿದೆʼʼ ಎಂದು ತಿಳಿಸಿದ್ದಾರೆ.

ಗಣ್ಯರಿಂದ ಅಭಿನಂದೆ

ಭಾರತ ರತ್ನ ಅಡ್ವಾಣಿ ಅವರಿಗೆ ರಾಜಕೀಯ ನಾಯಕರು, ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕ ಪ್ರಮುಖ ರಾಜಕಾರಣಿಗಳು ಶುಭಾಶಯ ತಿಳಿಸಿದ್ದಾರೆ. ʼʼನಮ್ಮೆಲ್ಲರಿಗೂ ಸ್ಫೂರ್ತಿ ಮತ್ತು ದೇಶದ ಹಿರಿಯ ನಾಯಕರಾದ ಲಾಲ್‌ಕೃಷ್ಣ ಅಡ್ವಾಣಿ ಅವರಿಗೆ ಭಾರತ ರತ್ನ ನೀಡುವ ನಿರ್ಧಾರವು ಬಹಳ ಸಂತಸ ತಂದಿದೆ. ಅವರು ರಾಜಕೀಯದಲ್ಲಿ ಪರಿಶುದ್ಧತೆ, ಸಮರ್ಪಣೆ ಮತ್ತು ದೃಢನಿಶ್ಚಯದ ಸಂಕೇತವಾಗಿದ್ದಾರೆ. ಅಡ್ವಾಣಿ ಅವರು ತಮ್ಮ ಸುದೀರ್ಘ ಸಾರ್ವಜನಿಕ ಜೀವನದಲ್ಲಿ ವಿವಿಧ ಪಾತ್ರಗಳಲ್ಲಿ ದೇಶದ ಅಭಿವೃದ್ಧಿ ಮತ್ತು ರಾಷ್ಟ್ರ ನಿರ್ಮಾಣಕ್ಕೆ ನೀಡಿದ ಮಹತ್ವದ ಕೊಡುಗೆ ಅವಿಸ್ಮರಣೀಯ ಮತ್ತು ಸ್ಫೂರ್ತಿದಾಯಕ” ಎಂದು ಎಕ್ಸ್‌ ಮೂಲಕ ತಿಳಿಸಿದ್ದಾರೆ.

ಸಚಿವ ಕಿರಣ್‌ ರಿಜಿಜು ಎಕ್ಸ್‌ ಮೂಲಕ ಶುಭಾಶಯ ಕೋರಿ, ʼʼಅಡ್ವಾಣಿ ಅವರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತಿದ್ದೇನೆ. ಅವರು ಕೋಟ್ಯಂತರ ಮಂದಿಗೆ ಸ್ಫೂರ್ತಿ. ನಮ್ಮಂತಹ ನೂರಾರು ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದ್ದಾರೆ. ಒಬ್ಬ ಯುವ ಸಂಸದನಾಗಿ, ಲೋಕಸಭೆಯಲ್ಲಿ ನನ್ನ ಕರ್ತವ್ಯವನ್ನು ನಿರ್ವಹಿಸುವಲ್ಲಿ ನಾನು ಅವರಿಂದ ಸಾಕಷ್ಟು ಸ್ಫೂರ್ತಿ ಪಡೆದಿದ್ದೇನೆ” ಎಂದು ಬರೆದುಕೊಂಡಿದ್ದಾರೆ.

“ದೇಶದ ಹಿರಿಯ ನಾಯಕ ಮತ್ತು ನಮ್ಮ ಮಾರ್ಗದರ್ಶಿ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತ ರತ್ನ ಘೋಷಿಸಿರುವುದು ತುಂಬಾ ಸಂತೋಷದ ವಿಷಯ. ಸ್ವಾತಂತ್ರ್ಯದ ನಂತರ ದೇಶದ ಪುನರ್‌ನಿರ್ಮಾಣದಲ್ಲಿ ಅಡ್ವಾಣಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ರಾಜಕೀಯದಲ್ಲಿ ಪರಿಶುದ್ಧತೆಗೆ ಅಡ್ವಾಣಿ ಅವರೇ ಉದಾಹರಣೆ’ʼ ಎಂದು ಸಚಿವ ನಿತಿನ್‌ ಗಡ್ಕರಿ ಬರೆದುಕೊಂಡಿದ್ದಾರೆ.

ಗೃಹ ಸಚಿವ ಅಮಿತ್‌ ಶಾ ಎಕ್ಸ್‌ ಮೂಲಕ ಬರೆದುಕೊಂಡು, ʼʼದೇಶಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟ ಅಡ್ವಾಣಿ ಅವರಿಗೆ ಭಾರತ ರತ್ನ ಘೋಷಿಸಿರುವುದು ಸಂತಸ ತಂದಿದೆ. ಪಕ್ಷ ಮತ್ತು ಸಿದ್ಧಾಂತಕ್ಕೆ ಅವರು ನೀಡಿದ ಅಪಾರ ಕೊಡುಗೆಯನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ” ಎಂದು ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: LK Advani: ಆಡ್ವಾಣಿಗೆ ಭಾರತ ರತ್ನ; ಕೊಟ್ಟುಕೊಳ್ಳಲಿ, ನಾವೇನು ಬೇಡ ಎಂದಿಲ್ಲ ; ಆದರೆ.., ಎಂದ ಸಿದ್ದರಾಮಯ್ಯ

ಇವರ ಜತೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಛತ್ತೀಸ್‌ಗಢ ಸ್ಪೀಕರ್‌ ರಮಣ್‌ ಸಿಂಗ್‌, ತೆಲುಗು ದೇಶಂ ಪಾರ್ಟಿ ಮುಖಂಡ ಚಂದ್ರಬಾಬು ನಾಯ್ಡು ಮತ್ತಿತರರು ಕೂಡ ಅಡ್ವಾಣಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version