Site icon Vistara News

LK Advani: ಭಾರತ ರತ್ನ ಎಲ್​ ಕೆ ಅಡ್ವಾಣಿ ಅಭಿನಂದಿಸಿದ ಆತ್ಮೀಯ ಒಡನಾಡಿ ಜೋಶಿ; ಇಲ್ಲಿದೆ ವಿಡಿಯೊ

manohara joshi

manohara joshi

ನವದೆಹಲಿ: ಅಯೋಧ್ಯೆ ರಾಮ ಮಂದಿರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ, ದೇಶದ ಶ್ರೇಷ್ಠ ಮುತ್ಸದ್ದಿಗಳಲ್ಲಿ ಒಬ್ಬರಾದ, ಬಿಜೆಪಿಯ ಜ್ಯೇಷ್ಠ ನಾಯಕ, ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ (LK Advani) ಅವರಿಗೆ ಭಾರತ ರತ್ನ (Bharat Ratna) ಘೋಷಿಸಲಾಗಿದೆ. ಇದರಿಂದ ಬಿಜೆಪಿಯ ಸಾವಿರಾರು ಕಾರ್ಯಕರ್ತ ಪುಳಕಿತರಾಗಿದ್ದಾರೆ. ಸ್ವತಃ ಅಡ್ವಾಣಿ ಅವರೇ ಭಾರತ ರತ್ನ ಘೋಷಣೆ ವೇಳೆ ಭಾವುಕರಾಗಿದ್ದರು. ಇದೀಗ ಅವರ ಒಡನಾಡಿ, ಹಿರಿಯ ಬಿಜೆಪಿ ನಾಯಕ ಮುರಳಿ ಮನೋಹರ ಜೋಶಿ ದಿಲ್ಲಿಯಲ್ಲಿ ಅಡ್ವಾಣಿ ಅವರ ನಿವಾಸಕ್ಕೆ ತೆರಳಿ ಅಭಿನಂದನೆ ಸಲ್ಲಿಸಿದ್ದಾರೆ.

ಹೂ ಗುಚ್ಛ ನೀಡಿ ಅಡ್ವಾಣಿ ಅವರಿಗೆ ಶುಭಾಶಯ ತಿಳಿಸಿದ ಬಳಿಕ ಮುರಳಿ ಮನೋಹರ ಜೋಶಿ ಮಾತನಾಡಿ, ಅಟಲ್ ಬಿಹಾರಿ ವಾಜಪೇಯಿ, ನಾನಾಜಿ ದೇಶಮುಖ್ ಮತ್ತು ಎಲ್.ಕೆ.ಅಡ್ವಾಣಿ ಅವರೊಂದಿಗೆ ಕೆಲಸ ಮಾಡಿರುವ ಅನುಭವವನ್ನು ಹಂಚಿಕೊಂಡಿದ್ದಾರೆ.

“ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತ ರತ್ನ ಘೋಷಿಸಿರುವುದಕ್ಕೆ ತುಂಬ ಸಂತೋಷವಾಗಿದೆ. ಇದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. ಅಟಲ್ ಜಿ, ನಾನಾಜಿ ದೇಶಮುಖ್ ಮತ್ತು ಅಡ್ವಾಣಿ ಜಿ ಅವರೊಂದಿಗೆ 60 ವರ್ಷಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡುವ ಅದೃಷ್ಟ ನನಗೆ ಸಿಕ್ಕಿದೆʼʼ ಎಂದು 90 ವರ್ಷದ ಮುರಳಿ ಮನೋಹರ್ ಜೋಶಿ ತಿಳಿಸಿದ್ದಾರೆ. ಈ ಹಿಂದೆ ಅಡ್ವಾಣಿ ಅವರು ಆಯೋಜಿಸಿದ್ದ ಅಯೋಧ್ಯೆ ರಥ ಯಾತ್ರೆ ಸೇರಿದಂತೆ ಬಹುತೇಕ ಸಂದರ್ಭದಲ್ಲಿ ಮುರಳಿ ಮನೋಹರ ಜೋಶಿ ಮತ್ತು ಅಡ್ವಾಣಿ ಜತೆಯಾಗಿ ಕೆಲಸ ಮಾಡಿದ್ದರು.

ಭಾವುಕರಾದ ಅಡ್ವಾಣಿ

ಶನಿವಾರ (ಫೆಬ್ರವರಿ 3)ರಂದು ಪ್ರಧಾನ ಮಂತ್ರಿ ಅವರು ಅಡ್ವಾಣಿ ಅವರಿಗೆ ಭಾರತ ರತ್ನ ಘೋಷಿಸಿದ್ದರು. ಈ ವೇಳೆ ಮಾತನಾಡಿದ್ದ ಅಡ್ವಾಣಿ ಅವರು, “ನನ್ನ ಜೀವನದುದ್ದಕ್ಕೂ ಸೇವೆ ಸಲ್ಲಿಸಲು ನಾನು ಶ್ರಮಿಸಿದ ಆದರ್ಶಗಳು ಮತ್ತು ತತ್ವಗಳಿಗೆ ಇದು ಸಲ್ಲುತ್ತಿದೆ. ನನ್ನ 14ನೇ ವಯಸ್ಸಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸೇರಿದಾಗಿನಿಂದ ನನ್ನ ಪ್ರೀತಿಯ ದೇಶಕ್ಕೆ ನನ್ನ ಜೀವನ ಸಮರ್ಪಿತವಾಗಿದೆ. ನನಗೆ ನಿಯೋಜಿಸಲಾದ ಯಾವುದೇ ಕಾರ್ಯವನ್ನು ನಿಸ್ವಾರ್ಥದಿಂದ ಮಾಡಿದ್ದೇನೆ. ನನ್ನ ಸೇವೆಯಲ್ಲಿ ಯಾವುದರಲ್ಲೂ ಪ್ರತಿಫಲವನ್ನು ಹುಡುಕಲಿಲ್ಲ. ಇದಂ ನ ಮಮ ಎಂಬ ಧ್ಯೇಯವಾಕ್ಯದಿಂದ ದುಡಿದಿದ್ದೇನೆ. ಈ ಜೀವನ ನನ್ನದಲ್ಲ. ನನ್ನ ಜೀವನ ನನ್ನ ರಾಷ್ಟ್ರಕ್ಕಾಗಿ ಮಾತ್ರ ಎಂಬುದು ನನ್ನ ನಂಬಿಕೆಯಾಗಿದೆ” ಎಂದು ಹೇಳಿದ್ದರು.

ಇದನ್ನೂ ಓದಿ: LK Advani: ಭಾರತ ರತ್ನ ಘೋಷಣೆಯಾಗುತ್ತಿದ್ದಂತೆ ಭಾವುಕರಾದ ಅಡ್ವಾಣಿ; ಗಣ್ಯರಿಂದ ಶುಭಾಶಯಗಳ ಮಹಾಪೂರ

ಅಡ್ವಾಣಿ ಅವರು ಬಿಜೆಪಿಯ ಅಧ್ಯಕ್ಷರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದಾರೆ. 10 ಬಾರಿ ಸಂಸದರಾಗಿದ್ದ ಅಡ್ವಾಣಿ ಅವರು ಗೃಹ ಸಚಿವರಾಗಿ, 2002ರಿಂದ 2004ರವರೆಗೆ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸಂಪುಟದಲ್ಲಿ ಉಪಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಸ್ವತಃ ಪ್ರಧಾನಿಯಾಗುವ ಅರ್ಹತೆ ಹೊಂದಿದ್ದರೂ ಅದನ್ನು ವಾಜಪೇಯಿ ಅವರಿಗಾಗಿ ಬಿಟ್ಟುಕೊಟ್ಟರು. ವಾಜಪೇಯಿ ಸರ್ಕಾರದಲ್ಲಿದ್ದುಕೊಂಡು ಹಲವಾರು ನೀತಿ ನಿರೂಪಣೆಗಳಲ್ಲಿ ತಮ್ಮತನವನ್ನು ತೋರಿಸಿದರು. ಪಾಕಿಸ್ತಾನಕ್ಕೂ ಹೋಗಿ ಬಂದಿದ್ದರು. ಇದೀಗ ಅವರು 96ನೇ ವಯಸ್ಸಿನಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version