ನವದೆಹಲಿ: ಹೊಸದಾಗಿ ರೂಪುಗೊಂಡಿರುವ ಪ್ರತಿಪಕ್ಷಗಳ ಇಂಡಿಯಾ ಬಣದ (INDIA bloc) ಲಾಂಛನವನ್ನು ಆಗಸ್ಟ್ನಲ್ಲಿ ಮುಂಬೈನಲ್ಲಿ ನಡೆಯಲಿರುವ ಮೈತ್ರಿಕೂಟದ ಮೂರನೇ ಜಂಟಿ ಸಭೆಯಲ್ಲಿ ಅನಾವರಣಗೊಳಿಸಲಾಗುವುದು ಎಂದು ಕಾಂಗ್ರೆಸ್ (Congress) ಮುಖಂಡ ಅಶೋಕ್ ಚವಾಣ್ ಶನಿವಾರ ಹೇಳಿದ್ದಾರೆ. ಆಗಸ್ಟ್ 31 ರಂದು ಮುಂಬೈನಲ್ಲಿ ನಡೆಯಲಿರುವ ಬಣದ ಮೂರನೇ ಸಭೆಯಲ್ಲಿ ಸುಮಾರು 26ರಿಂದ 27 ವಿರೋಧ ಪಕ್ಷಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಅಶೋಕ್ ಚವಾಣ್ ಹೇಳಿದರು.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಚವಾಣ್, ಸುಮಾರು 26ರಿಂದ 27 ಪಕ್ಷಗಳು ಸಭೆಯಲ್ಲಿ ಭಾಗವಹಿಸಲಿವೆ. ಆಗಸ್ಟ್ 31 ರ ಸಂಜೆ ಮುಂಬೈನಲ್ಲಿ ಅನೌಪಚಾರಿಕ ಸಭೆ ಮತ್ತು ಸೆಪ್ಟೆಂಬರ್ 1 ರಂದು ಔಪಚಾರಿಕ ಸಭೆ ನಡೆಯಲಿದೆ. ಇಲ್ಲಿಯವರೆಗೆ, ಎರಡು ಸಭೆಗಳನ್ನು ಆಯೋಜಿಸಲಾಗಿದೆ, ಆದ್ದರಿಂದ ಈ ಮೂರನೇ ಸಭೆಯಲ್ಲಿ ಮುಂದಿನ ಕಾರ್ಯಸೂಚಿಯನ್ನು ಚರ್ಚಿಸಲಾಗುವುದು. ನಾವು ಸಾಮಾನ್ಯ ಲೋಗೋವನ್ನು ತಯಾರಿಸಲು ನಿರ್ಧರಿಸುತ್ತಿದ್ದೇವೆ ಮತ್ತು ಅದನ್ನು ಆಗಸ್ಟ್ 31 ರಂದು ಅನಾವರಣಗೊಳಿಸಬಹುದು ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆದಿತ್ತು ಸಭೆ
ಆಗಸ್ಟ್ 31 ರಂದು ಮುಂಬೈನಲ್ಲಿ ನಡೆಯಲಿರುವ ಬಣದ ಮೂರನೇ ಜಂಟಿ ಸಭೆಯಲ್ಲಿ ಸುಮಾರು 26-27 ವಿರೋಧ ಪಕ್ಷಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಯಾಗಿರುವ ಚವಾಣ್ ಹೇಳಿದ್ದಾರೆ. ಮೊದಲ ಸಭೆ ಇಂಡಿಯಾ ಬಣದ ಆಡಳಿತವಿರುವ ಬಿಹಾರದ ಪಾಟ್ನಾದಲ್ಲಿ ನಡೆದರೆ, ಎರಡನೇ ಸಭೆ ಇತ್ತೀಚೆಗೆ ಕಾಂಗ್ರೆಸ್ ಅಧಿಕಾರದಲ್ಲಿರುವ ಬೆಂಗಳೂರಿನಲ್ಲಿ ನಡೆದಿತ್ತು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದ ನಂತರ ಮೈತ್ರಿಕೂಟಕ್ಕೆ ಪ್ರಧಾನಿ ಹುದ್ದೆಗೆ ಹೆಸರುಗಳನ್ನು ಬಹಿರಂಗಪಡಿಸಲಾಗುವುದು ಎಂದು ಪಕ್ಷದ ಮುಖಂಡ ಪಿಎಲ್ ಪುನಿಯಾ ಈ ಹಿಂದೆ ಸ್ಪಷ್ಟಪಡಿಸಿದ್ದರು. ಅಧಿಕಾರಕ್ಕೆ ಬಂದ ನಂತರ ಪ್ರಧಾನಿಯನ್ನು ನಿರ್ಧರಿಸಲಾಗುವುದು ಎಂದು ಯುಪಿಎ ಮೈತ್ರಿಕೂಟ ನಿರ್ಧರಿಸಿದೆ. ಚುನಾಯಿತ ಸಂಸದರು ಪ್ರಧಾನಿಯನ್ನು ಆಯ್ಕೆ ಮಾಡುತ್ತಾರೆ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.
ಮೋದಿ ಎದುರಿಸಲು ಸಜ್ಜು
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯನ್ನು ಎದುರಿಸಲು 26 ವಿರೋಧ ಪಕ್ಷಗಳು ಕಳೆದ ತಿಂಗಳು ‘ಇಂಡಿಯಾ’ (ಇಂಡಿಯನ್ ನ್ಯಾಷನಲ್ ಡೆವಲಪ್ಮೆಂಟ್ ಇನ್ಕ್ಲೂಸಿವ್ ಅಲೈಯನ್ಸ್) ರಚಿಸಿದ್ದು, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು “ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವೆ” ಹೋರಾಟ ನಡೆಯಲಿದೆ ಎಂದು ಪ್ರತಿಪಾದಿಸಿದ್ದರು.
ಹೊಸದಾಗಿ ರೂಪುಗೊಂಡ ಮೈತ್ರಿಕೂಟವು ‘ಸಮುದಾಯ ಸಂಕಲ್ಪ’ ಎಂಬ ಘೋಷಣೆಯನ್ನು ಬಿಡುಗಡೆ ಮಾಡಿದೆ, ಇದು ಜಾತಿ ಜನಗಣತಿ, ಮಣಿಪುರ ಹಿಂಸಾಚಾರದಿಂದ ಹಿಡಿದು ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್ಗಳ ಪಾತ್ರ ಮತ್ತು ನೋಟ್ ಬ್ಯಾನ್ನಂಥ ವಿವಿಧ ವಿಷಯಗಳನ್ನು ಉಲ್ಲೇಖಿಸಿ ಬಿಜೆಪಿ ವಿರುದ್ಧ ಚಾಟಿ ಬೀಸಿದೆ.
ಯಾವೆಲ್ಲ ಪಕ್ಷಗಳಿವೆ?
ಕಾಂಗ್ರೆಸ್, ಟಿಎಂಸಿ, ಡಿಎಂಕೆ, ಎಎಪಿ, ಜೆಡಿಯು, ಆರ್ಜೆಡಿ, ಜೆಎಂಎಂ, ಎನ್ಸಿಪಿ (ಶರದ್ ಪವಾರ್), ಶಿವಸೇನೆ (ಯುಬಿಟಿ), ಎಸ್ಪಿ, ಎನ್ಸಿ, ಪಿಡಿಪಿ, ಸಿಪಿಐ (ಎಂ), ಸಿಪಿಐ, ಆರ್ಎಲ್ಡಿ, ಎಂಡಿಎಂಕೆ, ಕೊಂಗುನಾಡು ಮಕ್ಕಳ್ ದೇಸಿಯಾ ಕಚ್ಚಿ (ಕೆಎಂಡಿಕೆ), ವಿಸಿಕೆ, ಆರ್ಎಸ್ಪಿ, ಸಿಪಿಐ-ಎಂಎಲ್ (ಲಿಬರೇಷನ್), ಫಾರ್ವರ್ಡ್ ಬ್ಲಾಕ್, ಐಯುಎಂಎಲ್, ಕೇರಳ ಕಾಂಗ್ರೆಸ್ (ಜೋಸೆಫ್), ಕೇರಳ ಕಾಂಗ್ರೆಸ್ (ಮಣಿ), ಅಪ್ನಾ ದಳ (ಕಾಮೇರವಾಡಿ) ಮತ್ತು ಮನಿತಾನೇಯ ಮಕ್ಕಳ್ ಕಚ್ಚಿ (ಎಂಎಂಕೆ) ಬಣದಲ್ಲಿರುವ ಪಕ್ಷಗಳು