ನವದೆಹಲಿ: ಲೋಕಸಭೆ ಚುನಾವಣೆ(Lok Sabha Election 2024) ಯ ಎರಡನೇ ಹಂತದ ಮತದಾನ ಮುಕ್ತಾಯಗೊಂಡರೂ ಅಮೇಥಿ (Amethi) ಮತ್ತು ರಾಯ್‌ಬರೇಲಿ (Raebareli) ಯಲ್ಲಿ ತನ್ನ ಅಭ್ಯರ್ಥಿಯನ್ನು ಘೋಷಿಸದೇ ಕಾಂಗ್ರೆಸ್ ಇನ್ನೂ ಗುಟ್ಟಾಗಿಯೇ ಇಟ್ಟಿದೆ. ಈ ಎರಡೂ ಕ್ಷೇತ್ರಗಳಲ್ಲಿ ಗಾಂಧಿ ಕುಟುಂಬದ ಕುಡಿಗಳನ್ನೇ ಕಣಕ್ಕಿಳಿಸಬೇಕೆಂದು ಬಹುತೇಕ ಎಲ್ಲಾ ಕಾಂಗ್ರೆಸ್ ಮುಖಂಡರ ಆಶಯವಾಗಿದೆ. ಇದಕ್ಕೆ ಪೂರಕ ಎಂಬಂತೆ ಅಮೇಥಿ ಕ್ಷೇತ್ರದಿಂದ ರಾಹುಲ್ ಗಾಂಧಿ(Rahul Gadhi) ಮತ್ತು ರಾಯ್ ಬರೇಲಿ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ(Priyanka Gandhi)ಯನ್ನು ಕಣಕ್ಕಿಳಿಸುವಂತೆ ಕೇಂದ್ರೀಯ ಕಾಂಗ್ರೆಸ್ ಎಲೆಕ್ಷನ್ ಸಮಿತಿ(CEC) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjuna Kharge) ಮತ್ತು ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ(Sona Gandhi)ಗೆ ಮನವಿ ಮಾಡಿದೆ. ಈ ಬಗ್ಗೆ ತಮ್ಮ ಮನವಿಯನ್ನು ಸಲ್ಲಿಸಿರುವ CEC ಸದಸ್ಯರು ಅಂತಿಮ ನಿರ್ಧಾರವನ್ನು ಮಲ್ಲಿಕಾರ್ಜುನ ಖರ್ಗೆಗೆ ಬಿಟ್ಟಿದ್ದಾರೆ.
2019ರವರೆಗೆ ಕಾಂಗ್ರೆಸ್‌ನ ಭದ್ರಕೋಟೆಯಂತಿದ್ದ ಅಮೇಥಿ ಮತ್ತು ರಾಯ್ ಬರೇಲಿ ಮೇಲೆ ಇಡೀ ದೇಶದ ಚಿತ್ತವೇ ನೆಟ್ಟಿದೆ. 2019ರಲ್ಲಿ ಬಿಜೆಪಿ ನಾಯಕಿ ಸ್ಮೃತಿ ಇರಾನಿ ರಾಹುಲ್ ಗಾಂಧಿಯವರನ್ನು ಸೋಲಿಸುವ ಮೂಲಕ ಕಾಂಗ್ರೆಸ್ ಮೊದಲ ಬಾರಿಗೆ ಅಮೇಥಿಯಲ್ಲಿ ಕಳೆದುಕೊಂಡಿತ್ತು. ಇನ್ನು ಸೋನಿಯಾ ಗಾಂಧಿಯವರು ರಾಜ್ಯಸಭೆಗೆ ಆಯ್ಕೆಯಾದ ನಂತರ ಅವರು ರಾಯ್‌ಬರೇಲಿಯನ್ನು ತೊರೆದಿದ್ದರು. ಇದಾದ ಬಳಿಕ ಪ್ರಿಯಾಂಕಾ ಗಾಂಧಿ ವಾಧ್ರಾ ರಾಯ್ ಬರೇಲಿ ಕ್ಷೇತ್ರದಿಂದ ಕಣಕ್ಕಿಳಿಯುವ ಮೂಲಕ ರಾಜಕೀಯ ಪ್ರವೇಶ ಮಾಡಲಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಬಹಳ ಕೇಳಿ ಬಂದಿತ್ತು. ಇದೀಗ ಮತ್ತೆ ಈ ಎರಡು ಕ್ಷೇತ್ರಗಳ ಅಭ್ಯರ್ಥಿಗಳನ್ನು ಕಾಂಗ್ರೆಸ್ ಇನ್ನೂ ಗುಟ್ಟಾಗಿ ಇಡುವ ಮೂಲಕ ಭಾರೀ ಕುತೂಹಲ ಮೂಡಿಸಿದೆ.
ಅಮೇಥಿಯಲ್ಲಿ ಸ್ಪರ್ಧಿಸುವ ಬಗ್ಗೆ ಸ್ವತಃ ರಾಹುಲ್ ಗಾಂಧಿಯೇ ಒಲವು ತೋರಿದ್ದು, ಪಕ್ಷ ಬಯಸಿದ್ದಲ್ಲಿ ಅಮೇಥಿಯಿಂದ ಸ್ಪರ್ಧಿಸುವುದಾಗಿ ಹೇಳಿದ್ದರು. ಈಗಾಗಲೇ ಕೇರಳದ ವಯನಾಡಿನಲ್ಲಿ ಕಣಕ್ಕಿಳಿದಿರುವ ರಾಹುಲ್ ಗಾಂಧಿ ಈ ಬಾರಿಯೂ ಎರಡನೇ ಕ್ಷೇತ್ರದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಮತ್ತೊಂದೆಡೆ ಈ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದು, ಎರಡೂ ಕೇತ್ರಗಳ ಅಭ್ಯರ್ಥಿ ಘೋಷಣೆಗೆ ಇನ್ನೂ ಸಮಯ ಇದೆ. ಜನರಿಂದ ಯಾವ ಅಭ್ಯರ್ಥಿಯ ಹೆಸರು ಕೇಳಿ ಬರುತ್ತದೋ ಅಂಥವರಿಗೆ ಸೀಟ್ ಕೊಡಲಾಗುತ್ತದೆ. ಶೀಘ್ರದಲ್ಲೇ ಅಭ್ಯರ್ಥಿ ಘೋಷಣೆ ಆಗಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:School Teacher: ಕಾರಿನ ಮೇಲೆ ಕಲ್ಲು ಎತ್ತಿ ಹಾಕಿ ಶಿಕ್ಷಕಿ ಪುಂಡಾಟ; ನೆರೆಮನೆಯವರ ಮೇಲೂ ಹಲ್ಲೆ
ಕಾಂಗ್ರೆಸ್ ಮುಖಂಡರ ಕ್ಷೇತ್ರ ಬದಲಾವಣೆ ಬಗ್ಗೆ ಬಿಜೆಪಿ ಆಗಾಗ ವ್ಯಂಗ್ಯ ಆಡುತ್ತಿದೆ. ಈ ಬಗ್ಗೆ ಟಾಂಗ್ ಕೊಟ್ಟ ಖರ್ಗೆ, ನಮ್ಮನ್ನು ಹಾಸ್ಯ ಮಾಡುವ ಬಿಜೆಪಿಗರು ಮೊದಲು ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್.ಕೆ.ಆಡ್ವಾಣಿ ಅದೆಷ್ಟು ಬಾರಿ ಕ್ಷೇತ್ರ ಬದಲಾಯಿಸಿ ಚುನಾವಣೆ ಸ್ಪರ್ಧಿಸಿದ್ದಾರೆ ಎಂಬುದನ್ನು ಲೆಕ್ಕ ಹಾಕಲಿ. ವಯನಾಡಿನ ಜನರು ತಮ್ಮ ಕ್ಷೇತ್ರದಲ್ಲೇ ರಾಹುಲ್ ಗಾಂಧಿ ಸ್ಪರ್ಧಿಸಬೇಕೆಂದು ಬಯಸಿದ್ದರು. ಹೀಗಾಗಿ ಅವರು ಅಲ್ಲಿಗೆ ಹೋಗಿದ್ದಾರೆ. ನಾಯಕನಾದವನು ಜನರ ಆಶಯಕ್ಕೆ ಅನುಗುಣವಾಗಿ ನಡೆಯಬೇಕು ಎಂದು ತಿರುಗೇಟು ಕೊಟ್ಟರು.