ಹೊಸದಿಲ್ಲಿ: ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕತ್ವವು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ (Lok Sabha Election 2024) 2019ಕ್ಕೆ ಹೋಲಿಸಿದರೆ ಪಕ್ಷದ ಮತ ಹಂಚಿಕೆಯನ್ನು ಕನಿಷ್ಠ 10%ರಷ್ಟು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಆ ಮೂಲಕ ʼಅಭೂತಪೂರ್ವ ಬಹುಮತʼ ಗಳಿಸುವ ಗುರಿಯನ್ನು ಅದು ಹೊಂದಿದೆ.
ದೆಹಲಿಯಲ್ಲಿ ನಡೆದ ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಮತ್ತು ರಾಜ್ಯ ಪದಾಧಿಕಾರಿಗಳ ಸಭೆಯ ಮುಕ್ತಾಯದ ದಿನದಂದು, ಚುನಾವಣಾ ದಾಖಲೆಯನ್ನು ಸುಧಾರಿಸಲು ರಾಜ್ಯಾದ್ಯಂತ ಪಕ್ಷದ ಮತಗಳ ಪ್ರಮಾಣವನ್ನು ಹೆಚ್ಚಿಸಲು ಶ್ರಮಿಸಬೇಕು ಎಂದು ಬಿಜೆಪಿ ಹೈಕಮಾಂಡ್ ಪಕ್ಷದ ನಾಯಕರಿಗೆ ಗುರಿ ನೀಡಿದೆ ಎಂದು ಪಕ್ಷದ ಪದಾಧಿಕಾರಿಗಳು ತಿಳಿಸಿದ್ದಾರೆ. ಶನಿವಾರ ಬಿಜೆಪಿಯ ರಾಷ್ಟ್ರೀಯ ಮತ್ತು ರಾಜ್ಯ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ (Amit Shah), ಪಕ್ಷದ ಸಾಧನೆಯು ಪ್ರತಿಪಕ್ಷಗಳನ್ನು ʼದಿಗ್ಭ್ರಮೆಗೊಳಿಸುವಂತೆ ಇರಬೇಕುʼ ಎಂದು ಉತ್ತೇಜಿಸಿದ್ದಾರೆ.
ಬಿಜೆಪಿ 2019ರಲ್ಲಿ 37.36% ಮತಗಳೊಂದಿಗೆ 303 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಬಿಜೆಪಿಯ ಭಾರಿ ವಿಜಯದ ಒಂದು ತಿಂಗಳ ನಂತರ ಈ ಸಭೆ ನಡೆದಿದೆ. 2018ರಲ್ಲಿ ಇದೇ ಹೃದಯಭಾಗದ ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸೋತಿದ್ದು ದೊಡ್ಡ ಹೊಡೆತವಾಗಿತ್ತು. ಆದರೆ ಆ ಬಾರಿಯ ವಿಧಾನಸಭೆ ಚುನಾವಣೆಗಳ ಸೋಲು 2019ರ ಲೋಕಸಭೆ ಚುನಾವಣೆಯಲ್ಲಿ ಯಾವುದೇ ಪ್ರತಿಕೂಲ ಪರಿಣಾಮ ಬೀರಿರಲಿಲ್ಲ. ಈ ರಾಜ್ಯಗಳಲ್ಲಿ 65 ಸ್ಥಾನಗಳಲ್ಲಿ 62 ಸ್ಥಾನಗಳನ್ನು ಪಕ್ಷ ಗೆದ್ದಿತ್ತು.
Xನಲ್ಲಿನ ಇತ್ತೀಚಿನ ಪೋಸ್ಟ್‌ನಲ್ಲಿ, ಇತ್ತೀಚಿನ ವಿಧಾನಸಭಾ ಚುನಾವಣೆಯ ಫಲಿತಾಂಶವು ದೇಶಾದ್ಯಂತ ಜನತೆ ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ನಾಯಕತ್ವದಲ್ಲಿ ನಂಬಿಕೆಯನ್ನು ಹೊಂದಿದ್ದಾರೆಂದು ತೋರಿಸಿದೆ ಎಂದು ಶಾ ಹೇಳಿದ್ದಾರೆ. “…ನಾವು ನಮ್ಮ ಸಿದ್ಧಾಂತ ಮತ್ತು ಬಿಜೆಪಿ ಸರ್ಕಾರದ ಕೆಲಸಗಳೊಂದಿಗೆ ದೇಶದ ಪ್ರತಿ ಮನೆಗೆ ಹೋಗಬೇಕು. 2024ರಲ್ಲಿ ಅಭೂತಪೂರ್ವ ಬಹುಮತದೊಂದಿಗೆ ಮೋದಿಜಿಯನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕಾಗಿದೆ” ಎಂದು ಶಾ ಹೇಳಿದ್ದಾರೆ.
ಯಾವುದೇ ಅರ್ಹ ವ್ಯಕ್ತಿಗಳು ಸರ್ಕಾರಿ ಯೋಜನೆಗಳಿಂದ ಹೊರಗುಳಿಯದಂತೆ, ವಿಕಸಿತ್ ಭಾರತ್ ಯಾತ್ರೆಯು ಎಲ್ಲರನ್ನು ತಲುಪುವಂತೆ ನೋಡಿಕೊಳ್ಳಲು ನಾಯಕರನ್ನು ನಿರ್ದೇಶಿಸಲಾಗಿದೆ. ʼಬಿಜೆಪಿ ಸದಸ್ಯರು ʼಮಿಷನ್ ಮೋಡ್ʼನಲ್ಲಿ ಕೆಲಸ ಮಾಡುವಂತೆ ಮತ್ತು ಕಲ್ಯಾಣ ಯೋಜನೆಗಳಲ್ಲಿ ಯಾವುದೇ ವಿಳಂಬವಾಗದಂತೆ ಸರ್ಕಾರದ ಯೋಜನೆಗಳನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಮೋದಿಯವರು ಪಕ್ಷ ನಾಯಕರಿಗೆ ಸೂಚಿಸಿದ್ದಾರೆ. ʼನಕಾರಾತ್ಮಕ ಪ್ರಚಾರʼದಲ್ಲಿ ವಿರೋಧ ಪಕ್ಷಗಳೊಂದಿಗೆ ಸೆಣಸುವ ಬದಲು ಸರ್ಕಾರದ ಸಕಾರಾತ್ಮಕ ಕಾರ್ಯಗಳ ಬಗ್ಗೆ ಪ್ರಚಾರ ಮಾಡುವತ್ತ ಗಮನಹರಿಸುವಂತೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: Lok Sabha Election: ಉತ್ತರ ಪ್ರದೇಶದಲ್ಲಿ ಟೆಂಪಲ್ ಕಾರಿಡಾರ್; ಬಿಜೆಪಿಗೆ ಮತಗಳ ಹೆದ್ದಾರಿ!