Site icon Vistara News

Lok Sabha Election 2024: ಗುಜರಾತ್‌ನಲ್ಲಿ ಶೇ.10ಕ್ಕಿಂತ ಹೆಚ್ಚು ಮುಸ್ಲಿಮರಿದ್ದರೂ ಕಾಂಗ್ರೆಸ್ ಒಬ್ಬ ಮುಸ್ಲಿಮನಿಗೂ ಟಿಕೆಟ್‌ ಕೊಟ್ಟಿಲ್ಲ!

Lok Sabha Election-2024

ಗುಜರಾತ್‌ನಲ್ಲಿ (gujarat) ಲೋಕಸಭೆ ಚುನಾವಣೆಗೆ (Lok Sabha Election 2024) ಮುಸ್ಲಿಂ (muslim) ಅಭ್ಯರ್ಥಿಯನ್ನು (candidate) ಕಣಕ್ಕಿಳಿಸಿದ ಏಕೈಕ ರಾಷ್ಟ್ರೀಯ ಪಕ್ಷ ಬಿಎಸ್‌ಪಿ (BSP). ಕಾಂಗ್ರೆಸ್‌ನಿಂದ (congress) ಯಾವುದೇ ಮುಸ್ಲಿಂ ಅಭ್ಯರ್ಥಿ ಗುಜರಾತ್‌ನಲ್ಲಿ ಕಣಕ್ಕೆ ಇಳಿದಿಲ್ಲ. ಮೇ 7ರಂದು ಮತದಾನ ನಡೆಯಲಿರುವ ರಾಜ್ಯದಲ್ಲಿ ಒಟ್ಟು 266 ಅಭ್ಯರ್ಥಿಗಳ ಪೈಕಿ ಕೇವಲ 32 ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಇಲ್ಲಿ ಹೆಚ್ಚಿನ ಮುಸ್ಲಿಂ ಅಭ್ಯರ್ಥಿಗಳು ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದಾರೆ. ಕೆಲವರು ಖೇಡಾ, ಲಾಗ್ ಪಾರ್ಟಿ, ರೈಟ್ ಟು ರೀಕಾಲ್ ಪಾರ್ಟಿ, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಭಾರತೀಯ ಜನನಾಯಕ್ ಪಕ್ಷದಂತಹ ಸಣ್ಣ ಪಕ್ಷಗಳಿಂದ ಸ್ಪರ್ಧಿಸಿದ್ದಾರೆ. ಗಾಂಧಿನಗರದಲ್ಲಿ ಅತೀ ಹೆಚ್ಚು ಮುಸ್ಲಿಂ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಅಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಜೆಪಿ ಅಭ್ಯರ್ಥಿ ಮತ್ತು ಸೋನಾಲ್ ಪಟೇಲ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಇದರ ನಂತರ ಭರೂಚ್ ಮತ್ತು ಪಟಾನ್ ನಲ್ಲಿ ತಲಾ ನಾಲ್ಕು ಮಂದಿ ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ.

ಗುಜರಾತ್‌ನ ಜನಸಂಖ್ಯೆಯಲ್ಲಿ ಸುಮಾರು ಶೇ. 10ರಷ್ಟು ಮುಸ್ಲಿಮರು ಎಂದು ಅಂದಾಜಿಸಲಾಗಿದೆ. ಕಚ್, ಜಾಮ್‌ನಗರ, ಜುನಾಗಢ್, ಭರೂಚ್, ಭಾವನಗರ, ಸುರೇಂದ್ರನಗರ, ಪಟಾನ್, ಬನಸ್ಕಾಂತ, ಸಬರ್ಕಾಂತ, ಅಹಮದಾಬಾದ್ ಪಶ್ಚಿಮ, ಅಹಮದಾಬಾದ್ ಪೂರ್ವ, ಗಾಂಧಿನಗರ, ನವಸಾರಿ, ಪಂಚಮಹಲ್‌ಗಳು ಮತ್ತು ಆನಂದ್ ಸೇರಿದಂತೆ ಕನಿಷ್ಠ 15 ಸ್ಥಾನಗಳಲ್ಲಿ ಅವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಹಿಂದಿನ ಚುನಾವಣೆ

2019, 2009 ಮತ್ತು 2004ರಲ್ಲಿ ಕಾಂಗ್ರೆಸ್ ಭರೂಚ್‌ನಿಂದ ತಲಾ ಒಬ್ಬ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಇದು ಹಿರಿಯ ನಾಯಕ ಅಹ್ಮದ್ ಪಟೇಲ್‌ ಅವರ ಭದ್ರಕೋಟೆಯಾಗಿತ್ತು. ಬಳಿಕ ಶೇರ್ಖಾನ್ ಪಠಾಣ್, ಅಜೀಜ್ ಟಂಕರ್ವಿ ಮತ್ತು ಮೊಹಮ್ಮದ್ ಪಟೇಲ್ ನಾಮನಿರ್ದೇಶನಗೊಂಡರು. ಈ ಬಾರಿ ಆಮ್ ಆದ್ಮಿ ಪಕ್ಷವು ಇಂಡಿಯಾ ಬ್ಲಾಕ್ ಪ್ರತಿನಿಧಿಯಾಗಿ ಭರೂಚ್ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದು, ಪಕ್ಷವು ತನ್ನ ಶಾಸಕ ಚೈತಾರ್ ವಾಸವ ಅವರನ್ನು ಇಲ್ಲಿ ಕಣಕ್ಕಿಳಿಸಿದೆ.

2014 ರಲ್ಲಿ ಕಾಂಗ್ರೆಸ್ ಭರೂಚ್‌ನಿಂದ ಜಯೇಶ್ ಪಟೇಲ್ ಅವರನ್ನು ಕಣಕ್ಕಿಳಿಸಿತು. ಆದರೆ ನವಸಾರಿಯಲ್ಲಿ ಬಿಜೆಪಿಯ ಸಿ.ಆರ್. ಪಾಟೀಲ್ ಅವರನ್ನು ಎದುರಿಸಲು ಮುಸ್ಲಿಂ ಅಭ್ಯರ್ಥಿಯನ್ನು ಆಯ್ಕೆ ಮಾಡಿತು.


ಬಿಜೆಪಿಯ ಭದ್ರಕೋಟೆ

ಕಳೆದ ಎರಡು ಲೋಕಸಭೆ ಚುನಾವಣೆಗಳಲ್ಲಿ ಬಿಜೆಪಿ ಗುಜರಾತ್‌ನ ಎಲ್ಲಾ 26 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈ ಬಾರಿ 25 ಕ್ಷೇತ್ರಗಳಲ್ಲಿ ಮಾತ್ರ ಮತದಾನ ನಡೆಯಲಿದ್ದು, ಸೂರತ್‌ನಲ್ಲಿ ಬಿಜೆಪಿ ಅವಿರೋಧವಾಗಿ ಗೆಲುವು ಸಾಧಿಸಿದೆ.

ಏಕೈಕ ಮುಸ್ಲಿಂ ಶಾಸಕ

ಪ್ರಸ್ತುತ ಗುಜರಾತ್ ಅಸೆಂಬ್ಲಿಯಲ್ಲಿ ಕಾಂಗ್ರೆಸ್ ನಾಯಕ ಮತ್ತು ಏಕೈಕ ಮುಸ್ಲಿಂ ಶಾಸಕ ಇಮ್ರಾನ್ ಖೇಡವಾಲಾ ಅವರು ಪಕ್ಷದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಶೇ.10ರಷ್ಟು ಮುಸ್ಲಿಂ ಜನಸಂಖ್ಯೆ ಇದ್ದರೂ ಕಾಂಗ್ರೆಸ್‌ ಒಂದೇ ಒಂದು ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ ಎಂಬ ಬಗ್ಗೆ ಇವರು ಸ್ಪಷ್ಟ ವಿವರಣೆ ನೀಡಲು ವಿಫಲರಾಗಿದ್ದಾರೆ.

ಹಿಂದೆ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು

1957ರಲ್ಲಿ ಭರೂಚ್ ಲೋಕಸಭಾ ಸ್ಥಾನವು 1984ರವರೆಗೆ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. 1977 ಮತ್ತು 1984ರ ನಡುವೆ ಅಹ್ಮದ್ ಪಟೇಲ್ ಮೂರು ಬಾರಿ ಗೆದಿದ್ದರು. ಇವರು ಈ ಸ್ಥಾನದಿಂದ ಗೆದ್ದ ಕೊನೆಯ ಕಾಂಗ್ರೆಸ್ ಸಂಸದರಾಗಿದ್ದರು. 1989ರಲ್ಲಿ ಅವರನ್ನು ಸೋಲಿಸಿದ ಬಿಜೆಪಿಯ ಚಂದುಭಾಯಿ ದೇಶಮುಖ್, ಬಳಿಕ ಮನ್ಸುಖ್ ವಾಸವಾ ಮರು ಚುನಾಯಿಸಲ್ಪಟ್ಟರು. ಈ ವರ್ಷ ಮನ್ಸುಖ್ ಈ ಕ್ಷೇತ್ರದಿಂದ ಏಳನೇ ಬಾರಿಗೆ ಚುನಾವಣೆ ಎದುರಿಸುತ್ತಿದ್ದಾರೆ.

ಅಹ್ಮದ್ ಪಟೇಲ್ ಅವರ ಮಕ್ಕಳಾದ ಫೈಸಲ್ ಮತ್ತು ಮುಮ್ತಾಜ್ ಅವರು ಭರೂಚ್‌ನಿಂದ ಟಿಕೆಟ್ ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಶಾಸಕ ಇಮ್ರಾನ್‌ ಖೇಡಾವಾಲಾ, ಅವರು ಅಲ್ಲಿ ಗೆಲ್ಲಲು ಸಾಧ್ಯವಿಲ್ಲ. ಕ್ಷೇತ್ರದಲ್ಲಿ ಸುಮಾರು ಮೂರು ಲಕ್ಷ ಮುಸ್ಲಿಂ ಮತಗಳಿವೆ. ಅವರೆಲ್ಲರೂ ಮತ ಹಾಕಿದರೂ ಸಾಕಾಗುವುದಿಲ್ಲ. ಕೇವಲ ಮುಸ್ಲಿಂ ಮತಗಳಿಂದ ಗೆಲ್ಲಲು ಸಾಧ್ಯವಿಲ್ಲ. ಹಿಂದೂ ಮತಗಳನ್ನು ಪಡೆಯಬೇಕು ಎನ್ನುತ್ತಾರೆ.

ಮೌಲಾನಾ ಆಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ ಮತ್ತು ಇಸ್ಲಾಮಿಕ್ ಹೂಡಿಕೆ ಸಲಹಾ ಸೇವೆಗಳ ಪ್ಲಾಟ್‌ಫಾರ್ಮ್ ಪಾರ್ಸೋಲಿ ಕಾರ್ಪೊರೇಷನ್ ಮಾಲೀಕ ಜಾಫರ್ ಸರೇಶ್‌ವಾಲಾ, ಯಾವುದೇ ರಾಷ್ಟ್ರೀಯ ಪಕ್ಷವು ಮುಸ್ಲಿಮರನ್ನು ಕಣಕ್ಕಿಳಿಸಿಲ್ಲ ಎಂಬ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Lok Sabha Election 2024: ಘಟಾನುಘಟಿಗಳ ಸ್ಪರ್ಧೆ; ಮೇ 7ರ ಮೂರನೇ ಹಂತದ ಪೈಪೋಟಿಯ ಚಿತ್ರಣ ಇಲ್ಲಿದೆ

ಗುಜರಾತ್‌ನಲ್ಲಿ ಮುಸ್ಲಿಮರ ಬಗ್ಗೆ ಹೆಮ್ಮೆಪಡಲು ಸಾಕಷ್ಟು ವಿಷಯಗಳಿವೆ. 2002ರ ಅನಂತರ ಮುಸ್ಲಿಮರು ಶಿಕ್ಷಣ, ಉದ್ಯಮಶೀಲತೆ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದಾರೆ ಎನ್ನುತ್ತಾರೆ ಸುರೇಶ್ ವಾಲಾ.

ಗುಜರಾತ್‌ನಲ್ಲಿ ಬಿಜೆಪಿ 30 ವರ್ಷಗಳಿಂದ ಅಧಿಕಾರದಲ್ಲಿದೆ. 2022ರವರೆಗೂ ಮೂವರು ಶಾಸಕರಾದ ಗಯಾಸುದ್ದೀನ್ (ಶೇಖ್), ಜಾವೇದ್ ಪೀರ್ಜಾದಾ ಮತ್ತು ನಾನು ಇದ್ದೆವು. ಈಗ ನಾನು ಒಬ್ಬನೇ ರಾಜ್ಯಾದ್ಯಂತ ಇರುವ ಎಲ್ಲಾ ಮುಸ್ಲಿಂ ಸಮಸ್ಯೆಗಳನ್ನು ನಿಭಾಯಿಸಬೇಕಾಗಿದೆ ಎನ್ನುತ್ತಾರೆ ಶಾಸಕ ಇಮ್ರಾನ್ ಖೇಡವಾಲಾ.

Exit mobile version