ನವದೆಹಲಿ: ಲೋಕಸಭೆ ಚುನಾವಣೆ(Lok Sabha Election 2024)ಯಲ್ಲಿ ಈಶಾನ್ಯ ದಿಲ್ಲಿಯಿಂದ ಕಾಂಗ್ರೆಸ್ (Congress) ಕಣಕ್ಕಿಳಿಸಿರುವ ಕನ್ಹಯ್ಯ ಕುಮಾರ್ ( Kanhaiya Kumar) ವಿರುದ್ಧ ಸ್ವಪಕ್ಷದಲ್ಲೇ ವಿರೋಧ ಬುಗಿಲೆದ್ದಿದೆ. ಪಕ್ಷದ ಪ್ರಧಾನ ಕಚೇರಿ ಎದುರು ಜಮಾನಿಸಿದ ನೂರಾರು ಕಾಂಗ್ರೆಸ್ ಕಾಂಗ್ರೆಸಿಗರು ಹೊರಗಿನವರು ಬೇಡ, ಸ್ಥಳೀಯರನ್ನೇ ಕಣಕ್ಕಿಳಿಸಿ ಎಂದು ಒತ್ತಾಯಿಸಿದರು. ಮೌಜ್‌ಪುರ ಮೆಟ್ರೋ ಸ್ಟೇಶನ್ ಬಳಿ ಪ್ರತಿಭಟನೆ ನಡೆದಿದ್ದು, ನಮಗೆ ಸ್ಥಳೀಯ ನಾಯಕರೇ ಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.
ಈ ಕುರಿತು ನವದೀಪ್ ಶರ್ಮಾ ಎಂಬ ಪ್ರತಿಭಟನಾಕಾರರು ಪ್ರತಿಕ್ರಿಯಿಸಿದ್ದು, ನಮಗೆ ನಮ್ಮದೇ ಅಭ್ಯರ್ಥಿ ಬೇಕು. ನಮ್ಮಲ್ಲಿಯೇ ಒಬ್ಬ ಅಭ್ಯರ್ಥಿಯನ್ನು ಬೇಕು. ನಾವು ಒಂದು ಸಭೆ ಮಾಡಿ ನಮ್ಮ ಬೇಡಿಕೆಯನ್ನು ಹೈ ಕಮಾಂಡ್‌ಗೆ ಮುಟ್ಟಿಸುತ್ತೇವೆ. ಹೊರಗಿನವರು ನಮಗೆ ಬೇಕಿಲ್ಲ. ಕನ್ಹಯ್ಯ ಕುಮಾರ್ ಬಗ್ಗೆ ಯಾವುದೇ ಅಸಮಾಧಾನ ಇಲ್ಲ. ಅವರ ಜೊತೆ ನಮಗೆ ಯಾವುದೇ ರೀತಿಯ ಸಮಸ್ಯೆ ಇಲ್ಲ. ನಮಗೆ ಹೊರಗಿನ ಅಭ್ಯರ್ಥಿ ಬೇಡ ಅನ್ನೋದಷ್ಟೇ ನಮ್ಮ ಬೇಡಿಕೆ. ಹೊರಗಿನವರು ಅಭ್ಯರ್ಥಿಯಾದರೆ ನಮ್ಮ ಸ್ಥಳೀಯ ನಾಯಕರು ಕಡೆಗಣನೆಯಾಗುತ್ತಾರೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
ಈ ಮೊದಲೇ ನಾವು ಹೊರಗಿನವರು ಅಭ್ಯರ್ಥಿಯಾಗಿ ಬರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದೆವು. ನಮ್ಮ ಬೇಡಿಕೆಯನ್ನು ಹೈಕಮಾಂಡ್ ಕಿವಿಗೆ ಹಾಕಿಕೊಳ್ಳಲೇ ಇಲ್ಲ. ನಮಗೆ ಕನ್ಹಯ್ಯ ಕುಮಾರ್ ಇಷ್ಟ ಇಲ್ಲ. ಹೊರಗಿನ ಅಭ್ಯರ್ಥಿಗಳಿಗೆ ನಮ್ಮ ರಾಜ್ಯದ ಬಗ್ಗೆ ಏನೂ ಗೊತ್ತಿರುವುದಿಲ್ಲ. ಹೀಗಿರುವಾಗ ಅವರಿಗೆ ಏಕೆ ಟಿಕೆಟ್ ಕೊಟ್ಟಿದ್ದಾರೆ. ನಮಗೆ ಕೇವಲ ಇಲ್ಲಿನವರೇ, ನಮ್ಮ ಕಷ್ಟ ಕಾರ್ಪಣ್ಯಗಳನ್ನು ಅರ್ಥ ಮಾಡಿಕೊಳ್ಳುವವರು ಅಭ್ಯರ್ಥಿಗಳಾಗಿದ್ದರೆ ಸಾಕು ಎಂದು ಮತ್ತೋರ್ವ ಪ್ರತಿಭಟನಾಕಾರ ಹೇಳಿದ್ದಾರೆ.
ಈಶಾನ್ಯ ದೆಹಲಿಯಿಂದ ಕನ್ಹಯ್ಯ ಕುಮಾರ್ (Kanhaiya Kumar) ಸ್ಪರ್ಧಿಸಲಿದ್ದು, ಬಿಜೆಪಿಯ ಮನೋಜ್ ತಿವಾರಿ ವಿರುದ್ಧ ಕಣಕ್ಕೆ ಇಳಿದಿದ್ದಾರೆ. 37 ವರ್ಷದ ಕುಮಾರ್ ತಾವು ಎರಡನೇ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. 2019 ರಲ್ಲಿ, ಅವರು ಬಿಹಾರದ ಬೆಗುಸರಾಯ್ನಿಂದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು, ಅಲ್ಲಿ ಅವರು ಕೇಂದ್ರ ಸಚಿವ ಮತ್ತು ಭಾರತೀಯ ಜನತಾ ಪಕ್ಷದ ಮುಖಂಡ ಗಿರಿರಾಜ್ ಸಿಂಗ್ ವಿರುದ್ಧ ಸೋತಿದ್ದರು. ಅವರು 2021 ರಲ್ಲಿ ಕಾಂಗ್ರೆಸ್ ಸೇರಿದ್ದರು.
ಇದನ್ನೂ ಓದಿ: Hassan Pen Drive Case: ಪ್ರಜ್ವಲ್ ರೇವಣ್ಣ ಜೆಡಿಎಸ್‌ನಿಂದ ಉಚ್ಚಾಟನೆ? ಎಚ್.ಡಿ. ದೇವೇಗೌಡರ ನಿರ್ಧಾರಕ್ಕೇನು ಕಾರಣ?
ಮನೋಜ್ ತಿವಾರಿ ಈ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿದ್ದಾರೆ. 2019 ರಲ್ಲಿ ಭೋಜ್ಪುರಿ ನಟ ಮತ್ತು ರಾಜಕಾರಣಿ ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರನ್ನು ಸೋಲಿಸಿದ್ದರು. ಚಾಂದನಿ ಚೌಕ್ ನಿಂದ ಹಿರಿಯ ಮುಖಂಡ ಜೈ ಪ್ರಕಾಶ್ ಅಗರ್ ವಾಲ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಅವರು 1984, 1989 ಮತ್ತು 1996 ರಲ್ಲಿ ಈ ಸ್ಥಾನದಿಂದ ಗೆದ್ದಿದ್ದರು. ಉದಿತ್ ರಾಜ್ ಅವರು ವಾಯುವ್ಯ ದೆಹಲಿಯ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. 2014ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆಮ್ ಆದ್ಮಿ ಪಕ್ಷದೊಂದಿಗಿನ ಸೀಟು ಹಂಚಿಕೆ ಒಪ್ಪಂದದ ಪ್ರಕಾರ ಕಾಂಗ್ರೆಸ್ ಏಳು ಸ್ಥಾನಗಳಲ್ಲಿ ಮೂರು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ.