Site icon Vistara News

Lok Sabha Election 2024: ಮುಂಚಿತವಾಗಿಯೇ ನಡೆಯಲಿದೆಯೆ ಲೋಕಸಭೆ ಚುನಾವಣೆ?

new parliment and modi

ಹೊಸದಿಲ್ಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಸರ್ಕಾರದ ಕೆಲವು ಅಚ್ಚರಿಯ ಘೋಷಣೆಗಳು, ಕೇಂದ್ರ ಸರ್ಕಾರ ಅತಿ ಶೀಘ್ರವಾಗಿ ಲೋಕಸಭೆ ಚುನಾವಣೆಗೆ (Lok Sabha Election 2024) ಮುಂದಾಗಲಿದೆ ಎಂಬ ಊಹಾಪೋಹವನ್ನು ಹುಟ್ಟುಹಾಕಿದೆ.

ಎಲ್ಲಾ ಗ್ರಾಹಕರಿಗೆ ಅನ್ವಯವಾಗುವಂತೆ ಎಲ್‌ಪಿಜಿ (LPG cylinder) ಸಿಲಿಂಡರ್ ದರವನ್ನು 200 ರೂ.ಗಳಷ್ಟು ಕಡಿಮೆ ಮಾಡಿದ್ದು ಮತ್ತು ಉಜ್ವಲ (ujjwala yojana) ಯೋಜನೆಯನ್ನು ಇನ್ನೂ 75 ಲಕ್ಷ ಮಂದಿಗೆ ಸಿಗುವಂತೆ ವಿಸ್ತರಿಸಿರುವುದು ಮೋದಿ ಸರ್ಕಾರದ ಅಚ್ಚರಿಯ ನಿರ್ಧಾರಗಳಾಗಿವೆ. ಇದರ ಮೂಲಕ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬೇಗನೆ ಲೋಕಸಭೆ ಚುನಾವಣೆಗೆ ಮುಂದಾಗಬಹುದು ಎಂಬ ಊಹಾಪೋಹವನ್ನು ಹುಟ್ಟುಹಾಕಿದೆ. ಮುಂದಿನ ಮೇ-ಜೂನ್‌ವರೆಗೂ ಇರುವ ಲೋಕಸಭೆ ಅವಧಿ ಪೂರ್ಣಗೊಳ್ಳುವ ಮುನ್ನವೇ, ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಸಬಹುದು ಎಂದು ಊಹಿಸಲಾಗಿದೆ.

ವಿರೋಧ ಪಕ್ಷದ ಕನಿಷ್ಠ ಇಬ್ಬರು ಮುಖ್ಯಮಂತ್ರಿಗಳು- ಮಮತಾ ಬ್ಯಾನರ್ಜಿ (mamata banerjee) ಮತ್ತು ನಿತೀಶ್ ಕುಮಾರ್ (nitish kumar)- ಈ ಬಗ್ಗೆ ಎಚ್ಚರಿಕೆಯ ಗಂಟೆ ಬಾರಿಸಿದ್ದಾರೆ.ಡಿಸೆಂಬರ್ ಅಥವಾ ಜನವರಿಯಲ್ಲಿ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಬಹುದು ಕೇಂದ್ರ ನಡೆಸಬಹುದು ಎಂದು ಇಬ್ಬರೂ ಖಡಾಖಂಡಿತವಾಗಿ ಘೋಷಿಸಿದ್ದಾರೆ. ಆದರೆ, ಮೋದಿ ಸರ್ಕಾರ ಅವಧಿಪೂರ್ವ ಚುನಾವಣೆಗೆ ಹೋಗುವ ಮನಸ್ಥಿತಿಯಲ್ಲಿಲ್ಲ ಎಂದು ಕೇಂದ್ರ ಸರ್ಕಾರದ ಆಪ್ತ ಮೂಲಗಳು ತಿಳಿಸಿವೆ.

ಸರ್ಕಾರ ಯಾವುದೇ ಕಾರಣಕ್ಕೂ ಅವಧಿಪೂರ್ವ ಚುನಾವಣೆಗೆ ಹೋಗುವ ವಿಚಾರ ಪರಿಗಣಿಸುವುದಿಲ್ಲ. 2019ರಲ್ಲಿ ನರೇಂದ್ರ ಮೋದಿಯವರು ಗೆದ್ದ 303 ಸ್ಥಾನಗಳ ಜನಾದೇಶವು ಐದು ವರ್ಷಗಳವರೆಗೆ ಇರುವುದರಿಂದ ಅಂತಹ ಕ್ರಮ ತಪ್ಪು. ಬಿಜೆಪಿ ಸರ್ಕಾರ ತನ್ನ ಅವಧಿಯನ್ನು ಪೂರ್ಣಗೊಳಿಸಲಿದೆ ಎಂದು ಕ್ಯಾಬಿನಟ್‌ ಸಚಿವರೊಬ್ಬರು ಹೇಳಿದ್ದಾರೆ ಎಂದು ಇಂಗ್ಲಿಷ್‌ ಸುದ್ದಿವಾಹಿನಿಯೊಂದು ವರದಿ ಮಾಡಿದೆ.

ಜಾಗತಿಕ ನಾಯಕರ ಜನಪ್ರಿಯತೆಯ ಶ್ರೇಯಾಂಕಗಳನ್ನು ಗಮನಿಸಿದರೆ ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್‌ನ ಇಮ್ಯಾನುಯೆಲ್ ಮ್ಯಾಕ್ರನ್ ಅಥವಾ ಯುಎಸ್ ಅಧ್ಯಕ್ಷ ಜೋ ಬೈಡೆನ್ ಅವರಂತಹ ನಾಯಕರನ್ನೂ ಹಿಂದಿಕ್ಕಿ ಇನ್ನೂ ಅಗ್ರಸ್ಥಾನದಲ್ಲಿದ್ದಾರೆ. ಅವರ ಜನಪ್ರಿಯತೆ ರೇಟಿಂಗ್‌ 2019ರಿಂದ ಸ್ಥಿರವಾಗಿವೆ. ಹಾಗಿರುವಾಗ ನಾವು ಮುಂಚಿತವಾಗಿ ಚುನಾವಣೆಗೆ ಹೋಗುವ ಅಗತ್ಯವೇನಿದೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

ವಿರೋಧ ಪಕ್ಷದ ನಾಯಕರಿಗೆ ಮೋದಿಯವರ ʼಅಭಿವೃದ್ಧಿ ರಾಜಕೀಯʼ ಇನ್ನೂ ಅರ್ಥವಾಗಿಲ್ಲ. ಎಲ್‌ಪಿಜಿ ಸಿಲಿಂಡರ್ ದರಗಳ ಕಡಿತ ಹಣದುಬ್ಬರವನ್ನು ನಿಯಂತ್ರಿಸುವ ಉದ್ದೇಶವನ್ನು ಹೊಂದಿದೆ. ಜನರು ಬಿಜೆಪಿಗೆ ಮತ ಹಾಕುವುದು ಅಭಿವೃದ್ಧಿಯ ಅಜೆಂಡಾಗಳ ಮೇಲೆಯೇ ಹೊರತು ಈ ಬೆಲೆ ಇಳಿಕೆಯ ಮೇಲೆ ಅಲ್ಲ ಎಂದಿದ್ದಾರೆ ಅವರು. ಸಿಲಿಂಡರ್‌ ಬೆಲೆ ಇಳಿಕೆಯಿಂದ ದೆಹಲಿಯಲ್ಲಿ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ ಬೆಲೆ ರೂ. 903ಕ್ಕೆ ಮತ್ತು ಮುಂಬಯಿಯಲ್ಲಿ ರೂ.902ಕ್ಕೆ ಇಳಿದಿದೆ. ಆಯುಷ್ಮಾನ್ ಭಾರತ್, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಮತ್ತು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗಳ ಯಶಸ್ಸು ಮತ್ತು ಇವುಗಳ ಫಲಾನುಭವಿಗಳ ಸಂಖ್ಯೆಯನ್ನು ಹೆಚ್ಚಿಸುವುದು ಇತ್ಯಾದಿ ಕ್ರಮಗಳು ಬಿಜೆಪಿಗೆ ಮರುಚುನಾವಣೆಯಲ್ಲಿ ಸಹಾಯ ಮಾಡುವ ಪ್ರಮುಖ ಅಂಶಗಳಲ್ಲಿ ಒಂದು ಬಿಜೆಪಿ ನಾಯಕರು ಉಲ್ಲೇಖಿಸಿದ್ದಾರೆ.

ಹೊಸದಿಲ್ಲಿಯಲ್ಲಿ ಜಿ20 ಶೃಂಗಸಭೆ ನಡೆಯಲಿದ್ದು, ಇದಕ್ಕೆ ಸ್ವಲ್ಪ ಮುಂಚಿತವಾಗಿ, ಪ್ಯೂ ರಿಸರ್ಚ್ ಸಂಸ್ಥೆ ಒಂದು ಸಮೀಕ್ಷೆಯನ್ನು ನಡೆಸಿದೆ. ಇದರಲ್ಲಿ ಸುಮಾರು 80% ಭಾರತೀಯರು ಪ್ರಧಾನಿ ನರೇಂದ್ರ ಮೋದಿಯವರನ್ನು ಅನುಮೋದಿಸುತ್ತಿದ್ದಾರೆ ಎಂದು ಕಂಡುಬಂದಿದೆ. ಜಾಗತಿಕ ಮಟ್ಟದಲ್ಲಿ ಭಾರತ ಇತ್ತೀಚೆಗೆ ಹೆಚ್ಚು ಪ್ರಭಾವಶಾಲಿಯಾಗಿದೆ ಎಂದು 10 ಭಾರತೀಯರಲ್ಲಿ ಏಳು ಮಂದಿ ನಂಬುತ್ತಾರೆ ಎಂದು ಅದು ಹೇಳಿದೆ.

ಈ ಹಿಂದಿನ ಲೋಕಸಭೆ ಚುನಾವಣೆಗಳಷ್ಟು ಶಾಕಿಂಗ್‌ ಅಲ್ಲದಿದ್ದರೂ, ಈ ಸಲದ ಸಾರ್ವತ್ರಿಕ ಚುನಾವಣೆಗಳ ಮೊದಲೂ ಅಚ್ಚರಿ ನೀಡಲು ಬಿಜೆಪಿಗೆ (BJP) ಸಾಕಷ್ಟು ಅವಕಾಶಗಳಿವೆ. ಭಾರತೀಯ ಚುನಾವಣಾ ಆಯೋಗ (Election commission) ಲೋಕಸಭಾ ಚುನಾವಣಾ ದಿನಾಂಕಗಳನ್ನು ಪ್ರಕಟಿಸುವ ಮೊದಲೇ ಕೆಲವು ಲೋಕಸಭೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸುವುದನ್ನು ಪಕ್ಷ ಪರಿಗಣಿಸುತ್ತಿದೆ. ಕೇಂದ್ರ ಚುನಾವಣಾ ಸಮಿತಿಯ ಆರಂಭಿಕ ಸಭೆಯ ನಂತರ ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗಳಲ್ಲಿ ದುರ್ಬಲ ಸ್ಥಾನಗಳಿಗೆ ಅಭ್ಯರ್ಥಿ ಪಟ್ಟಿಯನ್ನು ಬಿಜೆಪಿ ಪ್ರಕಟಿಸಿತ್ತು.

ಕಳೆದ ವರ್ಷ ಬಿಜೆಪಿಯು ತಾನು ದುರ್ಬಲ ಎಂದು ಪರಿಗಣಿಸಿರುವ 161 ಲೋಕಸಭಾ ಸ್ಥಾನಗಳನ್ನು ಗುರುತಿಸಿದೆ ಮತ್ತು ಇವುಗಳನ್ನು ಗೆಲ್ಲುವುದನ್ನು ತನ್ನ ಪ್ರಧಾನ ಗುರಿಯನ್ನಾಗಿ ಮಾಡಿದೆ. ಕಳೆದ ವರ್ಷ ಪಕ್ಷವು ದೇಶಾದ್ಯಂತ ದುರ್ಬಲ ಬೂತ್‌ಗಳನ್ನು ಸ್ಕ್ಯಾನ್ ಮಾಡಲು ದಿಲೀಪ್ ಘೋಷ್ ಮತ್ತು ಬಿಜಯಂತ್ ಜಯ್ ಪಾಂಡಾ ಸೇರಿದಂತೆ ನಾಲ್ಕು ಸದಸ್ಯರ ಸಮಿತಿಯನ್ನು ರಚಿಸಿತ್ತು.

ಒಂದು ವರ್ಷದ ಅವಧಿಯಲ್ಲಿ 161 ಲೋಕಸಭಾ ಸ್ಥಾನಗಳನ್ನು ಅಂತಿಮಗೊಳಿಸಲಾಗಿದೆ. ಇಲ್ಲಿಗೆ ಉನ್ನತ ನಾಯಕರನ್ನು ಪ್ರವಾಸಕ್ಕೆ ಕಳುಹಿಸಲಾಗಿದೆ. ಈ ಕ್ಷೇತ್ರಗಳಲ್ಲಿ ಕೇಸರಿ ಪಕ್ಷಕ್ಕೆ ಏನಾಗಿದೆ ಎಂಬುದರ ಕುರಿತು ವರದಿಗಳನ್ನು ಸಿದ್ಧಪಡಿಸಲಾಗುತ್ತಿದೆ. ಬಿಜೆಪಿಯ ಹಿರಿಯ ನಾಯಕ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಇಲ್ಲಿನ ಸಂಸದರಿಗೆ ಚಾಟಿ ಬೀಸಿದ್ದಾರೆ. ಅಮಿತ್ ಶಾ ಮತ್ತು ಜೆಪಿ ನಡ್ಡಾ ಸೇರಿದಂತೆ ಉನ್ನತ ನಾಯಕರು ಪಾಲ್ಗೊಳ್ಳುವ ಪ್ರವಾಸವನ್ನು ಪರಿಶೀಲಿಸಲು ಪಕ್ಷವು ಸೆಪ್ಟೆಂಬರ್ 1ರಂದು ಮಹತ್ವದ ಸಭೆಯನ್ನು ಕರೆದಿದೆ.

ಇದನ್ನೂ ಓದಿ: Lok Sabha Election: ಇಂದೇ ಎಲೆಕ್ಷನ್ ನಡೆದ್ರೆ ಎನ್‌ಡಿಎಗೆ ಅಧಿಕಾರ, ‘ಇಂಡಿಯಾ ಕೂಟ’ಕ್ಕೆ ಸೋಲು! ಯಾರಿಗೆ ಎಷ್ಟು ಸೀಟು?

ಈ ಪರಿಶೀಲನಾ ಸಭೆಯ ನಂತರ ಪಕ್ಷವು ಮುಂದಿನ ಹಂತಕ್ಕೆ ಮುಂದುವರಿಯುವ ಸಾಧ್ಯತೆಯಿದೆ. ಈ ಕ್ಷೇತ್ರಗಳಲ್ಲಿ ಪ್ರತಿಸ್ಪರ್ಧಿಗಳಿಗೆ ಸವಾಲು ಹಾಕುವ ಕ್ರಿಯಾತ್ಮಕ ಅಭ್ಯರ್ಥಿಗಳನ್ನು ಹುಡುಕಲಾಗುತ್ತಿದೆ. ಉತ್ತರ ಪ್ರದೇಶದ ಮೈನ್‌ಪುರಿ ಯಾದವ್ ಕುಟುಂಬದ ಭದ್ರಕೋಟೆಯಾಗಿದ್ದು, ಅಂತಹ ಒಂದು ಕ್ಷೇತ್ರ. ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಇತ್ತೀಚೆಗೆ ಅಲ್ಲಿಗೆ ಭೇಟಿ ನೀಡಿದ್ದರು. ವಿದೇಶಾಂಗ ವ್ಯವಹಾರಗಳ ಸಚಿವ ರಾಜ್‌ಕುಮಾರ್ ರಂಜನ್ ಸಿಂಗ್ ಅವರು ಸಿಕ್ಕಿಂನ ರಾಜಧಾನಿ ಗ್ಯಾಂಗ್ಟಾಕ್‌ಗೆ ಭೇಟಿ ನೀಡಿದ್ದರು. ಅರ್ಜುನ್ ರಾಮ್ ಮೇಘವಾಲ್ ಜಲಂಧರ್‌ಗೆ ಭೇಟಿ ನೀಡಿದ್ದರು.

ಮತ್ತೊಂದು ಮಹತ್ವದ ಸ್ಥಾನವೆಂದರೆ ಗಾಂಧಿ ಕುಟುಂಬದ ಭದ್ರಕೋಟೆಯಾದ ರಾಯ್ ಬರೇಲಿ. 2019ರ ಲೋಕಸಭಾ ಚುನಾವಣೆಯಲ್ಲಿ ಅಮೇಥಿಯಿಂದ ರಾಹುಲ್ ಗಾಂಧಿ ಆಘಾತಕಾರಿ ಸೋಲನ್ನಪ್ಪಿದ್ದರು. 2024ರಲ್ಲಿ ರಾಯ್ ಬರೇಲಿಯಿಂದ ಕಾಂಗ್ರೆಸ್ ಅನ್ನು ಪೂರ್ತಿ ಹೊರಹಾಕಲು ಬಿಜೆಪಿ ಮುಂದಾಗಿದೆ. ಬಿಜೆಪಿಯು ಚುನಾವಣೆ ಪ್ರಚಾರದಲ್ಲಿ ಎಲ್ಲಾ 161 ಅಲ್ಲದಿದ್ದರೂ ಕೆಲವು ಕ್ಷೇತ್ರಗಳನ್ನು ʼಬಹಳ ಗಂಭೀರವಾಗಿ ಪರಿಗಣಿಸುತ್ತಿದೆʼ ಎನ್ನಲಾಗಿದೆ.

ಇದನ್ನೂ ಓದಿ: Loksabha Election: ದಿಲ್ಲಿಯ ಎಲ್ಲ ಕಡೆ ಸ್ಪರ್ಧೆ: ಕಾಂಗ್ರೆಸ್;‌ ಹಾಗಿದ್ರೆ ನಾವು ನಿಮ್ಮ ಜತೆಗಿಲ್ಲ ಎಂದ ಆಪ್‌

Exit mobile version