ನವದೆಹಲಿ: ಲೋಕಸಭಾ ಚುನಾವಣೆ(Lok Sabha Election 2024)ಯ ಫಲಿತಾಂಶ(Results)ಕ್ಕೆ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ದೇಶಾದ್ಯಂತ ಮತ ಎಣಿಕೆ ಪ್ರಕ್ರಿಯೆ ಶುರುವಾಗಿದೆ. ಇನ್ನು ಎಕ್ಸಿಟ್ ಪೋಲ್(Exit Poll) ರಿಸಲ್ಟ್ ಹೊರ ಬೀಳುತ್ತಿದ್ದಂತೆ ಮತಯಂತ್ರ ತಿರುಚಲಾಗಿದೆ(EVM Tampering) ಎಂದು ಪ್ರತಿಪಕ್ಷಗಳು ತಗಾದೆ ತೆಗೆದಿವೆ. ಫಲಿತಾಂಶ ಹೊರ ಬೀಳುವುದಕ್ಕೂ ಮುನ್ನ ಮತಯಂತ್ರ ಬಗ್ಗೆ ಕಾಂಗ್ರೆಸ್ ಸೇರಿದಂತೆ ಹಲವು ಪ್ರತಿಪಕ್ಷ ಮುಖಂಡರು ಮತಯಂತ್ರ ತಿರುಚಿರುವ ಬಗ್ಗೆ ಆರೋಪ ಶುರುವಿಟ್ಟುಕೊಂಡಿದ್ದಾರೆ.
ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಇವಿಎಂ ದೋಷದ ಬಗ್ಗೆ ತಗಾದೆ ತೆಗೆದಿದ್ದಾರೆ. ಈ ಬಾರಿ ಏನಾದರೂ ಬಿಜೆಪಿ 300ಕ್ಕೂ ಅಧಿಕ ಸ್ಥಾನಗಳನ್ನು ಗಳಿಸಿದರೆ ಅದು ಕೇವಲ ಇವಿಎಂ ಸಹಾಯದಿಂದ ಎಂದು ಹೇಳುವ ಮೂಲಕ ಮತಯಂತ್ರಗಳ ಕಾರ್ಯಕ್ಷಮತೆ ಮತ್ತು ದಕ್ಷತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಾರಿ ಕಾಂಗ್ರೆಸ್ ಸ್ಪಷ್ಟ ಬಹುಮತದ ಮೂಲಕ ಸರ್ಕಾರ ರಚಿಸಲಿದೆ. ಜನರೇ ನಿಜವಾಗಿ ಮತದಾನ ಮಾಡಿದ್ದರೆ ಈ ಬಾರಿ ಬಿಜೆಪಿ ನೇತೃತ್ವದ ಎನ್‌ಡಿಎ ಗೆಲುವು ಸಾಧ್ಯವೇ ಇಲ್ಲ. ನಮಗೆ 295 ಸಿಕ್ಕಿ ನಾವು ಸರ್ಕಾರ ರಚಿಸುವುದು ಖಚಿತ. ಒಂದು ವೇಳೆ ಬಿಜೆಪಿ 300ಕ್ಕಿಂತ ಅಧಿಕ ಸ್ಥಾನ ಗಳಿಸಿದ್ದಲ್ಲಿ ಅದು ಜನಮತ ಅಲ್ಲ.. ಅದು ಕೇವಲ ಇವಿಎಂನಿಂದಾಗಿ ಮಾತ್ರ ಎಂದು ಹೇಳಿದ್ದಾರೆ.
ಇದೇ ರೀತಿ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಕೂಡ ಇವಿಎಂ ಕ್ಷಮತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಇವಿಎಂಗಳನ್ನು ತಮ್ಮ ಗೆಲುವಿಗೆ ದುರ್ಬಳಕೆ ಮಾಡಿಕೊಳ್ಳಲು ಬಿಜೆಪಿ ಯತ್ನಿಸಿದೆ. ಇವಿಎಂ ಯಂತ್ರಗಳನ್ನು ಯಾರು ತಯಾರಿಸುತ್ತಾರೆ ಮತ್ತು ಈ ಯಂತ್ರಗಳಲ್ಲಿ ಬಳಸುವ ಚಿಪ್‌ಗಳನ್ನು ಯಾರು ತಯಾರಿಸುತ್ತಾರೆ ಎಂಬುದನ್ನು ನಾವು ತಿಳಿದುಕೊಳ್ಳಲು ಬಯಸುತ್ತೇವೆ. ಸುಮಾರು 1.9 ಮಿಲಿಯನ್ ಇವಿಎಂ ಯಂತ್ರಗಳು ಬಹಳ ಸಮಯದಿಂದ ಕಾಣೆಯಾಗಿವೆ. ನಾಪತ್ತೆಯಾಗಿರುವ ಇವಿಎಂಗಳಲ್ಲಿ ಸುಳ್ಳು ಮಾಹಿತಿ ನಮೂದಿಸಲಾಗಿದೆ ಮತ್ತು ಈಗ ಬಳಸುತ್ತಿರುವ ಇವಿಎಂಗಳ ಬದಲಿಗೆ ಆ ಯಂತ್ರಗಳನ್ನು ಇರಿಸಲಾಗಿದೆ ಎಂಬ ವ್ಯಾಪಕ ಶಂಕೆ ಇದೆ ಎಂದು ಅನುಮಾನ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ:Election Results 2024: ಎನ್‌ಡಿಎ 400 ಸ್ಥಾನ ತಲುಪಲು ಈ ರಾಜ್ಯಗಳೇ ಹೆದ್ದಾರಿ! ಸಮೀಕ್ಷೆಗಳು ಹೇಳಿದ್ದೇನು?
ವಿರೋಧ ಪಕ್ಷಗಳು ಸೋಲಿನ ಬಳಿಕ ಇವಿಎಂ ಯಂತ್ರಗಳನ್ನು ದೂರಲಿವೆ ಎಂಬುದಾಗಿ ಬಿಜೆಪಿ ಹಿರಿಯ ನಾಯಕ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಈ ಹಿಂದೆಯೇ ಲೇವಡಿ ಮಾಡಿದ್ದರು. ಉತ್ತರ ಪ್ರದೇಶದದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ್ದ ಅವರು, ಜೂನ್ 4ರಂದು ಮತ ಎಣಿಕೆ ನಡೆಯಲಿದೆ. ಜೂನ್ 4 ರ ಮಧ್ಯಾಹ್ನ, ಈ ಇಬ್ಬರು ರಾಜಕುಮಾರರು (ರಾಹುಲ್ ಮತ್ತು ಅಖಿಲೇಶ್) ಪತ್ರಿಕಾಗೋಷ್ಠಿ ನಡೆಸಿ ಇವಿಎಂ ದೋಷಪೂರಿತವಾಗಿದೆ, ಆದ್ದರಿಂದ ನಾವು ಸೋತಿದ್ದೇವೆ ಎಂದು ಹೇಳುತ್ತಾರೆ. ಅವರು ತಮ್ಮ ಸೋಲಿಗೆ ಇವಿಎಂ ಅನ್ನು ದೂಷಿಸಲು ನಿರ್ಧರಿಸಿದ್ದಾರೆ” ಎಂದು ಹೇಳಿದ್ದರು.
ಪ್ರತಿಪಕ್ಷಗಳಿಗೆ ಪ್ರಧಾನಿ ಅಭ್ಯರ್ಥಿ ಇಲ್ಲ ಮತ್ತು ಐದು ವರ್ಷಗಳಲ್ಲಿ ಐದು ಪ್ರಧಾನಿಗಳನ್ನು ಮಾಡುತ್ತೇವೆ ಎಂದು ಅವರು ಹೇಳುತ್ತಾರೆ. ಇದು ಜನರಲ್ ಸ್ಟೋರ್ ಅಲ್ಲ, ಆದರೆ 130 ಕೋಟಿ ಜನರಿರುವ ದೇಶ. ಅಂತಹ ಪ್ರಧಾನಿ ಕೆಲಸ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.