Site icon Vistara News

Lok Sabha Election 2024: 5ನೇ ಹಂತದ ಮತದಾನ; 49 ಕ್ಷೇತ್ರಗಳಲ್ಲಿ ವೋಟಿಂಗ್ ಶುರು

Lok Sabha Election 2024

ಲಖನೌ: ಲೋಕಸಭೆ ಚುನಾವಣೆಯ (Lok Sabha Election 2024) ಐದನೇ ಹಂತದ ಮತದಾನ(Fifth Phase Voting) ಪ್ರಕ್ರಿಯೆ ಈಗಾಗಲೇ ಶುರುವಾಗಿದೆ. ಆರು ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ 49 ಕ್ಷೇತ್ರಗಳಲ್ಲಿ ಸೋಮವಾರ ಬೆಳಗ್ಗೆ 7ಗಂಟೆಯಿಂದಲೇ ಮತದಾನ ಆರಂಭವಾಗಿದೆ. ದೇಶದ ಜನರ ಗಮನ ಸೆಳೆದಿರುವ ರಾಯ್‌ಬರೇಲಿ, ಅಮೇಥಿಯಲ್ಲೂ ಇಂದು ಮತದಾನ ಶುರುವಾಗಿದ್ದು, ಸಂಜೆ 6ಗಂಟೆವರೆಗೆ ನಡೆಯಲಿದೆ.

ಉತ್ತರ ಪ್ರದೇಶದ 14, ಮಹಾರಾಷ್ಟ್ರದ 13, ಪಶ್ಚಿಮ ಬಂಗಾಳ 7, ಬಿಹಾರ ಹಾಗೂ ಒಡಿಶಾದಲ್ಲಿ ತಲಾ 5, ಜಾರ್ಖಂಡ್‌ನಲ್ಲಿ 3, ಜಮ್ಮು ಕಾಶ್ಮೀರ ಮತ್ತು ಲಡಾಕ್‌ನ ತಲಾ 1 ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದೆ. ಕೇಂದ್ರ ಸಚಿವರಾದ ರಾಜನಾಥ್‌ ಸಿಂಗ್‌ (ಲಖನೌ), ಸ್ಮೃತಿ ಇರಾನಿ (ಅಮೇಥಿ), ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (ರಾಯ್‌ಬರೇಲಿ), ಜಮ್ಮು-ಕಾಶ್ಮೀರ ಮಾಜಿ ಸಿಎಂ ಒಮರ್‌ ಅಬ್ದುಲ್ಲಾ (ಬಾರಾಮುಲ್ಲಾ) ಸೇರಿ ಹಲವು ಗಣ್ಯರ ಭವಿಷ್ಯವು ಸೋಮವಾರ ಮತಯಂತ್ರಗಳಲ್ಲಿ ಭದ್ರವಾಗಲಿದೆ.

ಇನ್ನು ಮುಂಬೈನಲ್ಲಿ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌, ಉದ್ಯಮಿ ಅನಿಲ್ ಅಂಬಾನಿ ಸೇರಿದಂತೆ ಅನೇಕ ಗಣ್ಯರು ಬೆಳಗ್ಗೆಯೇ ಮತಗಟ್ಟೆಗೆ ಬಂದು ಮತ ಚಲಾಯಿಸಿದರು.

ದೇಶದಲ್ಲಿ ಈಗಾಗಲೇ ನಾಲ್ಕು ಹಂತಗಳಲ್ಲಿ 379 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಬಹುತೇಕ ಕಡೆಗಳಲ್ಲಿ ಶಾಂತಿಯುತವಾಗಿ ಮತದಾನ ನಡೆದಿದ್ದು, ಈಗ ಐದನೇ ಹಂತದ ಮತದಾನಕ್ಕೆ ಚುನಾವಣೆ ಆಯೋಗವು ಸಿದ್ಧಗೊಂಡಿದೆ. ಇನ್ನು ಸೋಮವಾರವೇ ಅಯೋಧ್ಯೆಯ ಜಿಲ್ಲೆಯನ್ನು ಒಳಗೊಂಡಿರುವ ಫೈಜಾಬಾದ್‌ ಲೋಕಸಭೆ ಕ್ಷೇತ್ರದಲ್ಲಿ ಮತದಾನ ನಡೆಯಲಿದ್ದು, ಬಿಜೆಪಿಯ ಹಾಲಿ ಸಂಸದ ಲಲ್ಲು ಸಿಂಗ್‌ ಅವರೇ ಮತ್ತೆ ಕಣಕ್ಕಿಳಿದಿದ್ದಾರೆ. ರಾಮಮಂದಿರ ಉದ್ಘಾಟನೆಯ ಹಿನ್ನೆಲೆಯಲ್ಲಿ ಇಲ್ಲಿಯು ಬಿಜೆಪಿ ಅಭ್ಯರ್ಥಿಯ ಗೆಲುವು ನಿಶ್ಚಿತ ಎಂದು ಹೇಳಲಾಗುತ್ತಿದೆ. 4.69 ಕೋಟಿ ಪುರುಷ, 4.26 ಕೋಟಿ ಮತ್ತು 5,409 ತೃತೀಯ ಲಿಂಗಿ ಮತದಾರರು ಸೇರಿದಂತೆ 8.95 ಕೋಟಿಗೂ ಅಧಿಕ ಮತದಾರರು ಇಂದು 695 ಅಭ್ಯರ್ಥಿಗಳ ಅದೃಷ್ಟ ನಿರ್ಧರಿಸಲಿದ್ದಾರೆ.

4ನೇ ಹಂತದಲ್ಲಿ ಹೆಚ್ಚಿದ ಮತದಾನ

ನಾಲ್ಕನೇ ಹಂತದಲ್ಲಿ ಶೇ.69.16ರಷ್ಟು ಮತದಾನ ದಾಖಲಾಗಿದ್ದು, ಕಳೆದ ಮೂರು ಹಂತಗಳಿಗಿಂತ ಗರಿಷ್ಠ ಮತದಾನ ದಾಖಲಾಗಿದೆ. ಮೊದಲ ಹಂತದಲ್ಲಿ ನಡೆದ ಮತದಾನ ಪ್ರಮಾಣವು ಶೇ.66.14ರಷ್ಟಿದ್ದರೆ, ಎರಡನೇ ಹಂತದಲ್ಲಿ ಶೇ.66.71ರಷ್ಟು ಮತದಾನ ದಾಖಲಾಗಿತ್ತು. ಮೂರನೇ ಹಂತದಲ್ಲಿ ಒಟ್ಟು ಶೇ.65.68ರಷ್ಟು ಮತದಾನ ದಾಖಲಾಗಿತ್ತು. ಮೂರೂ ಹಂತಗಳಲ್ಲಿ 2019ಕ್ಕಿಂತ ಕಡಿಮೆ ಮತದಾನ ದಾಖಲಾಗಿದ್ದು ಚರ್ಚೆಗೆ ಗ್ರಾಸವಾಗಿತ್ತು. ಆದರೀಗ, 4ನೇ ಹಂತದಲ್ಲಿ ಶೇ.69.16ರಷ್ಟು ಮತದಾನ ದಾಖಲಾಗಿದ್ದು, ಕಳೆದ ಬಾರಿಗಿಂತ ಕೇವಲ 0.40ರಷ್ಟು ಕಡಿಮೆಯಾಗಿದೆ. ಹಾಗಾಗಿ, ನಾಲ್ಕನೇ ಹಂತದ ಮತದಾನವು ಸಕಾರಾತ್ಮಕ ಬೆಳವಣಿಗೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ದೇವೇಗೌಡ ಇನ್ನೂ ಆತ್ಮಹತ್ಯೆ ಮಾಡಿಕೊಂಡಿಲ್ವಲ್ಲ; ಹೊಸ ಆಡಿಯೊದಲ್ಲಿ ಶಿವರಾಮೇಗೌಡ ಸ್ಫೋಟಕ ಹೇಳಿಕೆ

Exit mobile version