ಕೋಲ್ಕತ್ತಾ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ʻಇಂಡಿಯಾ ಮೈತ್ರಿಕೂಟʼ ಒಗ್ಗಟ್ಟಾಗಿ ಬಿಜೆಪಿಯನ್ನು ಎದುರಿಸುವ ಕನಸಿಗೆ ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಮಮತಾ ಬ್ಯಾನರ್ಜಿ (Mamata Banerjee) ದೊಡ್ಡ ಹೊಡೆತ ಕೊಟ್ಟಿದ್ದಾರೆ. ಮಹತ್ವದ ಘೋಷಣೆ ಹೊರಡಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ (Trinamool Congress) ರಾಜ್ಯದಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಹೇಳಿದ್ದಾರೆ. ತೃಣಮೂಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಹೇಳುವ ಮೂಲಕ ಇಂಡಿಯಾ ಒಕ್ಕೂಟದಿಂದ ದೂರ ಸರಿದಿದ್ದಾರೆ.
2024ರ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮಮತಾ ಬ್ಯಾನರ್ಜಿ, “ನಾವು ಪಶ್ಚಿಮ ಬಂಗಾಳಕ್ಕೆ ಸಂಬಂಧಿಸಿ ಕಾಂಗ್ರೆಸ್‌ನೊಂದಿಗೆ ಸಂಪರ್ಕದಲ್ಲಿಲ್ಲ. ನಾವು ಯಾವುದೇ ಮೈತ್ರಿ ಮಾಡಿಕೊಳ್ಳುತ್ತಿಲ್ಲ. ಇಲ್ಲಿ ಕಾಂಗ್ರೆಸ್ ಸ್ವಂತ ಬಲದಿಂದ ಹೋರಾಡಲಿ. ನಾವು ಸ್ವತಂತ್ರವಾಗಿ ಸ್ಪರ್ಧಿಸುತ್ತೇವೆ. ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದುʼʼ ಎಂದು ತಿಳಿಸಿದ್ದಾರೆ.
ಟಿಎಂಸಿ ಭದ್ರಕೋಟೆಯಾದ ಬಿರ್ಭುಮ್ ಜಿಲ್ಲೆಯಲ್ಲಿ ನಡೆದ ಗುಪ್ತ ಸಭೆಯ ಒಂದು ದಿನದ ನಂತರ ಮಮತಾ ಬ್ಯಾನರ್ಜಿ ಈ ಪ್ರಕಟಣೆ ಹೊರಡಿಸಿದ್ದಾರೆ. ಈ ಮೂಲಕ ಲೋಕಸಭಾ ಚುನಾವಣೆಗೆ ಮುನ್ನ ಸೀಟು ಹಂಚಿಕೆಯ ಬಗ್ಗೆ ಕಾಂಗ್ರೆಸ್ ಮತ್ತು ಟಿಎಂಸಿ ನಡುವೆ ಬಿರುಕು ಕಂಡುಬಂದಿದೆ. ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಅಧೀರ್ ರಂಜನ್ ಚೌಧರಿ ಮಂಗಳವಾರ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿ ಅವರನ್ನು “ಅವಕಾಶವಾದಿ” ಎಂದು ಕರೆದಿದ್ದರು.
“ಈ ಬಾರಿ ಮಮತಾ ಬ್ಯಾನರ್ಜಿ ಅವರೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುವುದಿಲ್ಲ. ಚುನಾವಣೆಯಲ್ಲಿ ಹೇಗೆ ಸ್ಪರ್ಧಿಸಬೇಕೆಂದು ಕಾಂಗ್ರೆಸ್‌ಗೆ ತಿಳಿದಿದೆ. ಮಮತಾ ಬ್ಯಾನರ್ಜಿ ಒಬ್ಬ ಅವಕಾಶವಾದಿ; ಅವರು 2011ರಲ್ಲಿ ಕಾಂಗ್ರೆಸ್‌ನ ಕರುಣೆಯಿಂದ ಅಧಿಕಾರಕ್ಕೆ ಬಂದಿದ್ದರು” ಎಂದು ಚೌಧರಿ ಹೇಳಿಕೆ ನೀಡಿದ್ದರು.
“ಸೀಟು ಹಂಚಿಕೆಯ ಬಗ್ಗೆ ಮಾತುಕತೆಗಳು ನಡೆಯುತ್ತಿವೆ. ನಾನು ಇಲ್ಲಿ ಆ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ. ಆದರೆ ಮಮತಾ ಬ್ಯಾನರ್ಜಿ ನನಗೆ ಮತ್ತು ನಮ್ಮ ಪಕ್ಷಕ್ಕೆ ತುಂಬಾ ಹತ್ತಿರವಾಗಿದ್ದಾರೆ. ಕೆಲವೊಮ್ಮೆ ನಮ್ಮ ನಾಯಕರು ಏನನ್ನಾದರೂ ಹೇಳುತ್ತಾರೆ, ಅವರ ನಾಯಕರು ಏನನ್ನಾದರೂ ಹೇಳುತ್ತಾರೆ ಮತ್ತು ಅದು ಮುಂದುವರಿಯುತ್ತದೆ. ಇದು ಸಹಜ. ಅಂತಹ ಹೇಳಿಕೆಗಳು ಮುಖ್ಯವಲ್ಲ ಮತ್ತು ಇವು ಯಾವುದಕ್ಕೂ ಅಡ್ಡಿಪಡಿಸುವುದಿಲ್ಲ” ಎಂದು ರಾಹುಲ್ ಗಾಂಧಿ ತಮ್ಮ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಸಂದರ್ಭದಲ್ಲಿ ಹೇಳಿದ್ದರು. ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಒಟ್ಟು 42 ಕ್ಷೇತ್ರಗಳ ಪೈಕಿ ಕೇವಲ ಎರಡು ಕ್ಷೇತ್ರಗಳನ್ನು ಮಾತ್ರ ಹಂಚಿಕೊಳ್ಳುವ ಟಿಎಂಸಿಯ ಪ್ರಸ್ತಾಪದ ಬಗ್ಗೆ ಈಗಾಗಲೇ ರಾಜ್ಯ ಕಾಂಗ್ರೆಸ್ ನಿರಾಶೆ ವ್ಯಕ್ತಪಡಿಸಿತ್ತು.
ಇದನ್ನೂ ಓದಿ: Lok Sabha Election 2024: ಏಪ್ರಿಲ್ 16ರಿಂದ ಲೋಕಸಭೆ ಚುನಾವಣೆ? ಚುನಾವಣೆ ಆಯೋಗ ಹೇಳಿದ್ದೇನು?
“ಕಾಂಗ್ರೆಸ್ ಜತೆ ಸೀಟು ಹಂಚಿಕೆ ಮಾತುಕತೆಯ ಬಗ್ಗೆ ನಾವು ಯೋಚಿಸುವ ಅಗತ್ಯವಿಲ್ಲ ಎಂದು ಪಕ್ಷದ ಮುಖ್ಯಸ್ಥರು ಸ್ಪಷ್ಟವಾಗಿ ಹೇಳಿದ್ದಾರೆ. ಪಕ್ಷವು ಅವರಿಗೆ ಎರಡು ಸ್ಥಾನಗಳನ್ನು ಹಂಚಿಕೆ ಮಾಡಿದೆ. ಆದರೆ ಕಾಂಗ್ರೆಸ್ 10-12 ಸ್ಥಾನಗಳಿಗೆ ಬೇಡಿಕೆ ಇಡುತ್ತಿದೆ” ಎಂದು ಟಿಎಂಸಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ