Site icon Vistara News

Lok Sabha Election 2024: ಪ್ರಧಾನಿ ಮೋದಿಯವರ ಲೋಕಸಭೆ ಚುನಾವಣೆ ಪ್ರಚಾರ ಬುಲಂದ್‌ಶಹರ್‌ನಿಂದ; ಅದೇಕೆ?

PM Narendra Modi

ಹೊಸದಿಲ್ಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಲೋಕಸಭೆ ಚುನಾವಣೆಯ (Lok Sabha Election 2024) ತಮ್ಮ ಪ್ರಚಾರವನ್ನು ಉತ್ತರ ಪ್ರದೇಶದ ಬುಲಂದ್‌ಶಹರ್‌ನಿಂದ ನಾಳೆಯಿಂದಲೇ ಆರಂಭಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮೂರನೇ ಅವಧಿಗೂ ಪ್ರಧಾನಿ ಹುದ್ದೆಯನ್ನು ಉಳಿಸಿಕೊಳ್ಳುವತ್ತ ಗಮನ ನೆಟ್ಟಿರುವ ಮೋದಿ, ಪೂರ್ವ ಯುಪಿಯ ವಾರಣಾಸಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಆದರೆ ಪ್ರಚಾರವನ್ನು ಮಾತ್ರ ಜ.25ರಂದು ಬುಲಂದ್‌ಶಹರ್‌ನಿಂದ ಪ್ರಾರಂಭಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮ ಮಂದಿರದಲ್ಲಿ (Ayodhya Ram Mandir) ರಾಮ್ ಲಲ್ಲಾನ (Ram Lalla) ಮಹಾಭಿಷೇಕ ನಡೆದ ಕೆಲವೇ ದಿನಗಳಲ್ಲಿ ಬುಲಂದ್‌ಶಹರ್‌ನಲ್ಲಿ ರ್ಯಾಲಿ ಆಯೋಜಿಸಲ್ಪಟ್ಟಿದೆ. ಬಿಜೆಪಿಯ ಕಾರ್ಯಕರ್ತರು, ಮುಖಂಡರು ವ್ಯವಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ರ್ಯಾಲಿಯಲ್ಲಿ ಸುಮಾರು ಐದು ಲಕ್ಷ ಜನ ಪಾಲ್ಗೊಳ್ಳಲಿದ್ದಾರೆ ಎಂದು ಭಾರತೀಯ ಜನತಾ ಪಕ್ಷ ಹೇಳಿಕೊಂಡಿದೆ.

ಬುಲಂದ್‌ಶಹರ್ ಏಕೆ?

ವಾರಣಾಸಿಯು ಪ್ರಧಾನಿ ಮೋದಿಯವರ ತವರು ಕ್ಷೇತ್ರವಾಗಿದೆ. ಆದರೆ ಅವರು ಬುಲಂದ್‌ಶಹರ್‌ನಿಂದ ಪ್ರಚಾರ ಆರಂಭಿಸುವ ನಿರ್ಧಾರದ ಹಿಂದಿನ ಕಾರಣ ಹಲವು ಊಹಾಪೋಹಗಳನ್ನು ಹುಟ್ಟುಹಾಕಿದೆ.

2014ರ ಲೋಕಸಭೆ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ 80ರಲ್ಲಿ 71 ಸ್ಥಾನಗಳನ್ನು ಗೆದ್ದು ಮುನ್ನಡೆದ ಬಿಜೆಪಿ, 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಒಂಬತ್ತು ಸ್ಥಾನಗಳ ಕುಸಿತ ಕಂಡಿತು. 62 ಲೋಕಸಭಾ ಸ್ಥಾನಗಳಲ್ಲಿ ವಿಜಯವನ್ನು ದಾಖಲಿಸಿತು. ಅದರ ಮೈತ್ರಿ ಪಾಲುದಾರ ಅಪ್ನಾ ದಳ (ಸೋನೆಲಾಲ್) ಎರಡು ಸ್ಥಾನಗಳಲ್ಲಿ ಗೆದ್ದಿದೆ. 2014ರಲ್ಲಿ ಪಶ್ಚಿಮ ಉತ್ತರ ಪ್ರದೇಶದ 14 ಸ್ಥಾನಗಳನ್ನು ಹೊಂದಿದ್ದ ಬಿಜೆಪಿ 2019ರಲ್ಲಿ ಆರು ಕ್ಷೇತ್ರಗಳಲ್ಲಿ ಸೋತು ಎಂಟು ಸ್ಥಾನಗಳನ್ನು ಮಾತ್ರ ಗೆದ್ದಿತ್ತು.

ವರದಿಗಳ ಪ್ರಕಾರ 2024ರ ಚುನಾವಣೆಯಲ್ಲಿ ಈ ಪ್ರದೇಶದಲ್ಲಿ ಅಲೆಯನ್ನು ತಿರುಗಿಸಲು ಪ್ರಧಾನಿ ತಯಾರಿ ನಡೆಸುತ್ತಿದ್ದಾರೆ. ಬುಲಂದ್‌ಶಹರ್‌ನಿಂದ ಈ ಪ್ರದೇಶದ ದೊಡ್ಡ ಕೇಂದ್ರ. ಇಲ್ಲಿ ಚುನಾವಣಾ ಪ್ರಚಾರವನ್ನು ಪ್ರಾರಂಭಿಸುವ ಪ್ರಧಾನಿ ಇಲ್ಲಿನ ಮತದಾರರು ಮತ್ತು ಬೆಂಬಲಿಗರೊಂದಿಗೆ ನಿಕಟ ಸಂಪರ್ಕ ಸಾಧಿಸುವ ಗುರಿಯನ್ನು ಹೊಂದಿದ್ದಾರೆ.

ಏತನ್ಮಧ್ಯೆ, ಲೋಕಸಭೆ ಚುನಾವಣೆಗೆ ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಜೊತೆ ಮೈತ್ರಿಯನ್ನು ಘೋಷಿಸಿದ ಒಂದು ದಿನದ ನಂತರ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ರಾಜ್ಯದಲ್ಲಿ ಸೀಟು ಹಂಚಿಕೆ ಸೂತ್ರವನ್ನು ಅಂತಿಮಗೊಳಿಸಲು ಕಾಂಗ್ರೆಸ್‌ನೊಂದಿಗೆ ಹೆಚ್ಚಿನ ಚರ್ಚೆಯ ಅಗತ್ಯವನ್ನು ವ್ಯಕ್ತಪಡಿಸಿದ್ದಾರೆ. ಯಾದವ್ ಅವರು ಪಕ್ಷದ ನಾಯಕರೊಂದಿಗೆ ಲಕ್ನೋದಲ್ಲಿ ಸಭೆ ನಡೆಸಿದ್ದಾರೆ. ಹೊಸ ಮತದಾರರ ಪಟ್ಟಿಯಲ್ಲಿ ಬೆಂಬಲಿಗರ ನೋಂದಣಿಯನ್ನು ಖಚಿತಪಡಿಸಿಕೊಳ್ಳಲು ಪಕ್ಷದ ಕಾರ್ಯಕರ್ತರನ್ನು ಒತ್ತಾಯಿಸಿದ್ದು, ರಾಜ್ಯದ ಬಿಜೆಪಿ ಸರ್ಕಾರವು ಪಕ್ಷದ ಕೆಲವು ಕಾರ್ಯಕರ್ತರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಿದೆ ಎಂದು ಆರೋಪಿಸಿದ್ದಾರೆ.

Exit mobile version