Site icon Vistara News

Rahul Gandhi: ಸ್ವಂತ ಮನೆ, ಕಾರು ಇಲ್ಲದ ರಾಹುಲ್‌ ಗಾಂಧಿ ಘೋಷಿಸಿದ ಆಸ್ತಿ ಎಷ್ಟು? ಇಲ್ಲಿದೆ ಮಾಹಿತಿ

Rahul Gandhi

ತಿರುವನಂತಪುರಂ: ಲೋಕಸಭೆ ಚುನಾವಣೆ (Lok Sabha Election) ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಭಾರತ್‌ ಜೋಡೋ ನ್ಯಾಯ ಯಾತ್ರೆ ಮುಗಿಸಿದ ಅವರು ದೇಶಾದ್ಯಂತ ಪ್ರಚಾರ ಕೈಗೊಳ್ಳಲಿದ್ದಾರೆ. ಇದರ ಬೆನ್ನಲ್ಲೇ, ಕೇರಳದ ವಯನಾಡು (Wayanad) ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ರಾಹುಲ್‌ ಗಾಂಧಿ (Rahul Gandhi) ಅವರು ಬುಧವಾರ (ಮಾರ್ಚ್‌ 3) ನಾಮಪತ್ರ (Nomination) ಸಲ್ಲಿಸಿದ್ದಾರೆ. ವಯನಾಡು ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ರಾಹುಲ್‌ ಗಾಂಧಿ ನಾಮಪತ್ರ ಸಲ್ಲಿಸಿದ್ದಾರೆ. ಅಲ್ಲದೆ, ರಾಹುಲ್‌ ಗಾಂಧಿ ಅವರು 20.04 ಕೋಟಿ ರೂ. ಆಸ್ತಿ ಘೋಷಣೆ ಮಾಡಿದ್ದಾರೆ.

ಹೌದು, ರಾಹುಲ್‌ ಗಾಂಧಿ ಅವರು ಚುನಾವಣಾ ಆಯೋಗಕ್ಕೆ ಅಫಿಡವಿಟ್‌ ಸಲ್ಲಿಸಿದ್ದು, ಚರಾಸ್ತಿ ಹಾಗೂ ಸ್ಥಿರಾಸ್ತಿ ಸೇರಿ ಇವರು ಒಟ್ಟು 20.04 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ರಾಹುಲ್‌ ಗಾಂಧಿ ಅವರು 9.24 ಕೋಟಿ ರೂ. ಮೌಲ್ಯದ ಚರಾಸ್ತಿ ಹೊಂದಿದ್ದರೆ, 11.15 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯನ್ನು ಹೊಂದಿದ್ದಾರೆ. ರಾಹುಲ್‌ ಗಾಂಧಿ ಅವರ ಬಳಿ 55 ಸಾವಿರ ರೂ. ನಗದು ಇದೆ. ಇನ್ನು, ಎಸ್‌ಬಿಐ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್‌ಗಳ ಉಳಿತಾಯ ಖಾತೆಗಳಲ್ಲಿ 26.25 ಲಕ್ಷ ರೂ. ಠೇವಣಿ ಹೊಂದಿದ್ದಾರೆ.

ಮನೆ ಇಲ್ಲ, ಕಾರೂ ಇಲ್ಲ

20 ಕೋಟಿ ರೂ. ಮೌಲ್ಯದ ಆಸ್ತಿ ಘೋಷಣೆ ಮಾಡಿದ್ದರೂ ರಾಹುಲ್‌ ಗಾಂಧಿ ಅವರು ಒಂದು ಸ್ವಂತ ಮನೆ ಹೊಂದಿಲ್ಲ. ಕಾರನ್ನೂ ಅವರು ಖರೀದಿ ಮಾಡಿಲ್ಲ. ಷೇರು ಮಾರುಕಟ್ಟೆ, ಮ್ಯೂಚುವಲ್‌ ಫಂಡ್‌, ಗೋಲ್ಡ್‌ ಬಾಂಡ್‌ ಸೇರಿ ಹಲವೆಡೆ ರಾಹುಲ್‌ ಗಾಂಧಿ ಅವರು ಸುಮಾರು 4.58 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. 4.2 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಹೊಂದಿದ್ದಾರೆ. ಆದರೆ, ಇವರು ಗುರುಗ್ರಾಮದಲ್ಲಿ 9.04 ಕೋಟಿ ರೂ. ಮೌಲ್ಯದ ಸ್ವಂತ ಕಚೇರಿಯೊಂದನ್ನು ಹೊಂದಿದ್ದಾರೆ. ಇನ್ನು, ರಾಹುಲ್‌ ಗಾಂಧಿ ವಿರುದ್ಧ 18 ಕೇಸ್‌ಗಳು ದಾಖಲಾಗಿವೆ.

ರಾಹುಲ್‌ ಗಾಂಧಿ ಅಫಿಡವಿಟ್

ಇದನ್ನೂ ಓದಿ: Yaduveer: ಬಿಜೆಪಿಯ ಯದುವೀರ್‌ ಆಸ್ತಿ ಮೌಲ್ಯ 4.99 ಕೋಟಿ ರೂ.; ಇವರ ಬಳಿ ಸ್ವಂತ ಕಾರೂ ಇಲ್ಲ

ವಯನಾಡು ನನ್ನ ಮನೆ ಎಂದ ರಾಹುಲ್‌ ಗಾಂಧಿ

ವಯನಾಡು ಲೋಕಸಭೆ ಕ್ಷೇತ್ರದಲ್ಲಿ ಎರಡನೇ ಬಾರಿಗೆ ಸ್ಪರ್ಧಿಸುತ್ತಿರುವ ರಾಹುಲ್‌ ಗಾಂಧಿ ಅವರು ನಾಮಪತ್ರ ಸಲ್ಲಿಕೆಗೂ ಮೊದಲು ಬೃಹತ್‌ ರೋಡ್‌ ಶೋ ಕೈಗೊಂಡರು. ರೋಡ್‌ ಶೋ ಮೂಲಕ ಶಕ್ತಿ ಪ್ರದರ್ಶನ ಮಾಡಿದ ಅವರು ಬಳಿಕ ಪ್ರಿಯಾಂಕಾ ವಾದ್ರಾ ಸೇರಿ ಹಲವರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಇದಾದ ಬಳಿಕ ಮಾತನಾಡಿದ ಅವರು, “ವಯನಾಡು ನನ್ನ ಮನೆ ಇದ್ದಂತೆ. ಇಲ್ಲಿನ ಜನ ನನ್ನ ಕುಟುಂಬಸ್ಥರಿದ್ದಂತೆ. ಕಳೆದ ಐದು ವರ್ಷದಲ್ಲಿ ಅವರು ತೋರಿದ ಪ್ರೀತಿ, ಮಮತೆ, ವಿಶ್ವಾಸ ಅಗಾಧವಾದುದು. ಇಲ್ಲಿಂದಲೇ ಮತ್ತೆ ನಾಮಪತ್ರ ಸಲ್ಲಿಸಿರುವುದು ಸಂತಸ ತಂದಿದೆ” ಎಂದು ಹೇಳಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version