Site icon Vistara News

Lok Sabha Election 2024: ರಾಯ್‌ಬರೇಲಿಯಿಂದ ರಾಹುಲ್‌ ಗಾಂಧಿ ಕಣಕ್ಕೆ, ಅಮೇಠಿಯಿಂದ ಕಿಶೋರಿಲಾಲ್‌ ಸ್ಪರ್ಧೆ

Rahul Gandhi

ನವದೆಹಲಿ:‌ ಲೋಕಸಭೆ ಚುನಾವಣೆ(Lok Sabha Election 2024)ಯ ಬಹಳ ಕುತೂಹಲಕ್ಕೆ ಕಾರಣವಾಗಿದ್ದ ರಾಯ್‌ ಬರೇಲಿ ಮತ್ತು ಅಮೇಠಿ ಕ್ಷೇತ್ರಗಳಿಗೆ ಕಾಂಗ್ರೆಸ್‌ ಕೊನೆಗೂ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಗಾಂಧಿ ಕುಟುಂಬದ ಭದ್ರಕೋಟೆಯಾಗಿರುವ ರಾಯ್‌ ಬರೇಲಿ(Rae Bareli) ಕ್ಷೇತ್ರದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ(Rahul Gandhi) ಕಣಕ್ಕಿಳಿಯಲಿದ್ದು, ಇನ್ನು ಅಮೇಠಿ ಕ್ಷೇತ್ರದಲ್ಲಿ ಸೋನಿಯಾ ಗಾಂಧಿ(Sonia Gandhi) ಆಪ್ತ ಕಿಶೋರಿ ಲಾಲ್‌ ಶರ್ಮಾ(Kishori Lal Sharma) ಅವರನ್ನು ಕಾಂಗ್ರೆಸ್‌ ಕಣಕ್ಕಿಳಿಸಿದೆ. ಮೇ 17ರಂದು ನಡೆಯುವ ಐದನೇ ಹಂತದ ಮತದಾನದ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಕೊನೆಯ ಹಂತದಲ್ಲಿ ಕಾಂಗ್ರೆಸ್‌ ಬಾಕಿ ಇರಿಸಿದ್ದ ಅಮೇಠಿ ಮತ್ತು ರಾಯ್‌ ಬರೇಲಿ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಕಾಂಗ್ರೆಸ್‌ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಅಭ್ಯರ್ಥಿಗಳ ಪಟ್ಟಿ ರಿಲೀಸ್‌ ಮಾಡಿದೆ.

ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ರಾಜ್ಯಸಭೆಗೆ ಆಯ್ಕೆಯಾದ ಬಳಿಕ ಖಾಲಿಯಾಗಿರುವ ರಾಯ್‌ ಬರೇಲಿ ಕ್ಷೇತ್ರದಿಂದ ಮೊದಲಿಗೆ ಪ್ರಿಯಾಂಕಾ ಗಾಂಧಿ ವಾಧ್ರಾ ಹಾಗೂ ಅಮೇಠಿಯಿಂದ ರಾಹುಲ್‌ ಗಾಂಧಿ ಕಣಕ್ಕಿಳಿಯುತ್ತಾರೆ ಎಂಬ ವಿಚಾರ ಬಹಳ ಚರ್ಚೆಯಾಗಿತ್ತು. ರಾಹುಲ್‌ ಗಾಂಧಿ ಈಗಾಗಲೇ ಕೇರಳದ ವಯನಾಡು ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ. ಇದೀಗ ರಾಯ್‌ಬರೇಲಿಯಲ್ಲಿ ಬಿಜೆಪಿಯ ದಿನೇಶ್‌ ಪ್ರತಾಪ್‌ ವಿರುದ್ಧ ಮತಭೇಟೆಗೆ ಇಳಿದಿದ್ದಾರೆ. ಇನ್ನು ದಿನೇಶ್‌ ಪ್ರತಾಪ್‌ ಕಳೆದ ಬಾರೀ ಸೋನಿಯಾ ಗಾಂದಿ ವಿರುದ್ಧ ಸ್ಪರ್ಧಿಸಿ ಸೋಲುಂಡಿದ್ದರು. ಅಮೇಠಿಯಲ್ಲಿ 2004, 2009, 2014ರವರೆಗೆ ರಾಹುಲ್‌ ಗಾಂಧಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆದರೆ 2019ರಲ್ಲಿ ಬಿಜೆಪಿ ಸ್ಮೃತಿ ಇರಾನಿ ವಿರುದ್ಧ ಸೋಲನ್ನು ಅನುಭವಿಸಿದ್ದರು. ಈ ಬಾರಿ ಗಾಂಧಿ ಕುಟುಂಬದ ಆಪ್ತ ಕಿಶೋರಿ ಲಾಲ್‌ ಅವರನ್ನು ಅಮೇಠಿಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ಕಣಕ್ಕಿಳಿಸಿ ಪಕ್ಷ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ.

ಇಂದೇ ನಾಮಪತ್ರ ಸಲ್ಲಿಕೆ

ಇನ್ನು ಇಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿರುವುದರಿಂದ ಈ ಇಬ್ಬರೂ ನಾಯಕರೂ ಇಂದೇ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇನ್ನು ರಾಹುಲ್‌ ಗಾಂಧಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗೆ ಸೋನಿಯಾ ಗಾಂಧಿ ಸಾಥ್‌ ಕೊಡಲಿದ್ದಾರೆ. ಮತ್ತೊಂದೆಡೆ ಅಮೇಠಿಯಲ್ಲಿ ಕಿಶೋರಿಲಾಲ್‌ ಅವರಿಗೆ ಪ್ರಿಯಾಂಕಾ ಗಾಂಧಿ ವಾಧ್ರಾ ಬೆಂಬಲ ಸೂಚಿಸಲಿದ್ದಾರೆ. ಈಗಾಗಲೇ ರಾಹುಲ್‌ ಮತ್ತು ಪ್ರಿಯಾಂಕಾ ಬೆಂಬಲಿಗರು ನಾಮಪತ್ರ ದಾಖಲೆಗಳನ್ನು ತಯಾರು ಮಾಡಿಟ್ಟಿದ್ದಾರೆ ಎನ್ನಲಾಗಿದೆ. ಬಿಜೆಪಿಯ ಸ್ಮೃತಿ ಇರಾನಿ ಕೂಡ ಇಂದೇ ಅಮೇಠಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.

ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪಿ ಬ್ರಿಜ್‌ ಭೂಷಣ್‌ಗಿಲ್ಲ ಟಿಕೆಟ್‌; ಮಗನಿಗೆ ಮಣೆ, ರಾಯ್‌ಬರೇಲಿಗೂ ಅಭ್ಯರ್ಥಿ ಘೋಷಿಸಿದ ಬಿಜೆಪಿ

ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ತೆರಳದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಶ್ರೀರಾಮನ ವಿರೋಧಿ ಎಂದು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ. ಇದು ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ, ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರು ರಾಮಮಂದಿರಕ್ಕೆ ಭೇಟಿ ನೀಡುವ ಮೂಲಕ ಕಾಂಗ್ರೆಸ್‌ ರಾಮಮಂದಿರ ವಿರೋಧಿ ಅಲ್ಲ ಎಂಬ ಸಂದೇಶ ರವಾನಿಸುವ ಉದ್ದೇಶವೂ ಇತ್ತು. ನಾಮಪತ್ರ ಸಲ್ಲಿಕೆಗೂ ಮುನ್ನ ರಾಮಮಂದಿರಕ್ಕೆ ಭೇಟಿ ನೀಡುವ ಯೋಜನೆ ಇತ್ತು. ಈಗ ಇದರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.

Exit mobile version