ನವ ದೆಹಲಿ: ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಕರ್ನಾಟಕದಿಂದ ಸ್ಪರ್ಧಿಸಲಿರುವ ಬಿಜೆಪಿ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು (BJP Candidates List) ಬಿಡುಗಡೆ ಮಾಡಲಾಗಿದ್ದು, ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಮಾಜಿ ಡಿಸಿಎಂ ಗೋವಿಂದ ಕಾರಜೋಳ (Govinda Karajola) ಅವರಿಗೆ ಟಿಕೆಟ್ ನೀಡಲಾಗಿದೆ. ಬಿಜೆಪಿ ಈ ನಿರ್ಧಾರ ಅಚ್ಚರಿ ಮೂಡಿಸಿದೆ. ಅಲ್ಲದೆ, ಕೇಂದ್ರ ಸಚಿವ ನಾರಾಯಣ ಸ್ವಾಮಿ (Narayana Swamy) ಅವರಿಗೆ ಟಿಕೆಟ್ ಮಿಸ್ ಆಗಿದೆ.
ಮಾರ್ಚ್ 4 ರಂದು ಬಿಡುಗಡೆ ಮಾಡಲಾಗಿದ್ದ ಪಟ್ಟಿಯಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರವೊಂದನ್ನು ಬಿಟ್ಟು ಉಳಿದ ಉತ್ತರ ಕನ್ನಡ, ಚಿಕ್ಕಬಳ್ಳಾಪುರ, ರಾಯಚೂರು ಹಾಗೂ ಬೆಳಗಾವಿ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. ಚಿತ್ರದುರ್ಗದಲ್ಲಿ ಮಾಜಿ ಸಚಿವ ಜನಾರ್ದನ ಸ್ವಾಮಿ ಹಾಗೂ ಎಂ.ಸಿ. ರಘು ಚಂದನ್ ನಡುವೆ ತೀವ್ರ ಪೈಪೋಟಿ ಇತ್ತು. ಈ ನಡುವೆ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರ ಹೆಸರು ಸಹ ಕೇಳಿಬಂದಿತ್ತು. ಅಲ್ಲದೆ, ಮಾದಾರಾ ಚನ್ನಯ ಶ್ರೀಗಳು ಸಹ ಇಲ್ಲಿ ಬಿಜೆಪಿಯ ಟಿಕೆಟ್ ರೇಸ್‌ನಲ್ಲಿದ್ದರು.
ಚಿತ್ರದುರ್ಗ ಎಸ್‌ಸಿ ಮೀಸಲು ಕ್ಷೇತ್ರ; ಹೀಗಾಗಿ ಕಾರಜೋಳಗೆ ಲಕ್
ಚಿತ್ರದುರ್ಗ ಲೋಕಸಭಾ ಕ್ಷೇತ್ರವು ಎಸ್‌ಸಿ ಮೀಸಲು ಆಗಿದ್ದರಿಂದ ಗೋವಿಂದ ಕಾರಜೋಳ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗಿದೆ. ಕಾರಜೋಳ ಎಡಗೈ ಸಮುದಾಯಕ್ಕೆ ಸೇರಿದವರಾಗಿದ್ದು, ಈ ಭಾಗದಲ್ಲಿ ಸಹ ಉತ್ತಮ ಜನಪ್ರಿಯತೆಯನ್ನು ಹೊಂದಿದ್ದಾರೆ. ಇವರು ಬಾಗಲಕೋಟೆಯವರಾದರೂ ಕೆಲವು ರಾಜಕೀಯ ಸಮೀಕರಣ ಹಾಗೂ ಲೆಕ್ಕಾಚಾರಗಳನ್ನು ಹಾಕಿ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಇಲ್ಲಿದೆ ಬಿಜೆಪಿ ಪಟ್ಟಿ
BJP releases its seventh list of candidates for the Lok Sabha elections.
— ANI (@ANI) March 27, 2024
Navneet Rana fielded from Amravati constituency in Maharashtra. pic.twitter.com/rfdLYckZUl
ಬಿಜೆಪಿಯ ಎಲ್ಲ ಪಟ್ಟಿ ಫೈನಲ್; ಜೆಡಿಎಸ್ ಮಾತ್ರವೇ ಬಾಕಿ!
ಈ ಮೂಲಕ ಬಿಜೆಪಿ ಪಾಲಿನ 25 ಲೋಕಸಭಾ ಕ್ಷೇತ್ರಗಳಿಗೂ ಟಿಕೆಟ್ ಘೋಷಣೆ ಮಾಡಿದಂತೆ ಆಗಿದೆ. ಮೈತ್ರಿ ಒಪ್ಪಂದದಂತೆ ಹಾಸನ, ಮಂಡ್ಯ, ಕೋಲಾರ ಲೋಕಸಭಾ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಜೆಪಿ ಬಿಟ್ಟುಕೊಡಲಾಗಿದೆ. ಇಲ್ಲಿ ಹಾಸನಕ್ಕೆ ಪ್ರಜ್ವಲ್ ರೇವಣ್ಣ ಅಭ್ಯರ್ಥಿ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಬುಧವಾರ (ಮಾ. 13) ಘೋಷಣೆ ಮಾಡಿದ್ದರು. ಮಂಡ್ಯದಿಂದ ಸ್ವತಃ ಕುಮಾರಸ್ವಾಮಿ ಅವರೇ ಕಣಕ್ಕಿಳಿಯಲಿದ್ದಾರೆ ಎಂಬುದನ್ನು ಅವರೇ ಒಪ್ಪಿಕೊಂಡಿದ್ದಾರೆ. ಇನ್ನು ಕೋಲಾರದಲ್ಲಿ ಮಲ್ಲೇಶ್ ಬಾಬು ಹೆಸರು ಕೇಳಿಬರುತ್ತಿದೆ. ಆದರೆ, ಅಲ್ಲಿನ ಕಾಂಗ್ರೆಸ್ ಬೆಳವಣಿಗೆಯನ್ನು ನೋಡಿಕೊಂಡು ಮುಂದಿನ ಹೆಜ್ಜೆ ಇಡುವುದಾಗಿ ಎಚ್‌ಡಿಕೆ ಹೇಳಿದ್ದಾರೆ.
2ನೇ ಪಟ್ಟಿಯಲ್ಲಿ ಟಿಕೆಟ್ ಪಡೆದವರು ಇವರು
ಚಿಕ್ಕಬಳ್ಳಾಪುರ – ಡಾ.ಕೆ. ಸುಧಾಕರ್
ಉತ್ತರ ಕನ್ನಡ – ವಿಶ್ವೇಶ್ವರ ಹೆಗಡೆ ಕಾಗೇರಿ
ರಾಯಚೂರು – ಅಮರೇಶ್ವರ ನಾಯಕ್
ಬೆಳಗಾವಿ – ಜಗದೀಶ್ ಶೆಟ್ಟರ್
BJP Candidates List : ಮಾರ್ಚ್ 13ರ ಮೊದಲ ಪಟ್ಟಯಲ್ಲಿ ಟಿಕೆಟ್ ಪಡೆದ 20 ಅಭ್ಯರ್ಥಿಗಳು
- ಚಿಕ್ಕೋಡಿ: ಅಣ್ಣಾ ಸಾಹೇಬ್ ಜೊಲ್ಲೆ
- ಬಾಗಲಕೋಟೆ: ಪಿ.ಸಿ. ಗದ್ದಿಗೌಡರ್
- ವಿಜಯಪುರ: ರಮೇಶ್ ಜಿಗಜಿಣಗಿ
- ಕಲಬುರಗಿ: ಡಾ. ಉಮೇಶ್ ಜಾಧವ್
- ಬೀದರ್: ಭಗವಂತ್ ಖೂಬಾ
- ಕೊಪ್ಪಳ: ಡಾ. ಬಸವರಾಜ ಕ್ಯಾವತೂರು
- ಬಳ್ಳಾರಿ: ಬಿ. ಶ್ರೀರಾಮುಲು
- ಹಾವೇರಿ: ಬಸವರಾಜ ಬೊಮ್ಮಾಯಿ
- ಧಾರವಾಡ: ಪ್ರಹ್ಲಾದ್ ಜೋಶಿ
- ದಾವಣಗೆರೆ: ಗಾಯತ್ರಿ ಸಿದ್ದೇಶ್ವರ್
- ಶಿವಮೊಗ್ಗ: ಬಿವೈ ರಾಘವೇಂದ್ರ
- ಉಡುಪಿ ಚಿಕ್ಕಮಗಳೂರು: ಕೋಟ ಶ್ರೀನಿವಾಸ ಪೂಜಾರಿ
- ದಕ್ಷಿಣ ಕನ್ನಡ: ಕ್ಯಾಪ್ಟನ್ ಬ್ರಿಜೇಶ್ ಚೌಟ
- ತುಮಕೂರು: ವಿ ಸೋಮಣ್ಣ
- ಮೈಸೂರು: ಯದುವೀರ್ ಕೃಷ್ಣ ದತ್ತ ಒಡೆಯರ್
- ಚಾಮರಾಜನಗರ: ಎಸ್. ಬಾಲರಾಜ್
- ಬೆಂಗಳೂರು ಗ್ರಾಮಾಂತರ: ಡಾ. ಸಿ.ಎನ್. ಮಂಜುನಾಥ್
- ಬೆಂಗಳೂರು ಉತ್ತರ: ಶೋಭಾ ಕರಂದ್ಲಾಜೆ
- ಬೆಂಗಳೂರು ಸೆಂಟ್ರಲ್: ಪಿ.ಸಿ. ಮೋಹನ್
- ಬೆಂಗಳೂರು ದಕ್ಷಿಣ: ತೇಜಸ್ವಿ ಸೂರ್ಯ
ಇದನ್ನೂ ಓದಿ: Lok Sabha Election 2024: ಸಿಎಂ ಸಿದ್ದರಾಮಯ್ಯ, ಜಯಪ್ರಕಾಶ್ ಹೆಗ್ಡೆ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು