Site icon Vistara News

ಪಿತ್ರೋಡಾ ‘ಸಂಪತ್ತು ಹಂಚಿಕೆ’ ಹೇಳಿಕೆ, ಮಣಿಶಂಕರ್‌ ಅಯ್ಯರ್‌ ಪಾಕ್‌ ಪ್ರೇಮ; ಕಾಂಗ್ರೆಸ್‌ಗೆ ಈಗ ತೀವ್ರ ಫಜೀತಿ!

Sam Pitroda

Lok Sabha Election: Big Jolt For Congress After Sam Pitroda And Mani Shankar Aiyar's Remarks

ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಹಿಡಿದು, ಸ್ಥಳೀಯ ಪಕ್ಷದ ನಾಯಕನವರೆಗೆ ಭಾಷಣಗಳು, ಹೇಳಿಕೆಗಳು, ಆರೋಪ, ಟೀಕೆ, ವ್ಯಂಗ್ಯಗಳು ಮೊನಚಾಗಿವೆ. ಆದರೆ, ಕಾಂಗ್ರೆಸ್‌ನ ಕೆಲ ನಾಯಕರು ನೀಡುತ್ತಿರುವ ಹೇಳಿಕೆಗಳು ಆ ಪಕ್ಷಕ್ಕೇ ಮುಳುವಾಗುತ್ತಿವೆ. ಸಂಪತ್ತಿನ ಹಂಚಿಕೆ ಕುರಿತು ಭಾರತೀಯ ಸಾಗರೋತ್ತರ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಸ್ಯಾಮ್‌ ಪಿತ್ರೋಡಾ, ಪಾಕಿಸ್ತಾನದ ಕುರಿತು ಪಕ್ಷದ ನಾಯಕ ಮಣಿಶಂಕರ್‌ ಅಯ್ಯರ್‌ (Mani Shankar Aiyar) ಅವರು ನೀಡಿರುವ ಹೇಳಿಕೆಗಳು ಕಾಂಗ್ರೆಸ್‌ಗೆ ಭಾರಿ ಮುಜುಗರ ತಂದಿವೆ. ಇದೇ ಕಾರಣಕ್ಕಾಗಿ, ಇಬ್ಬರೂ ನಾಯಕರ ಹೇಳಿಕೆಗಳಿಂದ ಕಾಂಗ್ರೆಸ್‌ ಅಂತರ ಕಾಪಾಡಿಕೊಂಡಿದೆ.

ಸ್ಯಾಮ್‌ ಪಿತ್ರೋಡಾ ಅವಾಂತರಗಳು

“ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ದೇಶದ ಜನರ ಸಂಪತ್ತನ್ನು ಕಸಿದು, ಹಂಚಿಕೆ ಮಾಡುತ್ತದೆ. ಮಹಿಳೆಯರ ಮಂಗಳಸೂತ್ರಕ್ಕೆ ಕೈ ಹಾಕುತ್ತದೆ” ಎಂಬುದಾಗಿ ನರೇಂದ್ರ ಮೋದಿ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸುವ ಭರದಲ್ಲಿ, ಸ್ಯಾಮ್‌ ಪಿತ್ರೋಡಾ ಅವರು ಅಮೆರಿಕದ ಉದಾಹರಣೆ ಕೊಟ್ಟರು. “ಅಮೆರಿಕದಲ್ಲಿ ಪಿತ್ರಾರ್ಜಿತ ತೆರಿಗೆ ಇದೆ. ಅಪ್ಪನ ಆಸ್ತಿಯಲ್ಲಿ ಶೇ.55ರಷ್ಟು ಆಸ್ತಿಯನ್ನು ಸರ್ಕಾರಕ್ಕೆ ಕೊಡಬೇಕು” ಎಂಬುದಾಗಿ ಹೇಳಿದ್ದು ವಿವಾದಕ್ಕೆ ಕಾರಣವಾಯಿತು.

“ಅಮೆರಿಕದಲ್ಲಿ ಪಿತ್ರಾರ್ಜಿತ ತೆರಿಗೆ ಇದೆ. ಒಬ್ಬನು 100 ಮಿಲಿಯನ್ USD ಮೌಲ್ಯದ ಸಂಪತ್ತನ್ನು ಹೊಂದಿದ್ದರೆ ಅವನು ಸತ್ತಾಗ ಕೇವಲ 45 ಪ್ರತಿಶತವನ್ನು ತನ್ನ ಮಕ್ಕಳಿಗೆ ವರ್ಗಾಯಿಸಬಹುದು. 55 ಪ್ರತಿಶತವನ್ನು ಸರ್ಕಾರವು ಹೊಂದುತ್ತದೆ. ಅದು ಆಸಕ್ತಿದಾಯಕ ಕಾನೂನು. ನಿಮ್ಮ ಪೀಳಿಗೆಯಲ್ಲಿ ನೀವು ಸಂಪತ್ತನ್ನು ಸಂಪಾದಿಸಿದ್ದೀರಿ. ಮತ್ತು ನೀವು ಈಗ ಹೋಗುವಾಗ, ನಿಮ್ಮ ಸಂಪತ್ತನ್ನು ಸಾರ್ವಜನಿಕರಿಗೆ ಬಿಡಬೇಕು. ಎಲ್ಲವನ್ನೂ ಅಲ್ಲ, ಅದರಲ್ಲಿ ಅರ್ಧದಷ್ಟು, ಇದು ನ್ಯಾಯೋಚಿತವಾಗಿದೆ” ಎಂದು ಪಿತ್ರೋಡಾ ಹೇಳಿದ್ದರು. ಇನ್ನು, ಅವರು ದಕ್ಷಿಣ ಭಾರತೀಯರು ಆಫ್ರಿಕಾದವರಂತೆ ಇದ್ದಾರೆ ಎಂದು ವರ್ಣ ಭೇದದ ಹೇಳಿಕೆಗಳಿಂದಾಗಿ ಅವರು ಭಾರತೀಯ ಸಾಗರೋತ್ತರ ಕಾಂಗ್ರೆಸ್‌ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.

ಮಣಿಶಂಕರ್‌ ಅಯ್ಯರ್‌ ಪಾಕ್‌ ಪ್ರೇಮ

ಸದಾ ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿರುವ ಕಾಂಗ್ರೆಸ್‌ ನಾಯಕ ಮಣಿಶಂಕರ್‌ ಅಯ್ಯರ್‌ ಅವರೀಗ ಪಾಕಿಸ್ತಾನದ ಪರವಾಗಿ ಮಾತನಾಡಿದ್ದಾರೆ. ಪಾಕಿಸ್ತಾನವನ್ನು ನಾವು ಗೌರವಿಸಬೇಕು ಎಂದು ಅವರು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕಾಗಿ, ಮಣಿಶಂಕರ್‌ ಅಯ್ಯರ್‌ ಅವರ ಹೇಳಿಕೆಯಿಂದ ಕಾಂಗ್ರೆಸ್‌ ಅಂತರ ಕಾಪಾಡಿಕೊಂಡಿದೆ.

“ಪಾಕಿಸ್ತಾನದ ಬಳಿ ಅಣುಬಾಂಬ್‌ಗಳಿವೆ. ಭಾರತ ಕೇವಲ ವಿಶ್ವಗುರು ಎಂದು ಹೇಳುತ್ತಾ ಇದ್ದರೆ ಸಾಲದು ನೆರೆಯ ರಾಷ್ಟ್ರ ಪಾಕಿಸ್ತಾನದ ಜತೆ ಮೊದಲು ಶಾಂತಿಯುತ ಮಾತುಕತೆ ನಡೆಸಬೇಕು. ಯಾವಾಗಲೂ ಕೈಯಲ್ಲಿ ಬಂದೂಕು ಹಿಡಿದು ಸುತ್ತಾಡಿದರೆ ಯಾವ ಕೆಲಸವೂ ಆಗಲ್ಲ, ಯಾವ ಪರಿಹಾರವೂ ಸಿಗಲ್ಲ. ಅದು ಕೇವಲ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಅಷ್ಟೇ. ಪಾಕಿಸ್ತಾನ ಕೂಡ ಸಾರ್ವಭೌಮ ರಾಷ್ಟ್ರ ಮತ್ತು ಅದಕ್ಕೆ ಅದರದ್ದೇ ಆದ ಗೌರವ ಇದೆ. ಒಂದು ವೇಳೆ ಅಲ್ಲಿ ತಲೆಕೆಟ್ಟ ಮನುಷ್ಯ ಅಧಿಕಾರಕ್ಕೆ ಬಂದರೆ, ಲಾಹೋರ್‌ನಲ್ಲಿ ಅಣುಬಾಂಬ್‌ ಸ್ಫೋಟಿಸಿದರೆ ಅದರ ಪರಿಣಾಮ ನಮ್ಮ ದೇಶದ ಭಾಗವಾಗಿರುವ ಅಮೃತಸರದ ಮೇಲೂ ಆಗುತ್ತದೆ. ಹೀಗಾಗಿ ನಾನು ಅವರನ್ನು ಗೌರವಿಸಲು ಪ್ರಾರಂಭಿಸಿದರೆ ಅವರು ಬಾಂಬ್‌ ಬಗ್ಗೆ ಯೋಚನೆ ಮಾಡುವುದೇ ಇಲ್ಲ” ಎಂದು ಅಯ್ಯರ್‌ ಹೇಳಿದ್ದಾರೆ.

ಇದನ್ನೂ ಓದಿ: Sam Pitroda: ಭಾರತೀಯರ ಬಣ್ಣದ ಕುರಿತು ಮಾತಾಡಿದ ಸ್ಯಾಮ್‌ ಪಿತ್ರೋಡಾ ತಲೆದಂಡ; ಕಾಂಗ್ರೆಸ್‌ ಸ್ಥಾನಕ್ಕೆ ರಾಜೀನಾಮೆ!

Exit mobile version