Site icon Vistara News

Lok Sabha Election: ಈ ದಿನಾಂಕದಂದು ಲೋಕಸಭೆ ಚುನಾವಣಾ ವೇಳಾಪಟ್ಟಿ ಪ್ರಕಟ

Lok Sabha Election on April 19 and Result on May 22

ನವದೆಹಲಿ: ಭಾರತದ ಚುನಾವಣಾ ಆಯೋಗ (Election Commission of India) ಮಾರ್ಚ್ ಎರಡನೇ ವಾರದಲ್ಲಿ ಲೋಕಸಭಾ ಚುನಾವಣೆಯ (Lok Sabha Election) ದಿನಾಂಕವನ್ನು ಘೋಷಿಸುವ ಸಾಧ್ಯತೆಯಿದೆ. ಚುನಾವಣಾ ಸಮಿತಿಯ ಉನ್ನತ ಅಧಿಕಾರಿಗಳು ಅಂತಿಮ ಪರಿಶೀಲನೆಗಾಗಿ ಶೀಘ್ರದಲ್ಲಿಯೇ ವಿವಿಧ ರಾಜ್ಯಗಳಿಗೆ ತೆರಳಲಿದ್ದಾರೆ. ಮೂಲಗಳ ಪ್ರಕಾರ, ಮಾರ್ಚ್ 9ರ ನಂತರ ಸಂಸದೀಯ ಚುನಾವಣಾ ದಿನಾಂಕ ಘೋಷಣೆಯಾಗುವ ನಿರೀಕ್ಷೆಯಿದೆ.

2024ರ ಲೋಕಸಭಾ ಚುನಾವಣೆ ಮತ್ತು ಕೆಲವು ರಾಜ್ಯಗಳಲ್ಲಿ ಏಕಕಾಲದಲ್ಲಿ ವಿಧಾನಸಭಾ ಚುನಾವಣೆ ನಡೆಸಲು ಸಿದ್ಧತೆಗಳನ್ನು ಮುಂದುವರಿಸಿರುವ ಚುನಾವಣಾ ಆಯೋಗದ ಅಧಿಕಾರಿಗಳ ತಂಡವು ಅಂತಹ ರಾಜ್ಯಗಳಿಗೆ ಪದೇ ಪದೆ ಭೇಟಿ ನೀಡುತ್ತಿದೆ. ಮೂಲಗಳ ಪ್ರಕಾರ, ಚುನಾವಣಾ ಆಯೋಗದ ಪ್ರತಿನಿಧಿಗಳು ಲೋಕಸಭಾ ಚುನಾವಣೆಯೊಂದಿಗೆ ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗಳನ್ನು ನಡೆಸಬಹುದೇ ಎಂಬುದನ್ನು ಪರಿಶೀಲಿಸಲು ಮಾರ್ಚ್ 12-13ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ.

2024ರ ಈ ಲೋಕಸಭಾ ಚುನಾವಣೆ 2019ರ ಲೋಕಸಭಾ ಚುನಾವಣೆಯನ್ನು ನೆನಪಿಸುವಂತಿದೆ. 2019ರ ಮಾರ್ಚ್ 10ರಂದು ಅಂದಿನ ಚುನಾವಣೆಗೆ ದಿನಾಂಕ ಘೋಷಿಸಲಾಗಿತ್ತು. ಏಪ್ರಿಲ್ 11ರಿಂದ ಮೇ 19 ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆದಿದ್ದು, ಮೇ 23ರಂದು ಮತ ಎಣಿಕೆ ನಡೆದಿತ್ತು. 2014ರ ಲೋಕಸಭಾ ಚುನಾವಣೆ 9 ಹಂತದಲ್ಲಿ ನಡೆದಿತ್ತು. ಈ ಬಾರಿಯ ಎಲೆಕ್ಷನ್‌ ಎಷ್ಟು ಹಂತದಲ್ಲಿ ನಡೆಯಲಿದೆ ಎನ್ನುವುದು ತಿಳಿದು ಬಂದಿಲ್ಲ.

2019ರ ಲೋಕಸಭಾ ಚುನಾವಣೆ ವೇಳೆ ಸುಮಾರು 90 ಕೋಟಿಯಷ್ಟು ಮಂದಿ ಅರ್ಹ ಮತದಾರರಿದ್ದರು. ಆ ಪೈಕಿ ಸುಮಾರು 1.50 ಕೋಟಿಯಷ್ಟು ಮಂದಿ ಮೊದಲ ಬಾರಿ ತಮ್ಮ ಮತದಾನದ ಹಕ್ಕು ಚಲಾಯಿಸಿದ್ದರು. ವಿಶೇಷ ಎಂದರೆ ಈ ಬಾರಿ ಅಧಿಕೃತ ಮತದಾರರ ಸಂಖ್ಯೆ 6 ಕೋಟಿಯಷ್ಟು ಏರಿಕೆ ಕಂಡಿದೆ. ಅಂದರೆ ಅರ್ಹ ಮತದಾರರ ಅಧಿಕೃತ ಸಂಖ್ಯೆ 90 ಕೋಟಿಯಿಂದ 96 ಕೋಟಿಗೆ ತಲುಪಿದೆ.

2019ರ ಫಲಿತಾಂಶ

2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಒಟ್ಟು 543 ಸ್ಥಾನಗಳ ಪೈಕಿ 353 ಸ್ಥಾನಗಳನ್ನು ಗೆಲ್ಲುವ ಮೂಲಕ ಸತತ ಎರಡನೇ ಬಾರಿಗೆ ಅಧಿಕಾರ ಹಿಡಿದಿತ್ತು. ಈ ಪೈಕಿ ಬಿಜೆಪಿ ಮಾತ್ರ 303 ಸ್ಥಾನಗಳಲ್ಲಿ ಜಯಭೇರಿ ಭಾರಿಸಿತ್ತು. ಪ್ರಮುಖ ವಿರೋಧ ಪಕ್ಷವಾದ ಐಎನ್‌ಸಿ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್) 52 ಜಯ ಗಳಿಸಿತ್ತು. ಈ ಬಾರಿ ಎನ್‌ಡಿಎ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಮರಳಿ ದಾಖಲೆ ನಿರ್ಮಿಸಲು ಯೋಜನೆ ರೂಪಿಸಿದರೆ ವಿಪಕ್ಷಗಳ ಒಕ್ಕೂಟ ಇಂಡಿಯಾ (I.N.D.I.A.) ಇದಕ್ಕೆ ಅಡ್ಡಗಾಲು ಹಾಕಲು ಪ್ರತಿತಂತ್ರ ರೂಪಿಸುತ್ತಿದೆ.

ಇದನ್ನೂ ಓದಿ: BJP National Meet: ಇಂದಿನಿಂದ ಬಿಜೆಪಿ ರಾಷ್ಟ್ರೀಯ ಸಮಾವೇಶ; ಲೋಕಸಭಾ ಚುನಾವಣೆಗೆ ತಯಾರಿ

ಈ ಮಧ್ಯೆ ಇಂಡಿಯಾ ಒಕ್ಕೂಟದಿಂದ ಒಂದೊಂದೇ ಪಕ್ಷಗಳು ಬೇರ್ಪಡುತ್ತಿರುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಇತ್ತೀಚೆಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು (ಜನತಾದಳ ಯುನೈಟೆಡ್) ಮತ್ತೆ ಎನ್‌ಡಿಎಗೆ ಸೇರಿದ್ದು ವಿಪಕ್ಷ ಒಕ್ಕೂಟಕ್ಕೆ ಬಿದ್ದ ಬಹುದೊಡ್ಡ ಹೊಡೆತ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version