Site icon Vistara News

Rahul Gandhi: ರಾಹುಲ್‌ ಗಾಂಧಿ ಜಿಂದಾಬಾದ್‌ ಎನ್ನುತ್ತಲೇ ಕುಸಿದ ವೇದಿಕೆ; ತಬ್ಬಿಬ್ಬಾದ ಕಾಂಗ್ರೆಸ್‌ ನಾಯಕ, ವಿಡಿಯೊ ಇಲ್ಲಿದೆ

Rahul Gandhi

Lok Sabha Election: Stage Collapses At Rahul Gandhi's Bihar Poll Rally With Misa Bharti

ಪಟನಾ: ಲೋಕಸಭೆ ಚುನಾವಣೆಯ (Lok Sabha Election 2024) ಆರು ಹಂತಗಳ ಮತದಾನ ಮುಕ್ತಾಯಗೊಂಡಿದ್ದು, ಜೂನ್‌ 1ರಂದು ಕೊನೆಯ ಹಂತದ ಮತದಾನ ನಡೆಯಲಿದೆ. ಹಾಗಾಗಿ, ಕೊನೆಯ ಹಂತದ ಚುನಾವಣೆಗಾಗಿ ರಾಜಕೀಯ ನಾಯಕರು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಇದೇ ರೀತಿ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಬಿಹಾರದಲ್ಲಿ (Bihar) ಚುನಾವಣೆ ಪ್ರಚಾರ ಕೈಗೊಂಡಿದ್ದಾರೆ. ಇನ್ನು ರಾಹುಲ್‌ ಗಾಂಧಿ ಅವರು ಸಮಾವೇಶದಲ್ಲಿ ಪಾಲ್ಗೊಳ್ಳುವ ವೇಳೆ ಅವರಿದ್ದ ವೇದಿಕೆ ಕುಸಿದಿದ್ದು, ಸ್ವಲ್ಪರದರಲ್ಲಿಯೇ ಕಾಂಗ್ರೆಸ್‌ ನಾಯಕ ಪಾರಾಗಿದ್ದಾರೆ.

ಪಟನಾ ಹೊರವಲಯದಲ್ಲಿರುವ ಪಾಲಿಗಂಜ್‌ನಲ್ಲಿ ಚುನಾವಣೆ ಸಮಾವೇಶ ಆಯೋಜಿಸಲಾಗಿತ್ತು. ಬೃಹತ್‌ ಸಮಾವೇಶದ ಹಿನ್ನೆಲೆಯಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದರು. ಇಂಡಿಯಾ ಒಕ್ಕೂಟದ ಮಿತ್ರಪಕ್ಷ, ಆರ್‌ಜೆಡಿ ಅಭ್ಯರ್ಥಿ ಮೀಸಾ ಭಾರ್ತಿ ಪರವಾಗಿ ಮತಯಾಚಿಸಲು ರಾಹುಲ್‌ ಗಾಂಧಿ ಆಗಮಿಸಿದ್ದರು. ಇದೇ ವೇಳೆ, ರಾಹುಲ್‌ ಗಾಂಧಿ ಹಾಗೂ ಮೀಸಾ ಭಾರ್ತಿ ಸೇರಿ ಹಲವು ನಾಯಕರು ವೇದಿಕೆ ಮೇಲೆ ನಿಂತಿದ್ದರು. ಆಗ, ವೇದಿಕೆಯು ಕುಸಿದಿದೆ. ಈ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ವೇದಿಕೆ ಕುಸಿದ ವಿಡಿಯೊ ಇಲ್ಲಿದೆ

ನಾಯಕರು ವೇದಿಕೆ ಮೇಲೆ ನಿಂತು, ಜನರತ್ತ ಕೈಬೀಸಿ ಬಲ ಪ್ರದರ್ಶನ ಮಾಡುವಾಗಲೇ ವೇದಿಕೆ ಕುಸಿದಿದೆ. ಕೆಲ ಸೆಕೆಂಡ್‌ಗಳವರೆಗೆ ಗಾಬರಿಯಾದ ರಾಹುಲ್‌ ಗಾಂಧಿ ಅವರು ಕೂಡಲೇ ಮೀಸಾ ಭಾರ್ತಿ ಅವರು ಸರಿಯಾಗಿ ನಿಲ್ಲಲು ನೆರವು ನೀಡಿದರು. ಇನ್ನೇನು ಸ್ಟೇಜ್‌ನಿಂದ ಹೊರಡಬೇಕು ಎನ್ನುವರಷ್ಟರಲ್ಲಿ ವೇದಿಕೆಯು ಮತ್ತಷ್ಟು ಕುಸಿಯಿತು. ಆಗ ರಾಹುಲ್‌ ಗಾಂಧಿ ಅವರು ನಗುತ್ತಲೇ ಜನರತ್ತ ಕೈಬೀಸಿದರು. ವೇದಿಕೆಯು ತುಂಬ ಎತ್ತರದಲ್ಲಿ ಇರದ ಕಾರಣ ಯಾರಿಗೂ ಗಾಯಗಳಾಗಿಲ್ಲ ಎಂಬುದಾಗಿ ತಿಳಿದುಬಂದಿದೆ.

ಬಿಹಾರದಲ್ಲಿ ಇಂಡಿಯಾ ಒಕ್ಕೂಟದ ಮಿತ್ರಪಕ್ಷಗಳು ಒಗ್ಗೂಡಿ ಚುನಾವಣೆ ಕಣಕ್ಕಿಳಿದಿವೆ. ಆರ್‌ಜೆಡಿಯು 26 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ, ಕಾಂಗ್ರೆಸ್‌ 9, ಸಿಪಿಐ (ಎಂಎಲ್) ಹಾಗೂ ಸಿಪಿಎಂ ಪಕ್ಷಗಳು ತಲಾ ಒಂದು ಕ್ಷೇತ್ರದಲ್ಲಿ ಸ್ಪರ್ಧೆಗೆ ಇಳಿದಿವೆ. ನಾಲ್ಕೂ ಪಕ್ಷಗಳು ಒಗ್ಗೂಡಿ ಎನ್‌ಡಿಎ ಮೈತ್ರಿಕೂಟಕ್ಕೆ ಸೆಡ್ಡು ಹೊಡೆಯಲು ತೀರ್ಮಾನಿಸಿವೆ. ಹಾಗಾಗಿ, ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಅವರು ಬಿಹಾರದಲ್ಲಿ ಮೀಸಾ ಭಾರ್ತಿ ಅವರ ಪರವಾಗಿ ಪ್ರಚಾರ ಕೈಗೊಂಡಿದ್ದಾರೆ. ಜೂನ್‌ 1ರಂದು ಕೊನೆಯ ಹಂತದ ಮತದಾನ ನಡೆಯಲಿದ್ದು, ಜೂನ್‌ 4ರಂದು ಫಲಿತಾಂಶ ಪ್ರಕಟವಾಗಲಿದೆ.

Lok Sabha Election: Stage Collapses At Rahul Gandhi’s Bihar Poll Rally With Misa Bharti

Exit mobile version