ರಾಯ್‌ಪುರ: ಲೋಕಸಭೆ ಚುನಾವಣೆಯ (Lok Sabha Election 2024) ಮೊದಲ ಹಂತದ ಮತದಾನ ಶುಕ್ರವಾರ (ಏಪ್ರಿಲ್ 19) ಮುಕ್ತಾಯಗೊಂಡಿದೆ. 21 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 102 ಕ್ಷೇತ್ರಗಳಲ್ಲಿ ಮತದಾನ ಮುಗಿದಿದ್ದು, ಶೇ.60ರಷ್ಟು ಮತದಾನ ದಾಖಲಾಗಿದೆ. ಕೆಲವು ಪ್ರದೇಶಗಳು ಹೊರತುಪಡಿಸಿ ಎಲ್ಲೆಡೆ ಶಾಂತಿಯುತವಾಗಿಯೇ ಮತದಾನ ನಡೆದಿದೆ. ಆದರೆ, ಛತ್ತೀಸ್‌ಗಢದ ಬಸ್ತಾರ್ ಲೋಕಸಭೆ ಕ್ಷೇತ್ರದ ವ್ಯಾಪ್ತಿಯ ಪುವರ್ತಿ ಎಂಬ ಗ್ರಾಮದಲ್ಲಿ (Puvarti Village) ಮಾತ್ರ ಶುಕ್ರವಾರ ಒಬ್ಬರೇ ಒಬ್ಬರು ಮತದಾನ ಮಾಡಿಲ್ಲ. ಇದು ಮಾವೋವಾದಿಯೊಬ್ಬನ ಊರಾಗಿದ್ದು, ಆತನ ಭಯದಿಂದಾಗಿಒಬ್ಬರೂ ಮತದಾನ ಮಾಡಲ್ಲ ಎಂದು ತಿಳಿದುಬಂದಿದೆ.
ಹೌದು, ಪುವರ್ತಿ ಗ್ರಾಮವು ನಕ್ಸಲ್ ನಾಯಕ ಹಿದ್ಮಾ ಎಂಬಾತನ ಹುಟ್ಟೂರಾಗಿದೆ. ಇಡೀ ಬಸ್ತಾರ್ ವ್ಯಾಪ್ತಿಯಲ್ಲಿ ಹಿದ್ಮಾನ ಪ್ರಭಾವ ಇದೆ. ಈತನ ಭಯವು ಜನರಲ್ಲಿ ಹೆಚ್ಚು ಕಾಡುತ್ತಿದೆ. ಬಸ್ತಾರ್ ಪ್ರದೇಶದಲ್ಲಿಯೇ ಎಲ್ಲಿಯೇ ಮಾವೋವಾದಿಗಳ ದಾಳಿಯಾಗಲಿ, ಭದ್ರತಾ ಸಿಬ್ಬಂದಿ ಸೇರಿ ಸಾರ್ವಜನಿಕರ ಹತ್ಯೆಯಾಗಲಿ, ಆಗೆಲ್ಲ ಹಿದ್ಮಾನ ಹೆಸರೇ ಮುನ್ನೆಲೆಗೆ ಬರುತ್ತದೆ. ಈತನೇ ದಾಳಿಯ ರೂವಾರಿ ಎಂಬುದು ಜನರ ದೃಢ ನಂಬಿಕೆಯಾಗಿರುತ್ತದೆ. ಇದೇ ಕಾರಣಕ್ಕಾಗಿ, ಪುವರ್ತಿ ಗ್ರಾಮದಲ್ಲಿ ಶುಕ್ರವಾರ ಮತದಾನಕ್ಕೆ ಸಕಲ ವ್ಯವಸ್ಥೆ ಮಾಡಿದರೂ, ಭದ್ರತಾ ಸಿಬ್ಬಂದಿಯು ಹೆಚ್ಚು ಭದ್ರತೆ ಒದಗಿಸಿದರೂ ಯಾರೊಬ್ಬರೂ ಮತದಾನ ಮಾಡದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ದೊಡ್ಡ ಅಣಕವಾಗಿದೆ.
ಕೆಲವೆಡೆ ಇವಿಎಂ ದೋಷ
ತಮಿಳುನಾಡು, ಅರುಣಾಚಲ ಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಅಸ್ಸಾಂನ ಕೆಲವು ಬೂತ್ ಗಳಲ್ಲಿ ಸಣ್ಣ ಪ್ರಮಾಣದ ಇವಿಎಂ ದೋಷಗಳು ವರದಿಯಾಗಿವೆ. ಪಶ್ಚಿಮ ಬಂಗಾಳದಲ್ಲಿ ಸಂಜೆ 5 ಗಂಟೆಯವರೆಗೆ ಶೇಕಡಾ 77.57, ಅಸ್ಸಾಂನಲ್ಲಿ ಶೇಕಡಾ 70.77 ಮತ್ತು ಮೇಘಾಲಯದಲ್ಲಿ ಶೇಕಡಾ 69.91 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಹಿಂಸಾಸಾರ
ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಕ್ಷೇತ್ರದಲ್ಲಿ ಹಿಂಸಾಚಾರ ನಡೆದಿದೆ. ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರು ಪರಸ್ಪರ ಘರ್ಷಣೆ ನಡೆಸಿದ್ದು, ಮತದಾನ ಹಿಂಸಾಚಾರ, ಮತದಾರರ ಬೆದರಿಕೆ ಮತ್ತು ಚುನಾವಣಾ ಏಜೆಂಟರ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಕ್ರಮವಾಗಿ 80 ಮತ್ತು 39 ದೂರುಗಳನ್ನು ದಾಖಲಾಗಿವೆ. ಸಂಘರ್ಷ ಪೀಡಿತ ಮಣಿಪುರದಲ್ಲಿ ಸಂಜೆ 5 ಗಂಟೆಯವರೆಗೆ ಶೇ.67.46ರಷ್ಟು ಮತದಾನವಾಗಿದೆ.
ಇನ್ನರ್ ಮಣಿಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಥೊಂಗ್ಜು ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯರು ಮತ್ತು ಅಪರಿಚಿತ ವ್ಯಕ್ತಿಗಳ ನಡುವೆ ವಾಗ್ವಾದ ನಡೆದಿದೆ. ಛತ್ತೀಸ್‌ಗಢದ ನಕ್ಸಲ್ ಪೀಡಿತ ಬಸ್ತಾರ್ ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 63.41 ರಷ್ಟು ಮತದಾರರು ಮತ ಚಲಾಯಿಸಿದ್ದಾರೆ. ಅಲ್ಲಿ ಗ್ರೆನೇಡ್ ಆಕಸ್ಮಿಕವಾಗಿ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಸಿಆರ್ಪಿಎಫ್ ಜವಾನ ಗಾಯಗೊಂಡಿದ್ದಾರೆ. ಮತ್ತೊಂದು ಘಟನೆಯಲ್ಲಿ ಐಇಡಿ ಸ್ಫೋಟ ಸಂಭವಿಸಿದೆ.
ಇದನ್ನೂ ಓದಿ: Narendra Modi : ಮತದಾನ ಮಾಡಿದವರಿಗೆ ಥ್ಯಾಂಕ್ಸ್ ಹೇಳಿದ ಮೋದಿ; ಎನ್ಡಿಎಗೆ ಮತ ನೀಡಿದ್ದಾರೆ ಎಂದ ಪ್ರಧಾನಿ