Site icon Vistara News

ವಿಸ್ತಾರ Explainer: ವೈಯಕ್ತಿಕ ಡೇಟಾ ರಕ್ಷಣೆ ವಿಧೇಯಕಕ್ಕೆ ಲೋಕಸಭೆ ಅಸ್ತು; ಏನಿದು ಮಸೂದೆ? ಏನು ಉಪಯೋಗ?

Lok Sabha Passes Digital Data Protection Bill

Lok Sabha Passes Digital Personal Data Protection Bill, What Is It?

ದೇಶದ ಪ್ರತಿಯೊಬ್ಬ ನಾಗರಿಕರ ಡಿಜಿಟಲ್‌ ಡೇಟಾ ರಕ್ಷಣೆ ದಿಸೆಯಲ್ಲಿ ಕೇಂದ್ರ ಸರ್ಕಾರವು ಡಿಜಿಟಲ್‌ ಪರ್ಸನಲ್‌ ಡೇಟಾ ಪ್ರೊಟೆಕ್ಷನ್‌ ವಿಧೇಯಕವನ್ನು (Digital Personal Data Protection Bill-2023) ಸಂಸತ್ತಿನಲ್ಲಿ ಮಂಡಿಸಿದ್ದು, ಸೋಮವಾರ ಲೋಕಸಭೆಯಲ್ಲಿ (ಆಗಸ್ಟ್‌ 7) ವಿಧೇಯಕಕ್ಕೆ ಅನುಮೋದನೆ ದೊರೆತಿದೆ. ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್‌ ಅವರು ವಿಧೇಯಕವನ್ನು ಆಗಸ್ಟ್‌ 3ರಂದು ಮಂಡಿಸಿದ್ದು, ಸೋಮವಾರ ಅಂಗೀಕಾರ ದೊರೆತಿದೆ. ಹಾಗಾದರೆ, ಏನಿದು ಡಿಜಿಟಲ್‌ ವೈಯಕ್ತಿಕ ದತ್ತಾಂಶ ರಕ್ಷಣಾ ವಿಧೇಯಕ? ಕಾಯ್ದೆ ಜಾರಿಯಾದರೆ ಜನರಿಗೆ ಏನು ಉಪಯೋಗ? ಇದರ ನಿಬಂಧನೆಗಳೇನು ಎಂಬುದರ ಸಂಕ್ಷಿಪ್ತ (ವಿಸ್ತಾರ Explainer) ಮಾಹಿತಿ ಇಲ್ಲಿದೆ.

ಏನಿದು ಡೇಟಾ ಪ್ರೊಟೆಕ್ಷನ್‌ ಬಿಲ್?‌

ದೇಶವೀಗ ಡಿಜಿಟಲ್‌ ಯುಗಕ್ಕೆ ತೆರೆದುಕೊಂಡಿದೆ. ದೇಶದ ಬಹುತೇಕ ನಾಗರಿಕರು ಸ್ಮಾರ್ಟ್‌ಫೋನ್‌ ಬಳಸುತ್ತಿದ್ದಾರೆ. ಲ್ಯಾಪ್‌ಟಾಪ್‌, ಕಂಪ್ಯೂಟರ್‌ಗಳು ಕೂಡ ಸಾಮಾನ್ಯ ಎನಿಸಿವೆ. ಹಾಗಾಗಿ, ದೇಶದ ನಾಗರಿಕರೀಗ ಡಿಜಿಟಲ್‌ ನಾಗರಿಕರಾಗಿದ್ದಾರೆ. ಈ ಡಿಜಿಟಲ್‌ ನಾಗರಿಕರ ವೈಯಕ್ತಿಕ ಮಾಹಿತಿಯ ರಕ್ಷಣೆಗಾಗಿ ಕಾನೂನು ರೂಪಿಸುವ ಕುರಿತು ಕೇಂದ್ರ ಸರ್ಕಾರ ಸಿದ್ಧಪಡಿಸಿರುವುದೇ ಡಿಜಿಟಲ್‌ ಪರ್ಸನಲ್‌ ಡೇಟಾ ಪ್ರೊಟಕ್ಷನ್‌ ವಿಧೇಯಕ ಆಗಿದೆ. ವೈಯಕ್ತಿಕ ಡೇಟಾ ರಕ್ಷಣೆ ಕುರಿತು ಕಾನೂನು ರೂಪಿಸುವ ದಿಸೆಯಲ್ಲಿ ವಿಧೇಯಕ ರಚಿಸಲಾಗಿದೆ.

ಇದನ್ನೂ ಓದಿ: CoWIN Data Leak: ಕೋವಿನ್‌ ಪೋರ್ಟಲ್‌ನಿಂದ ಡೇಟಾ ಸೋರಿಕೆ: ಬಿಹಾರ ಮೂಲದ ವ್ಯಕ್ತಿ ಬಂಧನ

ದೇಶದ ನಾಗರಿಕರ ಡಿಜಿಟಲ್‌ ಮಾಹಿತಿ ಸಂಗ್ರಹ, ಬಳಕೆದಾರರ ಹಕ್ಕುಗಳು, ಕರ್ತವ್ಯಗಳು, ಡೇಟಾ ಸಂಗ್ರಹಣೆಯ ವಿಶ್ವಾಸಾರ್ಹತೆ, ಅಪರಾಧಗಳು ನಡೆದಾಗ ಬೇರೆ ದೇಶಗಳಿಗೆ ಡಿಜಿಟಲ್‌ ಡೇಟಾ ಟ್ರಾನ್ಸ್‌ಫರ್‌, ಬೇರೆ ದೇಶಗಳಿಂದ ಡೇಟಾ ಪಡೆಯುವುದು, ಕಂಪನಿಗಳು ಡೇಟಾ ಸಂರಕ್ಷಣೆಗಾಗಿ ತೆಗೆದುಕೊಳ್ಳಬೇಕಾದ ಕ್ರಮಗಳು, ನಿಯಮ ಉಲ್ಲಂಘಿಸಿದರೆ ವಿಧಿಸುವ ದಂಡ ಸೇರಿ ನೂತನ ವಿಧೇಯಕವು ಹತ್ತಾರು ಅಂಶಗಳನ್ನು ಹೊಂದಿದೆ. ಹಾಗಾಗಿ, ಡಿಜಿಟಲ್‌ ಪರ್ಸನಲ್‌ ಡೇಟಾ ಪ್ರೊಟೆಕ್ಷನ್‌ ಬಿಲ್‌ ಮಹತ್ವ ಪಡೆದಿದೆ.

ವಿಧೇಯಕದ ನಿಬಂಧನೆಗಳೇನು?

  1. ಜನರ ವೈಯಕ್ತಿಕ ಮಾಹಿತಿ ರಕ್ಷಣೆಯಲ್ಲಿ ವಿಫಲವಾದರೆ ಕನಿಷ್ಠ 50 ಕೋಟಿ ರೂ.ನಿಂದ 250 ಕೋಟಿ ರೂ.ವರೆಗೆ ದಂಡ ವಿಧಿಸಲಾಗುತ್ತದೆ.
  2. ಯಾವುದೇ ಕಂಪನಿಯು ಗ್ರಾಹಕರ ವೈಯಕ್ತಿಕ ಮಾಹಿತಿ ಸಂಗ್ರಹಿಸಿದರೆ, ಥರ್ಡ್‌ ಪಾರ್ಟಿ ಸ್ಟೋರೇಜ್‌ ಇದ್ದರೂ ರಕ್ಷಣೆ ಕಡ್ಡಾಯ.
  3. ದತ್ತಾಂಶ ಸೋರಿಕೆಯಾದರೆ, ನಿಯಮ ಉಲ್ಲಂಘನೆಯಾದರೆ ಆ ಕಂಪನಿಯು ಗ್ರಾಹಕರು ಹಾಗೂ ಡೇಟಾ ರಕ್ಷಣೆ ಮಂಡಳಿ (Data Protection Board)ಗೆ ಮಾಹಿತಿ ನೀಡಬೇಕು.
  4. ಮಕ್ಕಳು ಹಾಗೂ ವಿಶೇಷ ಚೇತನರ ವೈಯಕ್ತಿಕ ಮಾಹಿತಿ ಸಂಗ್ರಹಿಸುವಾಗ ಅವರ ಪೋಷಕರ ಅನುಮತಿ ಪಡೆಯುವುದು ಕಡ್ಡಾಯ.
  5. ಬೇರೆ ದೇಶಗಳಿಗೆ ಮಾಹಿತಿ ನೀಡುವ ನಿಯಂತ್ರಣವು ಕೇಂದ್ರ ಸರ್ಕಾರದ ಬಳಿಯೇ ಇರಲಿದೆ.

ಇದನ್ನೂ ಓದಿ: ವಿಸ್ತಾರ Explainer: ಇನ್ನು ಜನನ ಮತ್ತು ಮರಣ ನೋಂದಣಿ ಕಡ್ಡಾಯ! ಏನಿದು ಹೊಸ ವಿಧೇಯಕ, ಯಾಕೆ?

2018ರಲ್ಲಿ ನ್ಯಾಯಮೂರ್ತಿ ಬಿ ಎನ್ ಶ್ರೀಕೃಷ್ಣ ನೇತೃತ್ವದ ಪರಿಣತ ಸಮಿತಿ ಈ ಮಸೂದೆಯನ್ನು ರೂಪಿಸಿತ್ತು. ಕೇಂದ್ರ ಸರ್ಕಾರವು 2019 ರಲ್ಲಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿತ್ತು. ಅದನ್ನು ಅದೇ ವರ್ಷ ಡಿಸೆಂಬರ್‌ನಲ್ಲಿ ಜಂಟಿ ಸಂಸದೀಯ ಸಮಿತಿಯ ಮುಂದಿಡಲಾಯಿತು. ಸಮಿತಿಯ ವರದಿಗೆ ತಿದ್ದುಪಡಿ ಸೂಚಿಸಿದ ನಂತರ ಡಿಸೆಂಬರ್ 2021 ರಲ್ಲಿ ಸಂಸತ್ತಿನಲ್ಲಿ ಮಂಡಿಸಲಾಗಿತ್ತು. ಕೊನೆಗೆ ಮೊದಲ ವಿಧೇಯಕವನ್ನು ಹಿಂಪಡೆಯಲಾಗಿತ್ತು.

Exit mobile version