Site icon Vistara News

No Confidence Motion: ಅವಿಶ್ವಾಸ ನಿರ್ಣಯಕ್ಕೆ ಸ್ಪೀಕರ್ ಅಸ್ತು; ಸಂಖ್ಯಾಬಲ ಹೇಗಿದೆ? ಮುಂದೇನಾಗುತ್ತದೆ?

Narendra Modi Mallikarjun Kharge And Mamata Banerjee

No Confidence Motion Against NDA Government

ನವದೆಹಲಿ: ಮಣಿಪುರ ಹಿಂಸಾಚಾರ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಪ್ರತಿಪಕ್ಷಗಳು ಎನ್‌ಡಿಎ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿವೆ. ಕಾಂಗ್ರೆಸ್‌ ಸಂಸದ ಗೌರವ್‌ ಗೊಗೊಯ್‌ ಅವರು ಸಲ್ಲಿಸಿದ ಅವಿಶ್ವಾಸ ನಿರ್ಣಯವನ್ನು (No Confidence Motion) ಮಂಡಿಸಲು ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರು ಅಂಗೀಕರಿಸಿದ್ದಾರೆ. ಅಲ್ಲದೆ, ಅವಿಶ್ವಾಸ ನಿರ್ಣಯದ ಕುರಿತು ಶೀಘ್ರದಲ್ಲೇ ಚರ್ಚಿಸಲು ಅನುಮತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಏನಿದು ಅವಿಶ್ವಾಸ ನಿರ್ಣಯ?

ಆಡಳಿತಾರೂಢ ಸರ್ಕಾರಕ್ಕೆ ಬಹುಮತ ಇಲ್ಲ, ಹೆಚ್ಚಿನ ಸದಸ್ಯರ ಬೆಂಬಲ ಇಲ್ಲ ಎಂದು ಪ್ರತಿಪಕ್ಷಗಳು ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸುತ್ತವೆ. ಆಗ, ಅವಿಶ್ವಾಸ ಗೊತ್ತುವಳಿ ಕುರಿತು ಚರ್ಚೆ ನಡೆದು, ಕೊನೆಗೆ ಸರ್ಕಾರವು ವಿಶ್ವಾಸಮತ ಸಾಬೀತುಪಡಿಸಿಕೊಳ್ಳಬೇಕಾಗುತ್ತದೆ. ತಮ್ಮ ಸರ್ಕಾರಕ್ಕೆ ಸದಸ್ಯರ ಬೆಂಬಲ ಇದೆ ಎಂಬುದನ್ನು ಸಾಬೀತುಪಡಿಸಿಕೊಳ್ಳಬೇಕಾಗುತ್ತದೆ.

ಸಂಖ್ಯಾಬಲ ಹೇಗಿದೆ?

ಲೋಕಸಭೆಯ ಒಟ್ಟು ಸದಸ್ಯ ಬಲ 543 ಇದೆ. ಆರು ಸದಸ್ಯರ ಆಯ್ಕೆ ಬಾಕಿ ಇದ್ದು, ಸದ್ಯ 537 ಸದಸ್ಯರಿದ್ದಾರೆ. ಇವರಲ್ಲಿ ಬಿಜೆಪಿ ಒಂದೇ ಪಕ್ಷದ ಬಲವೇ 301 ಇದೆ. ಇನ್ನು ಎನ್‌ಡಿಎ ಮಿತ್ರಪಕ್ಷಗಳ ಬಲ ಸೇರಿ ಸಂಖ್ಯಾಬಲ 331 ಆಗುತ್ತದೆ. ಇನ್ನು ಪ್ರತಿಪಕ್ಷಗಳ ‘ಇಂಡಿಯಾ’ ಒಕ್ಕೂಟದಲ್ಲಿ 142 ಸದಸ್ಯರಿದ್ದಾರೆ. ಆದಾಗ್ಯೂ, ಹಲವು ಪಕ್ಷಗಳ 33 ಸದಸ್ಯರು ಇದುವರೆಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಅವರು ತಟಸ್ಥರಾಗಿದ್ದಾರೆ. ಹಾಗಾಗಿ, ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯಕ್ಕೆ ಸೋಲಾಗುತ್ತದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ: NDA vs INDIA: ಅವಿಶ್ವಾಸ ನಿರ್ಣಯಕ್ಕೆ ‘ಇಂಡಿಯಾ’ ಸಜ್ಜು; ಜೈಶಂಕರ್‌, ನಿರ್ಮಲಾ ಸೀತಾರಾಮನ್‌ ತಿರುಗೇಟು

ಮುಂದೇನಾಗುತ್ತದೆ?

ಈಗ ಲೋಕಸಭೆಯಲ್ಲಿ ಮಂಡಿಸಿದ ನಿರ್ಣಯಕ್ಕೆ ಸ್ಪೀಕರ್‌ ಒಪ್ಪಿಗೆ ಸೂಚಿಸಿದ್ದು, ಶೀಘ್ರವೇ ಚರ್ಚೆ ಆರಂಭವಾಗಲಿದೆ. ಅವಿಶ್ವಾಸ ಗೊತ್ತುವಳಿಯ ಕುರಿತು ಚರ್ಚೆ ನಡೆಯುತ್ತದೆ. ಇದಾದ ಬಳಿಕ ಸರ್ಕಾರವು ವಿಶ್ವಾಸಮತ ಸಾಬೀತುಪಡಿಸಿಕೊಳ್ಳುತ್ತದೆ. ಹಾಗೊಂದು ವೇಳೆ, ವಿಶ್ವಾಸಮತ ಸಾಬೀತುಪಡಿಸುವಲ್ಲಿ ಸರ್ಕಾರ ವಿಫಲವಾದರೆ, ಮೋದಿ ಅವರು ರಾಜೀನಾಮೆ ನೀಡಬೇಕಾಗುತ್ತದೆ. ಸರ್ಕಾರ ಅಸ್ತಿತ್ವ ಕಳೆದುಕೊಳ್ಳುತ್ತದೆ.

Exit mobile version