ನವ ದೆಹಲಿ : ಲವ್ ಜಿಹಾದ್ (love jihad) ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಚರ್ಚೆ ಹುಟ್ಟು ಹಾಕಿರುವ ವಿಚಾರ. ಬಿಜೆಪಿ ಸೇರಿದಂತೆ ಹಿಂದೂ ಸಂಘಟನೆಗಳು ಇಂಥದ್ದೊಂದು ಒಳಸಂಚನ್ನು ಮುಸ್ಲಿಮ್ ಸಮುದಾಯ (muslim Community) ಹೊಂದಿದೆ ಎಂದು ಹೇಳಿದರೆ, ವಿರೋಧಿಗಳು ಪ್ರಕಾರ ಇದು ಬಿಜೆಪಿ (BJP) ಮತಗಳಿಕೆಗಾಗಿ ಮಾಡುತ್ತಿರುವ ಕಳಪೆ ತಂತ್ರ. ಏತನ್ಮಧ್ಯೆ, ಇಂಡಿಯಾ ಟುಡೆ ಹಾಗೂ ಸಿ ವೋಟರ್ ನಡೆಸಿರುವ ಮೂಡ್ ಆಫ್ ದಿ ನೇಷನ್ (Mood of the Nation) ಸಮೀಕ್ಷೆಯ ಪ್ರಕಾರ ಲವ್ ಜಿಹಾದ್ ಎಂಬುದು ಉದ್ದೇಶಪೂರ್ವಕ ಕಾರ್ಯಾಚರಣೆ ಹಾಗೂ ಭಾರತದಲ್ಲಿ ಅದು ಚಾಲನೆಯಲ್ಲಿದೆ.
1,40,917 ಮಂದಿಯನ್ನು ಸಮೀಕ್ಷೆಗೆ ಒಳಪಡಿಸಿದಾಗ ಲವ್ ಜಿಹಾದ್ ಮುಸ್ಲಿಮ್ ಗಂಡಸರ ದುಷ್ಕೃತ್ಯ ಎಂಬುದಾಗಿ ಶೇಕಡಾ 53ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. ಶೇಕಡಾ 33 ಜನ ಇದು ಬಿಜೆಪಿಯ ಸೃಷ್ಟಿ ಹಾಗೂ ಮುಸ್ಲಿಮ್ ಸಮುದಾಯಕ್ಕೆ ಸೇರಿದವರನ್ನು ಅವಹೇಳನ ಮಾಡುವ ಕೃತ್ಯ ಎಂದಿದ್ದಾರೆ.
ಇದನ್ನೂ ಓದಿ : Pragya Singh Thakur | ಲವ್ ಜಿಹಾದ್‌ಗೆ ಹೆಣ್ಣು ಮಕ್ಕಳು ಬಲಿಯಾಗಬೇಡಿ, ಚಾಕುವನ್ನು ಹರಿತವಾಗಿಡಿ ಎಂದಿದ್ದ ಸಾಧ್ವಿ ವಿರುದ್ಧ ದೂರು
ನವ ದೆಹಲಿಯಲ್ಲಿ ಕೆಲವು ತಿಂಗಳ ಹಿಂದೆ ಶ್ರದ್ಧಾ ವಾಲ್ಕರ್ ಎಂಬ ಯುವತಿಯನ್ನು ಅಫ್ತಾಬ್ ಪೂನಾವಾಲ್ ಎಂಬ ಮುಸ್ಲಿಮ್ ಸಮುದಾಯಕ್ಕೆ ಸೇರಿದ ಯುವ ಭೀಕರವಾಗಿ ಹಲವು ತುಂಡುಗಳನ್ನಾಗಿ ಕತ್ತರಿಸಿ ಕೊಲೆ ಮಾಡಿರುವ ಪ್ರಕರಣ ಹಾಗೂ ನಟಿ ತುನಿಷಾ ಶರ್ಮಾ ಆತ್ಮಹತ್ಯೆಯ ಪ್ರಸಂಗಗಳು ಲವ್ ಜಿಹಾದ್ ಚರ್ಚೆಗೆ ತುಪ್ಪ ಸುರಿದಿದ್ದವು. ಇಂಥ ಹಲವು ಘಟನೆಗಳ ಹಿನ್ನೆಲೆ 11 ರಾಜ್ಯಗಳು ಒತ್ತಾಯಪೂರ್ವಕ ಮತಾಂತರದ ವಿರುದ್ಧ ಕಾನೂನುಗಳನ್ನು ಜಾರಿಗೆ ತಂದಿವೆ. ಕೇರಳದಲ್ಲಿ ಲವ್ ಜಿಹಾದ್ ದೊಡ್ಡ ಮಟ್ಟದಲ್ಲಿ ಕಾರ್ಯಾಚರಣೆಯಲ್ಲಿವೆ ಎಂದು ಎನ್ಐಎ ತನಿಖೆಯನ್ನೂ ನಡೆಸುತ್ತಿದೆ.