ನವದೆಹಲಿ: ತಿಂಗಳ ಮೊದಲ ದಿನವೇ (ಅಕ್ಟೋಬರ್ 1) ದೇಶದ ತೈಲ ಕಂಪನಿಗಳು ಜನರಿಗೆ ಬೆಲೆಯೇರಿಕೆಯ (LPG Price Hike) ಶಾಕ್ ನೀಡಿವೆ. ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 209 ರೂ. ಏರಿಕೆ ಮಾಡಿದ್ದು, ಭಾನುವಾರದಿಂದಲೇ ನೂತನ ಜಾರಿಗೆ ಬಂದಿದೆ. ಇದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ (Commercial LPG Cylinder) ಬಳಕೆದಾರರು ಮಾತ್ರವಲ್ಲ, ಗ್ರಾಹಕರಿಗೂ ಹೊರೆಯಾಗಿ ಪರಿಣಮಿಸಲಿದೆ.
ಕಳೆದ ತಿಂಗಳಷ್ಟೇ ತೈಲ ಕಂಪನಿಗಳು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 157 ರೂ. ಇಳಿಕೆ ಮಾಡಿದ ಕಾರಣ ಬಳಕೆದಾರರು ತುಸು ನಿಟ್ಟುಸಿರು ಬಿಟ್ಟಿದ್ದರು. ಆದರೆ ಈಗ ಏಕಾಏಕಿ 209 ರೂ. ಏರಿಕೆ ಮಾಡಿರುವುದು ಹೊರೆಯಾಗಲಿದೆ. ಹೋಟೆಲ್ ಸೇರಿ ವಾಣಿಜ್ಯ ಕಾರಣಗಳಿಗಾಗಿ ಎಲ್‌ಪಿಜಿ ಬಳಸುವವರು ತಮ್ಮ ಉತ್ಪನ್ನಗಳ ಬೆಲೆ ಏರಿಕೆ ಮಾಡುವುದರಿಂದ ಗ್ರಾಹಕರ ಮೇಲೂ ಪರಿಣಾಮ ಬೀರಲಿದೆ.
Oil marketing companies have increased the prices of commercial LPG gas cylinders. The rate of 19 Kg commercial LPG gas cylinders has been increased by Rs 209 with effect from tomorrow i.e. October 1. Delhi retail sales price of 19 Kg commercial LPG cylinder will be Rs…
— ANI (@ANI) September 30, 2023
ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಏರಿಕೆಯಿಂದಾಗಿ ದೆಹಲಿಯಲ್ಲಿ 19 ಕೆಜಿಯ ಸಿಲಿಂಡರ್ ಬೆಲೆ ಈಗ 1,731 ರೂ. ಆಗಿದೆ. ಇದುವರೆಗೆ ದೆಹಲಿಯಲ್ಲಿ 1,522 ರೂ. ಇತ್ತು. ಬೆಂಗಳೂರಿನಲ್ಲಂತೂ ದರ ಪರಿಷ್ಕರಣೆಯ ಬಳಿಕ ಎಲ್‌ಪಿಜಿ ಸಿಲಿಂಡರ್ ಬೆಲೆ 1,800 ರೂ. ದಾಟಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Petrol Diesel Price: ಗ್ಯಾಸ್ ಬೆಲೆ ಇಳಿಕೆ ಖುಷಿಗೆ ಕತ್ತರಿ; ಶೀಘ್ರದಲ್ಲೇ ಏರಲಿದೆಯೇ ಪೆಟ್ರೋಲ್ ಬೆಲೆ?
ಕೇಂದ್ರ ಸರ್ಕಾರವು ಎಲ್‌ಪಿಜಿ ಅಡುಗೆ ಅನಿಲದ ಸಿಲಿಂಡರ್ ಬೆಲೆಯನ್ನು ಸೆಪ್ಟೆಂಬರ್ 1ರಿಂದ ಅನ್ವಯವಾಗುವಂತೆ 200 ರೂ. ಕಡಿತಗೊಳಿಸಿರುವುದು ಗ್ರಾಹಕರು ತುಸು ನಿಟ್ಟುಸಿರು ಬಿಡುವಂತೆ ಮಾಡಿತ್ತು. ಉಜ್ವಲ ಯೋಜನೆ ಅಡಿಯಲ್ಲಿ 200 ರೂ. ಸಬ್ಸಿಡಿ ಪಡೆಯುತ್ತಿದ್ದವರು, 400 ರೂ. ಸಬ್ಸಿಡಿ ಪಡೆಯುತ್ತಿದ್ದಾರೆ. ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇಳಿಕೆಯೂ ಹೊರೆ ಕಡಿಮೆ ಮಾಡಿತ್ತು. ಆದರೀಗ, 209 ರೂ. ಏರಿಕೆ ಮಾಡಿರುವುದು ಬೆಲೆ ಇಳಿಕೆಯ ಖುಷಿಯನ್ನು ನುಂಗಿಹಾಕಿದೆ.
ಮುಂದಿನ ವರ್ಷ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಸಿಲಿಂಡರ್ ಬೆಲೆ ಇಳಿಕೆ ಮಾಡಿದೆ ಎಂದೇ ಹೇಳಲಾಗಿದೆ. ಹಾಗೆಯೇ, ಮುಂದಿನ ದಿನಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯೂ ಇಳಿಕೆಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.