Site icon Vistara News

LPG Limit | ಎಲ್‌ಪಿಜಿಗೆ ಶೀಘ್ರವೇ ಮಿತಿ, ತಿಂಗಳಿಗೆ ಎರಡಕ್ಕಿಂತ ಹೆಚ್ಚು ಸಿಲಿಂಡರ್‌ ಬಳಸುವಂತಿಲ್ಲ?

LPG

ನವದೆಹಲಿ: ದೇಶದಲ್ಲಿ ಶೀಘ್ರವೇ ಲಿಕ್ವಿಫೈಡ್‌ ಪೆಟ್ರೋಲಿಯಂ ಗ್ಯಾಸ್‌ (ಎಲ್‌ಪಿಜಿ) ಸಿಲಿಂಡರ್‌ಗಳ ಬಳಕೆಗೆ ಮಿತಿ ಜಾರಿಗೆ ಬರಲಿದೆ. ದೇಶದಲ್ಲಿ ಅಡುಗೆ ಅನಿಲ ಸಿಲಿಂಡರ್‌ಗಳ ದುರ್ಬಳಕೆ ತಡೆಯುವ ದಿಸೆಯಲ್ಲಿ ತಿಂಗಳಿಗೆ ಎರಡಕ್ಕಿಂತ ಹೆಚ್ಚು ಸಿಲಿಂಡರ್‌ ಅಥವಾ ವರ್ಷಕ್ಕೆ ೧೫ಕ್ಕಿಂತ ಹೆಚ್ಚು ಸಿಲಿಂಡರ್‌ಗಳನ್ನು ಬಳಸುವಂತಿಲ್ಲ (LPG Limit) ಎಂಬ ನಿಯಮ ಜಾರಿಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಹಾಗೆಯೇ, ಶೀಘ್ರವೇ ಹೊಸ ನಿಯಮ ಜಾರಿಗೆ ಬರಲಿದೆ ಎಂದು ತಿಳಿದುಬಂದಿದೆ.

ಸಬ್ಸಿಡಿ ರಹಿತ (Non-Subsidised) ಗ್ರಾಹಕರು ತಿಂಗಳಿಗೆ ಹೆಚ್ಚಿನ ಅಡುಗೆ ಅನಿಲ ಸಿಲಿಂಡರ್‌ಗಳನ್ನು ಖರೀದಿಸಿ, ಅವುಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಸರ್ಕಾರ ಹೊಸ ಕ್ರಮಕ್ಕೆ ಮುಂದಾಗಿದೆ.

ಯಾರಿಗೆ ಹೇಗೆ ಅನ್ವಯ?

ಸಬ್ಸಿಡಿ ಸಹಿತ ಗ್ರಾಹಕರು ವರ್ಷಕ್ಕೆ ೧೨ ಸಿಲಿಂಡರ್‌ಗಳನ್ನು ಮಾತ್ರ ಖರೀದಿಸಬಹುದಾಗಿದೆ. ಹಾಗೊಂದು ವೇಳೆ, ಹೆಚ್ಚಿನ ಸಿಲಿಂಡರ್‌ ಬೇಕು ಅಂತಾದರೆ, ಅವರು ಸಬ್ಸಿಡಿ ರಹಿತವಾಗಿ ಖರೀದಿಸಬೇಕು. ಅದೂ ವರ್ಷದಲ್ಲಿ ೧೫ ಸಿಲಿಂಡರ್‌ಗಳನ್ನು ಮೀರುವಂತಿಲ್ಲ.

ಹೆಚ್ಚು ಬೇಕಾದರೆ ಏನು ಮಾಡಬೇಕು?

ತಿಂಗಳಿಗೆ ಎರಡಕ್ಕಿಂತ ಹೆಚ್ಚು ಅಥವಾ ವರ್ಷದಲ್ಲಿ ೧೫ಕ್ಕಿಂತ ಹೆಚ್ಚು ಸಿಲಿಂಡರ್‌ಗಳನ್ನು ಬಳಸಬೇಕಾದರೆ, ಬಳಕೆಯ ಅನಿವಾರ್ಯತೆ ಕುರಿತು ಡಿಸ್ಟ್ರಿಬ್ಯೂಟರ್‌ಗಳಿಗೆ ದಾಖಲೆ ನೀಡಬೇಕು. ಆಗ್ರಾ ವಿಭಾಗದ ಇಂಡೇನ್‌ ಡಿಸ್ಟ್ರಿಬ್ಯೂಟರ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ವಿಪುಲ್‌ ಪುರೋಹಿತ್‌ ಈ ಕುರಿತು ಮಾಹಿತಿ ನೀಡಿದ್ದು, “ಹೆಚ್ಚುವರಿಯಾಗಿ ಸಿಲಿಂಡರ್‌ ಖರೀದಿಸುವವರು ಬಳಕೆಯ ಅನಿವಾರ್ಯತೆ ಅಥವಾ ಕಾರಣದ ಬಗ್ಗೆ ನಿಖರ ಮಾಹಿತಿ ನೀಡಬೇಕು. ನೀಡಿದರೆ ಮಾತ್ರ ಎಲ್‌ಪಿಜಿ ಸಿಲಿಂಡರ್‌ ಬಳಕೆಯ ಮಿತಿ ಹೆಚ್ಚಿಸಲಾಗುತ್ತದೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | LPG: ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್‌ ದರ 135 ರೂ. ಇಳಿಕೆ

Exit mobile version