Site icon Vistara News

Madhavi Raje Scindia: ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾಗೆ ಮಾತೃ ವಿಯೋಗ

Madhavi Raje Scindia

ನವದೆಹಲಿ: ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ(Jyotiraditya Scindia) ಅವರ ತಾಯಿ ಮಾಧವಿ ರಾಜೆ ಸಿಂಧಿಯಾ(Madhavi Raje Scindia) ಅವರು ಇಂದು ಬೆಳೆಗ್ಗೆ ವಿಧಿವಶರಾಗಿದ್ದಾರೆ. ಕೆಲವು ದಿನಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿದ್ದ ಮಾಧವಿ ರಾಜೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ನ್ಯೂಮೋನಿಯಾದಿಂದ ಬಳಲುತ್ತಿದ್ದ ಮಾಧವಿ ರಾಜೆ ಅವರು ದಿಲ್ಲಿಯ ಏಮ್ಸ್‌ ಆಸ್ಪತ್ರೆಯ(AIIMS Delhi) ತುರ್ತು ನಿಗಾ ಘಟಕದಲ್ಲಿ ಕಳೆದ ಮೂರು ತಿಂಗಳುಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಕೆಲವು ದಿನಗಳಿಂದ ಅವರ ಆರೋಗ್ಯದಲ್ಲಿ ಬಹಳಷ್ಟು ಏರುಪೇರಾಗಿದ್ದು, ಅವರನ್ನು ವೆಂಟಿಲೇಟರ್‌ನಲ್ಲಿ ಇಡಲಾಗಿತ್ತು. ಇಂದು ಬೆಳಗ್ಗೆ 9.28ಕ್ಕೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಗ್ವಾಲಿಯರ್‌ನಲ್ಲಿ ಅಂತ್ಯಕ್ರಿಯೆ

ಮಾಧವಿರಾಜೆ ಅವರ ಅಂತ್ಯಕ್ರಿಯೆಯನ್ನು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಅಂತ್ಯಕ್ರಿಯೆಯಲ್ಲಿ ಕೇಂದ್ರ ಸಚಿವರು ಪಕ್ಷದ ಮುಖಂಡರು, ರಾಜಕಾರಣಿಗಳು ಭಾಗಿಯಾಗುವ ಸಾಧ್ಯತೆ ಇದೆ. ಇನ್ನು ಮಾಧವಿ ರಾಜೆ ನೇಪಾಳದ ರಾಜಮನೆತನಕ್ಕೆ ಸೇರಿದವರಾಗಿದ್ದು, ಅವರು ಮಹಾರಾಜ ಎರಡನೇ ಮಾಧವ್‌ ರಾವ್‌ ಸಿಂದಿಯಾ ಅವರನ್ನು ವಿವಾಹವಾಗಿದ್ದರು. ಅವರು ಶಿಕ್ಷಣ, ಮೆಡಿಕಲ್‌ ಕೇರ್‌ ಸೇರಿದಂತೆ ಒಟ್ಟು 24 ಟ್ರಸ್ಟ್‌ಗಳ ಅಧ್ಯಕ್ಷರೂ ಆಗಿದ್ದರು. ಅಲ್ಲದೇ ಕೇವಲ ಬಾಲಕಿಯರಿಗೆ ಶಿಕ್ಷಣ ನೀಡುವ ಸಿಂದಿಯಾ ಕನ್ಯಾ ವಿದ್ಯಾಲಯ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರೂ ಹೌದು. ತಮ್ಮ ಪತಿ ಎರಡನೇ ಮಾಧವ್‌ ರಾವ್‌ ಸಿಂಧಿಯಾ ಅವರ ಸ್ಮರಣಾರ್ಥ ಮಹರಾಜ್‌ ಮಾಧವ್‌ ರಾವ್‌ ಸಿಂಧಿಯಾ ವಸ್ತು ಸಂಗ್ರಹಾಲಯವನ್ನೂ ನಿರ್ಮಿಸಿದ್ದರು.

ಸೆ. 30, 2001 ರಂದು ಹಿರಿಯ ಕಾಂಗ್ರೆಸ್‌ ಮುಖಂಡರಾಗಿದ್ದ ಮಾಧವ್‌ ರಾವ್‌ ಸಿಂಧಿಯಾ ಉತ್ತರಪ್ರದೇಶದ ಮಣಿಪುರಿಯಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರು. ಇನ್ನು ನಾಗರಿಕ ವಿಮಾನಯಾನ ಸಚಿವರಾಗಿರುವ ಜ್ಯೋತಿರಾದಿತ್ಯ ಸಿಂಧಿಯಾ ಈ ಬಾರಿ ಮಧ್ಯಪ್ರದೇಶದ ಗುನ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದಾರೆ. ತಾಯಿಯ ಅಗಲಿಕೆಯಿಂದ ಅವರು ಆಘಾತಕೊಳಗಾಗಿದ್ದಾರೆ.

ಇದನ್ನೂ ಓದಿ:Shrimad Ramayana: ಕಿರುತೆರೆಯಲ್ಲಿ ಪ್ರಸಾರವಾಗಲಿದೆ ‘ಶ್ರೀಮದ್ ರಾಮಾಯಣ’ ಮಹಾ ಕಾವ್ಯ: ಎಲ್ಲಿ? ಯಾವಾಗ?

Exit mobile version