ಲೋಕಸಭೆ ಚುನಾವಣೆಯ ಸೆಮಿಫೈನಲ್ ಎಂದೇ ಹೇಳಲಾಗುತ್ತಿರುವ ಪಂಚ ರಾಜ್ಯ ವಿಧಾನಸಭೆ ಚುನಾವಣೆಯ (Assembly Election 2023) ಮಹತ್ವದ ಘಟ್ಟಕ್ಕೆ ಶುಕ್ರವಾರ (ನವೆಂಬರ್ 17) ಸಾಕ್ಷಿಯಾಗಲಿದೆ. ಛತ್ತೀಸ್‌ಗಢದಲ್ಲಿ ಎರಡನೇ ಹಾಗೂ ಕೊನೆಯ ಹಂತದ ಮತದಾನ ನಡೆದರೆ, ಮಧ್ಯಪ್ರದೇಶದಲ್ಲಿ ಒಂದೇ ಹಂತದಲ್ಲಿ ಚುನಾವಣೆ (Madhya Pradesh Polls) ನಡೆಯಲಿದೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ತೀವ್ರ ಪೈಪೋಟಿ ಇದ್ದು, ಮತದಾರ ಯಾರ ಪರ ವಾಲಲಿದ್ದಾನೆ ಎಂಬುದು ಕುತೂಹಲ ಕೆರಳಿಸಿದೆ. ಹಾಗಾದರೆ, ಮಧ್ಯಪ್ರದೇಶದ ರಾಜಕೀಯ ಪರಿಸ್ಥಿತಿ ಹೇಗಿದೆ? ಯಾವ ಪಕ್ಷಗಳು ಹೇಗೆ ರಣತಂತ್ರ ರೂಪಿಸಿವೆ? ಯಾರ ಕೈ ಮೇಲಾಗುವ ಸಾಧ್ಯತೆ ಇದೆ ಎಂಬುದರ ಸಂಕ್ಷಿಪ್ತ ವಿವರಣೆ ಇಲ್ಲಿದೆ.
ಬಿಜೆಪಿ-ಕಾಂಗ್ರೆಸ್ ಮಧ್ಯೆ ನೇರ ಪೈಪೋಟಿ
ಮಧ್ಯಪ್ರದೇಶದ 230 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ನೇರ ಪೈಪೋಟಿ ಇದೆ. ಅದರಲ್ಲೂ, ಕಳೆದ ಬಾರಿ ಬಿಜೆಪಿಗಿಂತ ಹೆಚ್ಚಿನ ಸ್ಥಾನ ಪಡೆದಿದ್ದ ಕಾಂಗ್ರೆಸ್‌ಅನ್ನು ಬಿಜೆಪಿ ಓವರ್‌ಟೇಕ್ ಮಾಡಿ ಅಧಿಕಾರ ಹಿಡಿದಿದೆ. ಈಗ ಮತ್ತೆ ಬಹುಮತ ಸಾಧಿಸಿ ಅಧಿಕಾರದ ಗದ್ದುಗೆಯೇರಲು ಕಾಂಗ್ರೆಸ್ ಇನ್ನಿಲ್ಲದ ರಣತಂತ್ರ ರೂಪಿಸಿದೆ. ಮತ್ತೊಂದೆಡೆ, ಕಳೆದ ಬಾರಿ ಸಾಧಿಸದ ಬಹುಮತವನ್ನು ಈ ಬಾರಿ ಸಾಧಿಸುವ ಮೂಲಕ ಮತ್ತೆ ಅಧಿಕಾರ ಹಿಡಿಯಲು ಹವಣಿಸುತ್ತಿದೆ. ಹಾಗಾಗಿ, ಈ ಬಾರಿಯ ಚುನಾವಣೆಯು ತೀವ್ರ ಹಣಾಹಣಿಯಿಂದ ಕೂಡಿದೆ.
ಕಾಂಗ್ರೆಸ್ ಎದುರಿಸುತ್ತಿರುವ ಸವಾಲುಗಳು
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಎಷ್ಟೇ ಉಚಿತ ಕೊಡುಗೆಗಳ ಘೋಷಣೆ ಮಾಡಿದರೂ ಮಧ್ಯಪ್ರದೇಶದಲ್ಲಿ ಮೇಲ್ವರ್ಗದವರ ಮತಗಳು ಕಾಂಗ್ರೆಸ್‌ಗೆ ಸಿಗುವುದಿಲ್ಲ. ಕಳೆದ ಚುನಾವಣೆಯಲ್ಲಿ ಶೇ.58ರಷ್ಟು ಮೇಲ್ವರ್ಗದ ಮತಗಳು ಬಿಜೆಪಿ ಪಾಲಾಗಿದ್ದರೆ, ಶೇ.33ರಷ್ಟು ಮತಗಳು ಕಾಂಗ್ರೆಸ್‌ಗೆ ಸಿಕ್ಕಿದ್ದವು. ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ಮತಗಳ ಮೇಲೆಯೇ ಕಾಂಗ್ರೆಸ್ ಅವಲಂಬಿತವಾಗಿದ್ದು, ಎಲ್ಲರ ಬೆಂಬಲ ಗಳಿಸುವುದು ಕಷ್ಟವಾಗಲಿದೆ.
ಒಟ್ಟು ಸ್ಥಾನ 230
ಮ್ಯಾಜಿಕ್ ನಂಬರ್ 116
ರಾಜಸ್ಥಾನದಂತೆ ಮಧ್ಯಪ್ರದೇಶದಲ್ಲೂ ಆಂತರಿಕ ಬಿಕ್ಕಟ್ಟು ಕಾಂಗ್ರೆಸ್‌ಗೆ ದೊಡ್ಡ ಸವಾಲಾಗಿದೆ. ದಿಗ್ವಿಜಯ್ ಸಿಂಗ್ ಹಾಗು ಕಮಲ್ ನಾಥ್ ಬಣಗಳ ಬಿಕ್ಕಟ್ಟು ಪಕ್ಷಕ್ಕೆ ಮುಳುವಾಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಕಮಲ್ ನಾಥ್ ಹಾಗೂ ದಿಗ್ವಿಜಯ್ ಸಿಂಗ್ ನಾಯಕತ್ವ ಇದ್ದರೂ, ಯುವಕರಿಗೆ ಹೆಚ್ಚು ಮಣೆ ಹಾಕಿಲ್ಲ. ಯುವ ನಾಯಕರ ಕೊರತೆಯಿಂದಾಗಿ ಯುವಕರ ಮತಗಳು ಕಾಂಗ್ರೆಸ್ ಕೈ ತಪ್ಪುವ ಸಾಧ್ಯತೆ ಇದೆ.
2018ರ ಚುನಾವಣೆ ಫಲಿತಾಂಶ
ಕಾಂಗ್ರೆಸ್- 114
ಬಿಜೆಪಿ – 109
ಬಿಎಸ್‌ಪಿ- 2
ಇತರೆ – 5
ಬಿಜೆಪಿಗೆ ತಲೆನೋವಾದ ವಿಚಾರಗಳು ಯಾವವು?
ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದ್ದರೂ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಕಾಂಗ್ರೆಸ್ ಬಳಸಿದ ಜಾತಿ ಗಣತಿಯ ದಾಳ, ಉಚಿತ ಕೊಡುಗೆಗಳ ಜತೆಗೆ ಆಡಳಿತ ವಿರೋಧಿ ಅಲೆಯನ್ನೂ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಎದುರಿಸಬೇಕಿದೆ. ಇನ್ನು ಎಸ್‌ಸಿ, ಎಸ್‌ಟಿ ಮತದಾರರ ಕೃಪಾಕಟಾಕ್ಷ ಹೆಚ್ಚಾಗಿ ಇಲ್ಲದಿರುವುದು, ಯುವ ನಾಯಕತ್ವದ ಕೊರತೆ, ಮೋದಿ ಮೇಲಿನ ಅತಿಯಾದ ಅವಲಂಬನೆ, ಆಂತರಿಕ ಕಿಚ್ಚಾಟ ಕೂಡ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿವೆ.
ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ ಶುಕ್ರವಾರ ಕೊನೇ ಹಂತದ ಮತದಾನ; ಪಕ್ಷಗಳ ಬಲಾಬಲ, ರಣತಂತ್ರ ಹೇಗಿದೆ?
ಫಲ ಕೊಡುವವೇ ಉಚಿತ ಕೊಡುಗೆಗಳು?
ಕರ್ನಾಟಕದಲ್ಲಿ ಐದು ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್‌ಗೆ ಮುನ್ನಡೆ ಸಿಕ್ಕ ಬಳಿಕ ಎಲ್ಲ ರಾಜ್ಯಗಳಲ್ಲೂ ಉಚಿತ ಕೊಡುಗೆಗಳನ್ನು ಘೋಷಿಸಿದೆ. ಅತ್ತ ಬಿಜೆಪಿಯೂ ಉಚಿತ ಯೋಜನೆಗಳನ್ನು ಘೋಷಿಸಿದೆ. ಮಧ್ಯಪ್ರದೇಶದಲ್ಲೂ ಕಾಂಗ್ರೆಸ್ ಮಹಿಳೆಯರಿಗೆ ಮಾಸಿಕ 1,500 ರೂ. ಸಹಾಯಧನ, ರೈತರ ಸಾಲ ಮನ್ನಾ, ಉಚಿತ ವಿದ್ಯುತ್ ಸೇರಿ ಹಲವು ಘೋಷಣೆ ಮಾಡಿದೆ. ಅತ್ತ ಬಿಜೆಪಿ ಕೂಡ ಮುಂದಿನ ಐದು ವರ್ಷಗಳವರೆಗೆ ಜನರಿಗೆ ಉಚಿತವಾಗಿ ಪಡಿತರ ವಿತರಣೆ, ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ರೈತರಿಗೆ ವಾರ್ಷಿಕ 12 ಸಾವಿರ ರೂ. ಹಣಕಾಸು ನೆರವು, ಬಡವರಿಗೆ 450 ರೂಪಾಯಿಗೆ ಒಂದು ಅಡುಗೆ ಅನಿಲ ಸಿಲಿಂಡರ್ ಸೇರಿ ಹಲವು ಉಚಿತ ಕೊಡುಗೆಗಳನ್ನು ಘೋಷಿಸಿದೆ. ಹಾಗಾಗಿ, ಮತದಾರ ಯಾರ ಪರ ವಾಲಲಿದ್ದಾನೆ ಎಂಬುದು ಕುತೂಹಲ ಕೆರಳಿಸಿದೆ.