Site icon Vistara News

ಕಾರಿಗೆ ಕೊಡಲು ಕಾಸಿಲ್ಲದೇ ಬೇರೆಯವರ ಬೈಕ್​ನಲ್ಲಿ ವಿಧಾನ ಸಭೆಗೆ ತೆರಳಿದ ಆದಿವಾಸಿ ಪಾರ್ಟಿಯ ಶಾಸಕ

Bharath Adivasi Party

ಭೋಪಾಲ್: ಕೆಲವು ದಿನಗಳ ಹಿಂದೆ ನಡೆದ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಭಾರತ್ ಆದಿವಾಸಿ ಪಕ್ಷದಿಂದ(ಬಿಎಪಿ) ಕಮಲೇಶ್ವರ್ ದೋಡಿಯಾರ್ ಆಯ್ಕೆಯಾಗಿದ್ದರು. ಅವರು ಆ ಪಕ್ಷದ ಏಕೈಕ ವಿಜೇತ ಹಾಗೂ ವಿಧಾನಸಭೆ ಸದಸ್ಯ. ಕಾಂಗ್ರೆಸ್ ಮತ್ತು ಬಿಜೆಪಿ ಹೊರತುಪಡಿಸಿದರೆ ಬೇರೊಂದು ಪಕ್ಷದ ಏಕೈಕ ಶಾಸಕ. ಅಚ್ಚರಿಯೆಂದರೆ ಅವರಿಗೆ ತಮ್ಮ ಊರಿನಿಂದ 300ಕ್ಕೂ ಅಧಿಕ ಕಿಲೋಮೀಟರ್​ ದೂರದಲ್ಲಿರುವ ರಾಜ್ಯ ರಾಜಧಾನಿಗೆ ಕಾರಿನಲ್ಲಿ ಹೋಗುವಷ್ಟು ಆರ್ಥಿಕ ಶಕ್ತಿಯಿಲ್ಲ. ಹೀಗಾಗಿ ಅವರು ಬೇರೆಯವರ ಬೈಕ್​ನಲ್ಲಿ ವಿಧಾನ ಸಭೆಗೆ ತೆರಳಿದ್ದಾರೆ. ಇದರೊಂದಿಗೆ ಅವರು ಸುದ್ದಿಗೆ ಗ್ರಾಸವಾಗಿದ್ದಾರೆ.

ಕಮಲೇಶ್ ಅವರು ಮೋಟಾರ್ ಸೈಕಲ್​ನಲ್ಲಿ ಭೋಪಾಲ್​ಗೆ ತೆರಳುತ್ತಿದ್ದ ವಿಷಯವನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ನೇರ ಪ್ರಸಾರ ಮಾಡಿದ್ದಾರೆ. ಶಾಸಕರಾಗಿ ಆಯ್ಕೆಗೊಂಡ ನಂತರ ಮೊದಲ ಬಾರಿಗೆ ರಾಜ್ಯ ರಾಜಧಾನಿಗೆ ಭೇಟಿ ನೀಡಲು ಕಾರನ್ನು ವ್ಯವಸ್ಥೆ ಮಾಡಲು ಪ್ರಯತ್ನಿಸಿದ್ದೆ. ಆದರೆ, ಅವರು ಸಾಧ್ಯವಾಗದ ಕಾರಣ ಬೈಕ್​ನಲ್ಲಿ ಹೋಗುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಮಾವನ ಬೈಕ್​ನಲ್ಲಿ ಪ್ರಯಾಣ

ಅಂತಿಮವಾಗಿ ಅವರು ತಮ್ಮ ಸೋದರ ಮಾವನ ಮೋಟಾರ್​ಬೈಕ್​ ಎರವಲು ಪಡೆದುಕೊಂಡು ಅದರ ಮೇಲೆ ಪ್ರಯಾಣ ಮಾಡಿದ್ದಾರೆ. ಅದರ ಮೇಲೆ “ಎಂಎಲ್ಎ” ಎಂಬ ಪದವಿರುವ ಸ್ಟಿಕ್ಕರ್ ಅನ್ನು ಅಂಟಿಸಿಕೊಂಡಿದ್ದಾರೆ. ಚಳಿಯ ಹವಾಮಾನವನ್ನು ಲೆಕ್ಕಿಸದೆ ಸಹವರ್ತಿಯೊಂದಿಗೆ ಸವಾರಿ ಮಾಡಿದ್ದಾರೆ. 330 ಕಿ.ಮೀ ಪ್ರಯಾಣದ ನಂತರ ಬುಧವಾರ ರಾತ್ರಿ ಭೋಪಾಲ್ ತಲುಪಿದ ನಂತರ ದೋಡಿಯಾರ್ ತಮ್ಮ ಪ್ರಯಾಣದ ಖುಷಿಯನ್ನು ಹೇಳಿಕೊಂಡಿದ್ದಾರೆ. ಭೋಪಾಲ್ ತಲುಪಿದ ನಂತರ, ಅವರು ಶಾಸಕರ ವಿಶ್ರಾಂತಿ ಗೃಹದಲ್ಲಿ ವಾಸವಾಗಿದ್ದಾರೆ.

ಗುರುವಾರ, ಅವರು ವಿಧಾನಸಭೆಯ ಪ್ರವೇಶ ದ್ವಾರದ ಮುಂದೆ ನಿಂತು ನಮಸ್ಕರಿಸಿದ್ದಾರೆ. ನಂತರ ಶಾಸಕರಾಗಿ ಆಯ್ಕೆಯಾದ ಕುರಿತ ದಾಖಲೆಗಳನ್ನು ಅಧಿಕಾರಿಗಳ ಮುಂದೆ ಪ್ರಸ್ತುತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ರತ್ಲಾಮ್ ಪೊಲೀಸರನ್ನು ಟ್ಯಾಗ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ವಿಧಾನಸಭೆಯಲ್ಲಿ ಗೆದ್ದಿರುವ ದಾಖಲೆಗಳನ್ನು ಪೂರ್ಣಗೊಳಿಸಲು ಭೋಪಾಲ್​​ಗೆ ಪ್ರಯಾಣಿಸಲು ಕಾರನ್ನು ವ್ಯವಸ್ಥೆ ಮಾಡಲು ಸಾಧ್ಯವಾಗದ ಕಾರಣ ಮೋಟಾರ್​​ ಬೈಕಿನಲ್ಲಿ ಹೊರಟಿದ್ದೇನೆ. ದಾರಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಅಗತ್ಯ ಭದ್ರತೆಯನ್ನು ಒದಗಿಸಬೇಕು ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ : ‘ಮೋದಿಯನ್ನು ಯಾರೂ ಹೆದರಿಸಲು ಸಾಧ್ಯವಿಲ್ಲ…ʼ ವ್ಲಾದಿಮಿರ್‌ ಪುಟಿನ್‌ ಹೀಗಂದಿದ್ದೇಕೆ?

ಅವರು ಭೋಪಾಲ್ ಗೆ ತಮ್ಮ ಸವಾರಿಯನ್ನು ಫೇಸ್ಬುಕ್ ಲೈವ್ ಮೂಲಕ ಪ್ರಸಾರ ಮಾಡಿದ್ದಾರೆ ಕಮಲೇಶ್ವರ್ ದೋಡಿಯಾರ್. ಅವರು ಬಡ ಕಾರ್ಮಿಕನ ಕುಟುಂಬಕ್ಕೆ ಸೇರಿದವರಾಗಿರುವುದರಿಂದ, ಅವರಿಗೆ ಕಾರು ಖರೀದಿಸಲು ಸಾಧ್ಯವಿಲ್ಲ,. ಅವರು ಜನರಿಂದ ಹಣವನ್ನು ಎರವಲು ಪಡೆದು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ ಎಂದು ಅವರು ಹೇಳಿದರು.ಹಾಲಿ ಕಾಂಗ್ರೆಸ್ ಶಾಸಕ ಹರ್ಷ ವಿಜಯ್ ಗೆಹ್ಲೋಟ್ ಅವರನ್ನು 4,618 ಮತಗಳಿಂದ ಸೋಲಿಸಿದ ದೋಡಿಯಾರ್ ದೆಹಲಿ ವಿಶ್ವವಿದ್ಯಾಲಯದಲ್ಲಿ ಎಲ್ಎಲ್ಬಿ ಅಧ್ಯಯನ ಮಾಡುತ್ತಿದ್ದಾರೆ.

230 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿ 163 ಮತ್ತು ಕಾಂಗ್ರೆಸ್ 66 ಸ್ಥಾನಗಳನ್ನು ಗೆದ್ದರೆ, ಬಿಎಪಿ ಉಳಿದ ಒಂದು ಸ್ಥಾನವನ್ನು ಗೆದ್ದಿದೆ.

Exit mobile version