ಭೋಪಾಲ್: ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಲೇ ಐದು ಗ್ಯಾರಂಟಿಗಳನ್ನು ಜಾರಿಗೆ ಮುಂದಾಗಿರುವ ಬೆನ್ನಲ್ಲೇ ಮಧ್ಯಪ್ರದೇಶದಲ್ಲಿ ಸರ್ಕಾರವು ಪ್ರಯಾಗರಾಜ್ ತೀರ್ಥಯಾತ್ರೆ ಕೈಗೊಳ್ಳುವ ಹಿರಿಯ ನಾಗರಿಕರಿಗೆ ಉಚಿತವಾಗಿ ವಿಮಾನದಲ್ಲಿ ಸಂಚರಿಸುವ ‘ಭಾಗ್ಯ’ ನೀಡಿದೆ. ಭಾನುವಾರ 32 ಹಿರಿಯ ನಾಗರಿಕರು ಭೋಪಾಲ್‌ನಿಂದ ಪ್ರಯಾಗರಾಜ್‌ಗೆ ಉಚಿತವಾಗಿ ಹಾರಾಟ ನಡೆಸಿದ್ದು, ವಿಮಾನದ ಒಳಗೆ ಹೋಗಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಶುಭ ಕೋರಿದ್ದಾರೆ.
ಮಧ್ಯಪ್ರದೇಶದಲ್ಲಿ ಜಾರಿಗೊಳಿಸಲಾಗಿರುವ ಮುಖ್ಯಮಂತ್ರಿ ತೀರ್ಥ ದರ್ಶನ ಯೋಜನೆ ಅನ್ವಯ ಇದೇ ಮೊದಲ ಬಾರಿಗೆ ಹಿರಿಯ ನಾಗರಿಕರು ವಿಮಾನದಲ್ಲಿ ಸಂಚರಿಸಿದ್ದಾರೆ. ಭೋಪಾಲ್‌ನ ರಾಜಾ ಭೋಜ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಶಿವರಾಜ್ ಸಿಂಗ್ ಚೌಹಾಣ್ ಅವರು 24 ಪುರುಷರು ಹಾಗೂ 8 ಮಹಿಳೆಯರು ಸೇರಿ 32 ಜನರಿಗೆ ಶುಭ ಕೋರಿ, ವಿಮಾನ ಪ್ರಯಾಣಕ್ಕೆ ಚಾಲನೆ ನೀಡಿದರು.
ಯಾತ್ರಿಕರಿಗೆ ಶುಭಕೋರಿದ ಚೌಹಾಣ್
ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರವು 2012ರಲ್ಲಿಯೇ ತೀರ್ಥಯಾತ್ರೆ ಕೈಗೊಳ್ಳುವವರಿಗೆ ರೈಲುಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಯೋಜನೆ ಜಾರಿಗೊಳಿಸಲಾಗಿತ್ತು. ಈಗ ಅದೇ ಬಿಜೆಪಿ ಸರ್ಕಾರವು ವಿಮಾನಯಾನಕ್ಕೂ ಉಚಿತ ಯೋಜನೆ ಕಲ್ಪಿಸಿದೆ. ವಿಶೇಷ ರೈಲುಗಳಲ್ಲಿ ಮಧ್ಯಪ್ರದೇಶದಲ್ಲಿ ಇದುವರೆಗೆ 7.82 ಲಕ್ಷ ಪ್ರಯಾಣಿಕರು ತೀರ್ಥಯಾತ್ರೆ ಕೈಗೊಂಡಿದ್ದಾರೆ. ಇದಕ್ಕಾಗಿ, 782 ವಿಶೇಷ ರೈಲುಗಳು ಸಂಚರಿಸಿವೆ ಎಂದು ಸರ್ಕಾರ ತಿಳಿಸಿದೆ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಕಾಂಗ್ರೆಸ್‌ನ ಉಚಿತ ಕೊಡುಗೆಗಳು ಜನರಿಗೆ ನಿರಾಸೆ ಮಾಡದಿರಲಿ
ಮುಖ್ಯಮಂತ್ರಿ ತೀರ್ಥ ದರ್ಶನ ಯೋಜನೆ ಅಡಿಯಲ್ಲಿ ಮೇ 21ರಿಂದ ಜುಲೈವರೆಗೆ ಹಿರಿಯ ನಾಗರಿಕರು ಭೋಪಾಲ್‌ನಿಂದ ಪ್ರಯಾಗರಾಜ್‌ಗೆ ಉಚಿತವಾಗಿ ವಿಮಾನದಲ್ಲಿ ಪ್ರಯಾಣಿಸಬಹುದಾಗಿದೆ. ಇದಕ್ಕೆ ಶಿವರಾಜ್ ಸಿಂಗ್ ಚೌಹಾಣ್ ಅವರು ಕ್ರಿಯಾಯೋಜನೆ ರೂಪಿಸಿ, ವಿಶೇಷ ಆಸಕ್ತಿ ತೋರಿದ್ದಾರೆ.
ಬೇರೆ ತೀರ್ಥಕ್ಷೇತ್ರಗಳಿಗೂ ವಿಮಾನ ಸೌಲಭ್ಯ
ಭೋಪಾಲ್‌ನಿಂದ ಪ್ರಯಾಗರಾಜ್‌ಗೆ ಮಾತ್ರವಲ್ಲ ಮೇ 23ರಂದು ಅಗರ್-ಮಾಲ್ವಾ ಜಿಲ್ಲೆಯ ನಾಗರಿಕರು ಇಂದೋಋ ವಿಮಾನ ನಿಲ್ದಾಣದಿಂದ ಶಿರಡಿಗೆ, ಬೆತುಲ್ ಜಿಲ್ಲೆಯ ನಾಗರಿಕರು ಮೇ 26ರಂದು ಭೋಪಾಲ್ ವಿಮಾನ ನಿಲ್ದಾಣದಿಂದ ಮಥುರಾ, ಮೇ 26ರಂದು ದೇವಾಸ್ ಯಾತ್ರಿಕರು ಇಂದೋರ್‌ನಿಂದ ಶಿರಡಿಗೆ ಉಚಿತವಾಗಿ ವಿಮಾನದಲ್ಲಿ ಸಂಚಾರ ನಡೆಸಲಿದ್ದಾರೆ. ಜೂನ್ 3ರಂದು ಖಂಡ್ವಾ ನಾಗರಿಕರು ಇಂದೋರ್‌ನಿಂದ ಕೋಲ್ಕೊತಾ ಮಾರ್ಗವಾಗಿ ಗಂಗಾಸಾಗರ್‌ಗೆ ತೆರಳಲಿದ್ದಾರೆ.