ಭೋಪಾಲ್: ಬದಲಾದ ಕಾಲಘಟ್ಟದಲ್ಲಿ, ದೇವಾಲಯಗಳಿಗೂ ತುಂಡುಡುಗೆ ಧರಿಸಿ ಬರುವ ಭಕ್ತರ ಸಂಖ್ಯೆ ಜಾಸ್ತಿಯಾಗಿರುವ ಕಾರಣ ಭಾರತದ ಹಲವು ದೇವಾಲಯಗಳಲ್ಲಿ ವಸ್ತ್ರಸಂಹಿತೆ ಜಾರಿಗೆ ತರಲಾಗಿದೆ. ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ದೇವಾಲಯಕ್ಕೆ ಆಗಮಿಸಬೇಕು ಎಂಬುದಾಗಿ ದೇವಾಲಯಗಳ ಆಡಳಿತ ಮಂಡಳಿಗಳು ಆದೇಶ ಹೊರಡಿಸಿವೆ. ಈಗ ಮಧ್ಯಪ್ರದೇಶದ (Madhya Pradesh) ರತ್ಲಾಮ್‌ನಲ್ಲಿರುವ (Ratlam), ಪ್ರಸಿದ್ಧ ಕಾಳಿಕಾ ದೇವಾಲಯವು (Kalika Temple) ಕೂಡ ವಸ್ತ್ರಸಂಹಿತೆ ಜಾರಿಗೊಳಿಸಿದ್ದು, ಭಕ್ತಾದಿಗಳು ವಿದೇಶಿ ಹಾಗೂ ತುಂಡುಡುಗೆ ಧರಿಸಿ ಬರುವಂತಿಲ್ಲ ಎಂದು ಆದೇಶಿಸಿದೆ.
ದೇವಾಲಯದ ಅರ್ಚಕ ರಾಜೇಂದ್ರ ಶರ್ಮಾ ಅವರು ವಸ್ತ್ರಸಂಹಿತೆ ಜಾರಿಗೊಳಿಸಿದ್ದಾರೆ. “ದೇವಾಲಯದ ಪಾವಿತ್ರ್ಯ ಕಾಪಾಡಲು, ಭಕ್ತರು ವಿದೇಶಿ ಹಾಗೂ ತುಂಡುಡುಗೆ, ಶಾರ್ಟ್ಸ್‌ಗಳನ್ನು ಧರಿಸಿ ಬಂದರೆ, ಅವರಿಗೆ ದೇವಾಲಯ ಪ್ರವೇಶಿಸಲು ಅನುಮತಿ ನೀಡುವುದಿಲ್ಲ. ಇಂತಹ ಉಡುಪು ಧರಿಸಿ ಬರುವ ಯಾರಿಗೂ ದೇವಾಲಯದ ಗರ್ಭಗುಡಿ ಪ್ರವೇಶಿಸಲು ಭದ್ರತಾ ಸಿಬ್ಬಂದಿಯು ಬಿಡುವುದಿಲ್ಲ. ಅಂತಹ ಭಕ್ತಾದಿಗಳು ದೇವಾಲಯದ ಹೊರಗಿನಿಂದಲೇ ದರ್ಶನ ಪಡೆದು ಹೋಗಬೇಕಾಗುತ್ತದೆ” ಎಂಬುದಾಗಿ ಅರ್ಚಕ ತಿಳಿಸಿದ್ದಾರೆ.
ಸುಮಾರು 400 ವರ್ಷಗಳ ಹಿಂದೆ ರತ್ಲಾಮ್ ಅರಸನಾಗಿದ್ದ ರತನ್ ಸಿಂಗ್ ಅವರು ಕಾಳಿಕಾ ದೇವಿಯ ಆರಾಧಕರಾಗಿದ್ದು, ಅವರು ದೇವಾಲಯವನ್ನು ನಿರ್ಮಿಸಿದ್ದಾರೆ. ಪ್ರಸಕ್ತ ದೇವಾಲಯದ ನಿರ್ವಹಣೆಯನ್ನು ಕೋರ್ಟ್ ಆಫ್ ವಾರ್ಡ್ಸ್ ಕಾಯ್ದೆ ಅಡಿಯಲ್ಲಿ ಜಿಲ್ಲಾಡಳಿತವೇ ನೋಡಿಕೊಳ್ಳುತ್ತದೆ. ತಹಸೀಲ್ದಾರ್ ರಿಷಭ್ ಠಾಕೂರ್ ಅವರು ಕೂಡ ವಸ್ತ್ರಸಂಹಿತೆ ಕುರಿತು ಮಾತನಾಡಿದ್ದಾರೆ. “ದೇವಾಲಯದ ನಿರ್ವಹಣಾ ಸಮಿತಿಯು ಪಾಶ್ಚಿಮಾತ್ಯ ಉಡುಪುಗಳನ್ನು ನಿರ್ಬಂಧಿಸಿದೆ” ಎಂದು ಹೇಳಿದ್ದಾರೆ.
ನಿರ್ಧಾರ ಸ್ವಾಗತಿಸಿದ ಭಕ್ತರು
ಕಾಳಿಕಾ ದೇವಾಲಯದಲ್ಲಿ ಪಾಶ್ಚಿಮಾತ್ಯ ಹಾಗೂ ತುಂಡುಡುಗೆಯನ್ನು ನಿಷೇಧಿಸಿರುವ ದೇವಾಲಯ ಆಡಳಿತ ಮಂಡಳಿ ತೀರ್ಮಾನವನ್ನು ಭಕ್ತರು ಸ್ವಾಗತಿಸಿದ್ದಾರೆ. ದೇಶ-ವಿದೇಶಗಳಿಂದ ದೇವಾಲಯಕ್ಕೆ ಭಕ್ತರು ಆಗಮಿಸುತ್ತಾರೆ. ಇತ್ತೀಚೆಗೆ ದೇವಾಲಯಕ್ಕೂ ತುಂಡುಡುಗೆ ಧರಿಸಿ ಬರುವವರ ಸಂಖ್ಯೆ ಜಾಸ್ತಿಯಾಗಿದೆ. ಹಾಗಾಗಿ, ದೇವಾಲಯವು ವಸ್ತ್ರಸಂಹಿತೆ ಜಾರಿಗೊಳಿಸಿರುವುದು ಉತ್ತಮ ನಿರ್ಧಾರವಾಗಿದೆ. ಭಕ್ತರು ಸಾಂಪ್ರದಾಯಿಕ ದಿರಸು ಧರಿಸಿ ದೇವಾಲಯಕ್ಕೆ ಆಗಮಿಸುವುದು ಉತ್ತಮ ಎಂದು ಭಕ್ತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: 16 ದೇಗುಲಗಳಲ್ಲಿ ವಸ್ತ್ರಸಂಹಿತೆ; ಹರಿದ ಜೀನ್ಸ್, ಶಾರ್ಟ್ಸ್ ತೊಟ್ಟು ಹೋದರೆ ಹೆಣ್ಣುಮಕ್ಕಳಿಗಿಲ್ಲ ಪ್ರವೇಶ