ಭೋಪಾಲ್: ಮರಳು ಮಾಫಿಯಾ, ಗಣಿ ಮಾಫಿಯಾಗೆ ಆಗಾಗ ಪೊಲೀಸರು, ಅಧಿಕಾರಿಗಳು ದೇಶದಲ್ಲಿ ಬಲಿಯಾಗುತ್ತಲೇ ಇರುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ, ಮಧ್ಯಪ್ರದೇಶದಲ್ಲಿ ಮರಳು ಮಾಫಿಯಾ ತಡೆಯಲು ಹೋದ ಅಸಿಸ್ಟಂಟ್ ಸಬ್-ಇನ್ಸ್‌ಪೆಕ್ಟರ್ (ASI) ಮೇಲೆ ಟ್ರ್ಯಾಕ್ಟರ್ ಹರಿಸಿ ಕೊಲೆ ಮಾಡಿರುವ ಭೀಕರ ಘಟನೆ ನಡೆದಿದೆ. ಮೃತ ಪೊಲೀಸ್ ಅಧಿಕಾರಿಯನ್ನು (Police Officer) ಮಹೇಂದ್ರ ಬಾಗ್ರಿ (Mahendra Bagri) ಎಂಬುದಾಗಿ ಗುರುತಿಸಲಾಗಿದೆ.
ಮಧ್ಯಪ್ರದೇಶದ ಶಾಹ್‌ದೋಲ್ ಜಿಲ್ಲೆಯ ನೌಧಿಯಾ ಗ್ರಾಮದ ಬಳಿ ಅಕ್ರಮವಾಗಿ ಮರಳು ಸಾಗಣೆ ಮಾಡಲಾಗುತ್ತಿತ್ತು. ಶನಿವಾರ ರಾತ್ರಿ (ಮೇ 5) ಒಬ್ಬ ಮಹೇಂದ್ರ ಬಾಗ್ರಿ ಹಾಗೂ ಇಬ್ಬರು ಪೊಲೀಸ್ ಪೇದೆಗಳು ದಂಧೆಕೋರರನ್ನು ಹಿಡಿಯಲು ಮಾಫಿಯಾ ನಡೆಯುವ ಜಾಗಕ್ಕೆ ತೆರಳಿದ್ದರು. ಇದೇ ವೇಳೆ ಎಎಸ್‌ಐ ಅವರು ಮೊದಲು ದಂಧೆಕೋರರ ಬಳಿ ಹೋಗಿದ್ದಾರೆ. ಆಗ ದಂಧೆಕೋರರು ಅವರ ಮೇಲೆ ಟ್ರ್ಯಾಕ್ಟರ್ ಹರಿಸಿ ಕೊಲೆ ಮಾಡಿದ್ದಾರೆ. ಇದಾದ ಕೂಡಲೇ ಅವರನ್ನು ರಕ್ಷಿಸಲು ಇಬ್ಬರು ಪೇದೆಗಳು ತೆರಳಿದ್ದಾರೆ. ಆದರೆ, ಅಷ್ಟೊತ್ತಿಗಾಗಲೇ ಎಎಸ್‌ಐ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.
#WATCH | Madhya Pradesh | Visuals from the site where ASI was allegedly murdered by the sand mafia in Naudhiya of Shahdol. pic.twitter.com/Qq8AIK1Nrl
— ANI (@ANI) May 5, 2024
ಪೊಲೀಸ್ ಅಧಿಕಾರಿಯ ಮೇಲೆ ಟ್ರ್ಯಾಕ್ಟರ್ ಹರಿಸಿದ ಚಾಲಕ ಸೇರಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇಷ್ಟಾದರೂ, ಮರಳು ದಂಧೆ ನಡೆಸುತ್ತಿರುವ ಪ್ರಮುಖ ಆರೋಪಿಯು ತಪ್ಪಿಸಿಕೊಂಡು ಹೋಗಿದ್ದಾನೆ. “ನೌಧಿಯಾ ಗ್ರಾಮದ ಸುತ್ತಮುತ್ತ ಮರಳು ಮಾಫಿಯಾ ನಡೆಯುತ್ತಿರುವ ಕುರಿತು ನಿಖರ ಮಾಹಿತಿ ಪಡೆದ ಎಎಸ್‌ಐ ನೇತೃತ್ವದ ತಂಡವು ದಾಳಿ ನಡೆಸಿತ್ತು. ಅರೆಸ್ಟ್ ವಾರಂಟ್ ಜತೆಗೆ ಪೊಲೀಸರು ತೆರಳಿದ್ದರು. ಇದೇ ವೇಳೆ, ದುಷ್ಕರ್ಮಿಗಳು ಎಎಸ್‌ಐ ಮೇಲೆ ಟ್ರ್ಯಾಕ್ಟರ್ ಹರಿಸಿ ಹತ್ಯೆಗೈದಿದ್ದಾರೆ” ಎಂದು ಶಾಹ್‌ದೋಲ್ ಎಡಿಜಿಪಿ ಡಿ.ಸಿ.ಸಾಗರ್ ಮಾಹಿತಿ ನೀಡಿದ್ದಾರೆ.
ಎಎಸ್‌ಐ ಹತ್ಯೆಯ ಬೆನ್ನಲ್ಲೇ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. “ಮಧ್ಯಪ್ರದೇಶದಲ್ಲಿ ಭ್ರಷ್ಟಾಚಾರ, ಮಾಫಿಯಾ, ಅಕ್ರಮ ದಂಧೆಗಳು ಮಿತಿಮೀರಿವೆ. ಸರಾಸರಿ 1.7 ದಿನಕ್ಕೆ ಒಂದರಂತೆ ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿವೆ. ಮರಳು ಮಾಫಿಯಾ ಮಿತಿಮೀರಿ ಹೋಗಿದೆ. ಇಷ್ಟಾದರೂ ಆಳುವ ಸರ್ಕಾರವು ಕಣ್ಣುಮುಚ್ಚಿಕೊಂಡು ಕೂತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಹಿಂದೂ ಸಂಘಟನೆಯ ನಾಯಕನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಮೌಲ್ವಿಯ ಬಂಧನ