Site icon Vistara News

ಮಹಾ ವಿಧಾನ ಪರಿಷತ್ತಿಗೆ ಬಿಜೆಪಿಯಿಂದ ನಾಲ್ವರು, ಎನ್‌ಸಿಪಿ ಹಾಗೂ ಶಿವಸೇನೆಯ ತಲಾ ಇಬ್ಬರ ಆಯ್ಕೆ

maharahtra vidhana sabha

ಮುಂಬಯಿ: ಸೋಮವಾರ ನಡೆದ ಮಹಾರಾಷ್ಟ್ರ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಬಿಜೆಪಿ ನಾಲ್ವರು, ಶಿವಸೇನೆ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ)ಗಳ ತಲಾ ಇಬ್ಬರು ನಾಯಕರನ್ನು ವಿಜಯಿಗಳೆಂದು ಘೋಷಿಸಲಾಗಿದೆ.

ಬಿಜೆಪಿಯ ರಾಮ್ ಶಿಂಧೆ, ಉಮಾ ಖಪ್ರೆ, ಶ್ರೀಕಾಂತ್ ಭಾರ್ತಿಯಾ ಮತ್ತು ಪ್ರವೀಣ್ ದಾರೇಕರ್ ಗೆದ್ದಿದ್ದಾರೆ. ಹಾಗೆಯೇ ಎನ್‌ಸಿಪಿ ನಾಯಕರಾದ ಏಕನಾಥ್ ಖಾಡ್ಸೆ, ರಾಮರಾಜೇ ನಾಯ್ಕ್ ನಿಂಬಾಳ್ಕರ್, ಶಿವಸೇನಾ ಅಭ್ಯರ್ಥಿಗಳಾದ ಅಮ್ಶ್ಯ ಪದ್ವಿ ಮತ್ತು ಸಚಿನ್ ಅಹಿರ್ ಕೂಡ ವಿಜೇತರಾಗಿದ್ದಾರೆ.

ಇದಕ್ಕೂ ಮೊದಲು, ಎಂಎಲ್‌ಸಿ ಚುನಾವಣೆಯ ಚುನಾವಣಾಧಿಕಾರಿ ಎರಡು ಮತಗಳನ್ನು ಅಸಿಂಧುಗೊಳಿಸಿದ್ದರು. ಆಡಳಿತ ಮಿತ್ರಪಕ್ಷವಾದ ಎನ್‌ಸಿಪಿ ಮತ್ತು ಪ್ರತಿಪಕ್ಷ ಬಿಜೆಪಿಯ ತಲಾ ಒಂದು ಮತಗಳಾಗಿದ್ದವು. ಈ ಪಕ್ಷಗಳ ನಾಯಕರು ವಿರುದ್ಧಪಕ್ಷದ ಮತದ ಕುರಿತು ಆಕ್ಷೇಪಣೆ ಎತ್ತಿದ್ದರು. ಆಕ್ಷೇಪ ಮತ್ತು ಮತಗಳ ಅಮಾನ್ಯದಿಂದಾಗಿ ಸುಮಾರು ಅರ್ಧ ಗಂಟೆ ಎಣಿಕೆ ಪ್ರಕ್ರಿಯೆ ಸ್ಥಗಿತಗೊಂಡಿತು. ಸಂಜೆ 5 ಗಂಟೆಗೆ ಪ್ರಾರಂಭವಾಗಬೇಕಿದ್ದ ಮತ ಎಣಿಕೆ ಎರಡು ಗಂಟೆ ವಿಳಂಬವಾಯಿತು.

ಅನಾರೋಗ್ಯದಿಂದ ಬಳಲುತ್ತಿರುವ ವಿರೋಧ ಪಕ್ಷದ ಶಾಸಕರು ಸಹಾಯಕರ ಸಹಾಯದಿಂದ ಮತ ಚಲಾಯಿಸಿದ್ದರು. ಇದನ್ನು ಆಡಳಿತಾರೂಢ ಮಹಾ ವಿಕಾಸ್ ಅಘಾಡಿ (ಎಂವಿಎ) ಯ ಘಟಕವಾದ ಕಾಂಗ್ರೆಸ್ ಆಕ್ಷೇಪಿಸಿದೆ.

ಆದರೆ, ಭಾರತೀಯ ಚುನಾವಣಾ ಆಯೋಗ (ಇಸಿಐ) ಕಾಂಗ್ರೆಸ್ ಆಕ್ಷೇಪವನ್ನು ತಿರಸ್ಕರಿಸಿತು. ನಂತರ, ಎನ್‌ಸಿಪಿ ಅಭ್ಯರ್ಥಿ ರಾಮರಾಜೇ ನಿಂಬಾಳ್ಕರ್‌ಗೆ ಮೊದಲ ಪ್ರಾಶಸ್ತ್ಯದ ಮತ ನೀಡಿದ ಮತಪತ್ರಕ್ಕೆ ಬಿಜೆಪಿ ಮುಖಂಡರೊಬ್ಬರು ಆಕ್ಷೇಪ ಎತ್ತಿದರು. ಅದೇ ರೀತಿ, ಬಿಜೆಪಿ ಅಭ್ಯರ್ಥಿ ಉಮಾ ಖಾಪ್ರೆ ಅವರಿಗೆ ಮೊದಲ ಪ್ರಾಶಸ್ತ್ಯದ ಮತವನ್ನು ಹೊಂದಿರುವ ಮತಪತ್ರದ ವಿರುದ್ಧ ಎನ್‌ಸಿಪಿಯಿಂದ ಆಕ್ಷೇಪಣೆ ಬಂತು. ಚುನಾವಣಾಧಿಕಾರಿ ಆಕ್ಷೇಪಣೆಗಳನ್ನು ಪರಿಶೀಲಿಸಿ ಎರಡೂ ಮತಪತ್ರಗಳನ್ನು ಅಮಾನ್ಯವೆಂದು ಘೋಷಿಸಿದರು.

ಇದರೊಂದಿಗೆ, ಒಟ್ಟು ಮಾನ್ಯ ಮತಗಳ ಸಂಖ್ಯೆ 283ಕ್ಕೆ ಇಳಿಯಿತು. ವಿಧಾನಸಭೆಯ ವಾಸ್ತವಿಕ ಬಲ 288, ಅದರಲ್ಲಿ ಒಂದು ಸ್ಥಾನ ಖಾಲಿಯಿದೆ. 285 ಶಾಸಕರು ಮತದಾನದಲ್ಲಿ ಭಾಗವಹಿಸಲು ಅರ್ಹರಾಗಿದ್ದರು. ಆದರೆ ಜೈಲು ಶಿಕ್ಷೆಗೊಳಗಾದ ಇಬ್ಬರು ಸದಸ್ಯರು ಮತದಾನದಲ್ಲಿ ಭಾಗವಹಿಸದಂತೆ ನಿರ್ಬಂಧಿಸಲಾಗಿದೆ. ಒಟ್ಟಾರೆ 11 ಅಭ್ಯರ್ಥಿಗಳು ಕಣದಲ್ಲಿದ್ದರು. ಬಿಜೆಪಿಯ ಐದು ಮತ್ತು ಎಂವಿಪಿಯ ಘಟಕ ಪಕ್ಷಗಳಾದ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ನ ತಲಾ ಇಬ್ಬರು.

ಇದನ್ನೂ ಓದಿ: ರಾಜ್ಯಸಭೆ ಚುನಾವಣೆ: ಮಹಾರಾಷ್ಟ್ರದಲ್ಲಿ ಬಿಜೆಪಿಯ ಎಲ್ಲ ಮೂರು ಅಭ್ಯರ್ಥಿಗಳ ಜಯಭೇರಿ, ಎಂವಿಎಗೆ 3 ಸೀಟು

Exit mobile version