ಮುಂಬಯಿ: ಶಿವಸೇನಾದಲ್ಲಿ ಉಂಟಾಗಿರುವ ಶಾಸಕರ ಬಂಡಾಯವನ್ನು ಆ ಪಕ್ಷದ ಆಂತರಿಕ ವಿಚಾರ ಎಂದು ಬಿಜೆಪಿ ಹೇಳಿದ್ದರೂ, ಮೂಲಗಳ ಪ್ರಕಾರ ಬಿಜೆಪಿ ಏಕನಾಥ್ ಶಿಂಧೆ ಅವರಿಗೆ ನೂತನ ಸರ್ಕಾರ ರಚನೆ ನಿಟ್ಟಿನಲ್ಲಿ ಉಪಮುಖ್ಯಮಂತ್ರಿ ಹುದ್ದೆಯ ಆಫರ್ ಅನ್ನು ಕೊಟ್ಟಿದೆ. ಈ ಹಿಂದೆ 2019ರಲ್ಲಿ ನ್ಯಾಶನಲ್ ಕಾಂಗ್ರೆಸ್ ಪಾರ್ಟಿಯಿಂದ ( ಎನ್‌ಸಿಪಿ) ಅಜಿತ್ ಪವಾರ್ ಬಂಡಾಯ ಎದ್ದಾಗಲೂ ಬಿಜೆಪಿ ಅವರಿಗೆ ಡಿಸಿಎಂ ಹುದ್ದೆಯ ಆಫರ್ ಕೊಟ್ಟಿತ್ತು.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಒಟ್ಟು ಸೀಟುಗಳ ಸಂಖ್ಯೆ ೨೮೮ ಆಗಿದ್ದು, ಬಿಜೆಪಿಗೆ ಎಂವಿಎ ಸರ್ಕಾರವನ್ನು ಉರುಳಿಸಲು ೩೮ ಶಾಸಕರ ಬೆಂಬಲ ಅಗತ್ಯ. ಅಜಿತ್ ಪವಾರ್‌ಗೆ ಡಿಸಿಎಂ ಹುದ್ದೆ, ಅವರ ೯ ಬೆಂಬಲಿಗರಿಗೆ ಸಚಿವ ಪದವಿಯ ಆಮಿಷ ಒಡ್ಡಲಾಗಿತ್ತು. ಆದರೆ ಅವಸರದಲ್ಲಿ ಕೈಗೊಂಡ ಡೀಲ್ ೮೦ ಗಂಟೆಯೂ ಉಳಿಯಲಿಲ್ಲ. ಬಳಿಕ ಮಹಾರಾಷ್ಟ್ರ ವಿಕಾಸ ಅಘಾಡಿ ಸರ್ಕಾರ ರಚನೆಯಾಗಿತ್ತು.
ಶಿಂಧೆ ಅವರ ಬಂಡಾಯವನ್ನೂ ಅಜಿತ್ ಪವಾರ್ ಬಂಡಾಯಕ್ಕೆ ಹೋಲಿಸಲಾಗುತ್ತಿದೆ. ಶಿಂಧೆ ಬಣಕ್ಕೆ ೧೨ ಸಚಿವ ಸ್ಥಾನಗಳನ್ನು ಆಫರ್ ಮಾಡಿರುವ ಸಾಧ್ಯತೆ ಇದೆ. ಫಡ್ನವೀಸ್ ಸಿಎಂ ಆಗಿದ್ದಾಗ ಮಿತ್ರ ಪಕ್ಷ ಶಿವಸೇನಾಕ್ಕೆ ೧೨ ಸಚಿವ ಸ್ಥಾನಗಳನ್ನು ನೀಡಲಾಗಿತ್ತು.
ಒಂದು ವೇಳೆ ಬಿಜೆಪಿ ಮತ್ತು ಶಿಂಧೆ ಬಣದ ಸರ್ಕಾರ ಅಸ್ತಿತ್ವಕ್ಕೆ ಬಂದರೆ, ಶಿಂಧೆ ಬಣಕ್ಕೆ ಲೋಕೋಪಯೋಗಿ, ನಗರಾಭಿವೃದ್ಧಿ ಖಾತೆಗಳನ್ನು ನೀಡುವ ಸಾಧ್ಯತೆ ಇದೆ. ಈ ಎರಡೂ ಖಾತೆಗಳನ್ನು ಶಿಂಧೆ ನಿಭಾಯಿಸುತ್ತಿದ್ದರು.
ಫಡ್ನವೀಸ್ ಅವರ ಕಚೇರಿಗೆ ಅವರ ಬೆಂಬಲಿಗರ ಪಡೆ ಧಾವಿಸುತ್ತಿದ್ದು, ಅಧಿಕಾರದ ಗದ್ದುಗೆ ಏರುವ ಕನಸು ಕಾಣುತ್ತಿದ್ದಾರೆ. ಹೀಗಿದ್ದರೂ, ಮಹಾರಾಷ್ಟ್ರ ಬಿಜೆಪಿ ಉಪಾಧ್ಯಕ್ಷ ಮಾಧವ್ ಭಂಡಾರಿ ಎಚ್ಚರಿಕೆಯ ಮಾತುಗಳನ್ನಾಡಿದ್ದು, ಪ್ರಸಕ್ತ ಪರಿಸ್ಥಿತಿ ಬಗ್ಗೆ ಮಾತನಾಡಲಾರೆ. ಯಾವುದಕ್ಕೂ ಫಡ್ನವೀಸ್ ಅವರು ಕೇಂದ್ರ ನಾಯಕತ್ವದ ಮಾರ್ಗದರ್ಶನದಲ್ಲಿ ಪಕ್ಷವನ್ನು ರಾಜ್ಯದಲ್ಲಿ ಮುನ್ನಡೆಸಲಿದ್ದಾರೆ ಎಂದು ಹೇಳಿದ್ದಾರೆ.