Site icon Vistara News

Maha politics: ರಾಷ್ಟ್ರಪತಿ ಚುನಾವಣೆಯಲ್ಲಿ ಮುರ್ಮು ಬೆಂಬಲಿಸಲು 16 ಶಿವಸೇನಾ ಸಂಸದರ ಒಲವು

droupadi murmu

ಮುಂಬಯಿ: ಜುಲೈ ೧೮ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿರುವ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಬೇಕು ಎಂದು ಶಿವಸೇನೆಯ ಬಹುತೇಕ ಎಲ್ಲ ಸಂಸತ್‌ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ. ರಾಷ್ಟ್ರಪತಿ ಚುನಾವಣೆಯಲ್ಲಿ ಯಾರನ್ನು ಬೆಂಬಲಿಸುವುದು ಎನ್ನುವ ಬಗ್ಗೆ ಸಮಾಲೋಚನೆ ನಡೆಸಲು ಶಿವಸೇನೆಯ ಸಂಸದರ ಸಭೆಯನ್ನು ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ತಮ್ಮ ಮಾತೋಶ್ರೀ ನಿವಾಸದಲ್ಲಿ ಕರೆದಿದ್ದರು. ಈ ಸಭೆಯಲ್ಲಿ ೧೮ ಸಂಸದರ ಪೈಕಿ ೧೩ ಮಂದಿ ಭಾಗವಹಿಸಿದ್ದರು. ಮೂವರು ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿರುವುದಾಗಿ ಹೇಳಿಕೆ ನೀಡಿದ್ದಾರೆ. ಬಂಡಾಯ ನಾಯಕ, ಸಿಎಂ ಏಕನಾಥ್‌ ಶಿಂಧೆ ಅವರ ಪುತ್ರ ಶ್ರೀಕಾಂತ್‌ ಶಿಂಧೆ ಮತ್ತು ಭವಾನಿ ಗಾವ್ಳಿ ಅವರು ಭಾಗವಹಿಸಿರಲಿಲ್ಲ.

ಮಾಧ್ಯಮದೊಂದಿಗೆ ಮಾತನಾಡಿದ ಸೇನೆಯ ಸಂಸದ ಗಜಾನನ ಕೀರ್ತಿಕರ್‌ ಅವರು ಶಿವಸೇನೆಯ ೧೬ ಸಂಸದರು ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಬುಡಕಟ್ಟು ಸಮುದಾಯಕ್ಕೆ ಸೇರಿದ ಮಹಿಳೆಯಾಗಿರುವುದರಿಂದ ಬೆಂಬಲ ನೀಡುವುದು ಸೂಕ್ತ ಎಂಬ ಅಭಿಪ್ರಾಯ ಬಂತು ಎಂದು ಹೇಳಿದರು.

ದ್ರೌಪದಿ ಮುರ್ಮು ಅವರು ಎನ್‌ಡಿಎ ಅಭ್ಯರ್ಥಿ. ಆದರೆ, ಅವರು ಬುಡಕಟ್ಟು ಸಮುದಾಯಕ್ಕೆ ಸೇರಿದವರು. ಮತ್ತು ಒಬ್ಬ ಮಹಿಳೆ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಬೆಂಬಲ ನೀಡಬೇಕು. ಇದು ನಮ್ಮ ಪಕ್ಷದ ಸಂಸದರ ನಿಲವು. ಇದನ್ನು ಉದ್ಧವ್‌ ಜೀ ಅವರಿಗೆ ತಿಳಿಸಿದ್ದೇವೆ. ಅವರು ಒಂದೆರಡು ದಿನಗಳಲ್ಲಿ ತೀರ್ಮಾನ ಪ್ರಕಟಿಸುವುದಾಗಿ ಹೇಳಿದ್ದಾರೆ ಎಂದು ಕೀರ್ತಿಕರ್‌ ಹೇಳಿದರು.

ಹಿಂದಿನ ಚುನಾವಣೆಗಳಲ್ಲಿ ನಾವು ಪ್ರತಿಭಾ ಪಾಟೀಲ್‌ ಅವರು ಯುಪಿಎ ಅಭ್ಯರ್ಥಿಯಾಗಿದ್ದರೂ ಅವರೊಬ್ಬರು ಮಹಿಳೆ ಮತ್ತು ಮರಾಠರು ಎಂಬ ಕಾರಣಕ್ಕೆ ಬೆಂಬಲ ನೀಡಿದ್ದೆವು. ಪ್ರಣಬ್‌ ಮುಖರ್ಜಿ ಅವರಿಗೂ ಬೆಂಬಲ ಕೊಟ್ಟಿದ್ದೆವು. ಹೀಗಾಗಿ ಈ ಬಾರಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸುವುದು ಸೂಕ್ತವಾಗಿದೆ. ಈ ಬಗ್ಗೆ ಉದ್ಧವ್‌ ಠಾಕ್ರೆ ಅವರು ಘೋಷಣೆ ಮಾಡಲಿದ್ದಾರೆ. ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿ ನಾವು ರಾಜಕೀಯವನ್ನು ಮೀರಿ ಯೋಚನೆ ಮಾಡಬೇಕು ಎಂದಿದ್ದಾರೆ ಕೀರ್ತಿಕರ್‌.

ರಾಷ್ಟ್ರಪತಿ ಚುನಾವಣೆಯಲ್ಲಿ ವಿಪ್‌ ಇರುವುದಿಲ್ಲ. ಹೀಗಾಗಿ ಸಂಸದರು ತಾವು ಬಯಸಿದ ಅಭ್ಯರ್ಥಿಗೆ ಮತ ನೀಡಬಹುದಾಗಿದೆ. ಆದರೆ, ಪಕ್ಷಗಳು ಸಹಮತದಿಂದ ನಿರ್ಧಾರ ಮಾಡಿ ಮತ ಚಲಾಯಿಸುತ್ತವೆ. ಅದರಲ್ಲೂ ಶಿವಸೇನೆಗೆ ಈಗ ಯಾರ ಒಲವು ಯಾರ ಕಡೆಗೆ ಎಂದು ತೀರ್ಮಾನಿಸುವ ಪರ್ವಕಾಲವೂ ಆಗಿರುವುದರಿಂದ ಶಿವಸೇನೆಯ ಸಂಸದರ ನಿಲುವು ಮಹತ್ವದ್ದಾಗಿದೆ.

೧೮ ಸಂಸದರ ಪೈಕಿ ೧೩ ಸಂಸದರು ಮಾತೋಶ್ರೀ ನಿವಾಸಕ್ಕೆ ಆಗಮಿಸಿರುವುದು ಮತ್ತು ಮೂವರು ಸಹಮತ ವ್ಯಕ್ತಪಡಿಸಿರುವುದು ಉದ್ಧವ್‌ ಠಾಕ್ರೆ ಅವರಿಗೆ ನೆಮ್ಮದಿ ನೀಡಬಹುದಾದ ಅಂಶವಾಗಿದೆ. ಹೀಗಾಗಿ ಸಭೆಯಲ್ಲಿ ಸಂಸದರ ನಿಲುವನ್ನೇ ಪುರಸ್ಕರಿಸುವ ಸಾದ್ಯತೆಗಳು ದಟ್ಟವಾಗಿವೆ.

ಇದನ್ನೂ ಓದಿ| Maha politics: ಶಿಂಧೆ ಸರಕಾರಕ್ಕೆ ಬಿಗ್‌ ರಿಲೀಫ್‌, 16 ಶಾಸಕರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳದಂತೆ ಸುಪ್ರೀಂ ಸೂಚನೆ
ಇದನ್ನೂ ಓದಿ| Maha politics: ಕಷ್ಟಕಾಲದಲ್ಲಿ ಜತೆಗೆ ನಿಂತ ನಿಮಗೆ ಥ್ಯಾಂಕ್ಸ್‌, 15 ಸೇನಾ ಶಾಸಕರಿಗೆ ಉದ್ಧವ್‌ ಠಾಕ್ರೆ ಪತ್ರ

Exit mobile version