ಮುಂಬಯಿ: ಮಹಾರಾಷ್ಟ್ರದ ಶಿವಸೇನೆಯಲ್ಲಿ ನಡೆಯುತ್ತಿರುವ ಬಂಡಾಯ ಚಟುವಟಿಕೆಗೆ ತೆರೆ ಎಳೆಯುವ ಮತ್ತು ಸೇನೆಯಲ್ಲಿ ಉದ್ಧವ್ ಠಾಕ್ರೆ ಅವರ ಕೊನೆಯ ಹಿಡಿತವನ್ನೂ ತೆಗೆದುಹಾಕುವ ಪ್ರಯತ್ನವೊಂದು ನಡೆದಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು, ಶಿವಸೇನೆಯ ಮೇಲೆ ಪೂರ್ಣ ಹಕ್ಕನ್ನು ಸಾಧಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
ʻʻಶಿವಸೇನೆಯ ಹೆಚ್ಚಿನ ಎಲ್ಲ ನಾಯಕರು ನಮ್ಮ ಬಣದಲ್ಲಿದ್ದಾರೆ. ಉದ್ಧವ್ ಠಾಕ್ರೆ ಅವರು ನೇಮಿಸಿದ ಕಾರ್ಯಕಾರಿ ಸಮಿತಿಯನ್ನು ವಿಸರ್ಜಿಸಲಾಗಿದೆ. ಹೀಗಾಗಿ ತಮ್ಮ ಗುಂಪನ್ನೇ ಶಿವಸೇನೆ ಎಂದು ಪರಿಗಣಿಸಬೇಕುʼʼ ಎಂದು ಅವರು ಮನವಿ ಮಾಡಿದ್ದಾರೆ.
ಲೋಕಸಭೆಯಲ್ಲಿ ಮನ್ನಣೆ
ಶಿವಸೇನೆಯ ೧೮ ಸಂಸದರ ಪೈಕಿ ೧೨ ಮಂದಿ ಇದೀಗ ಶಿಂಧೆ ಬಣಕ್ಕೆ ತಮ್ಮ ನಿಷ್ಠೆಯನ್ನು ವ್ಯಕ್ತಪಡಿಸಿದ್ದು, ಲೋಕಸಭೆಯಲ್ಲಿ ಪ್ರತ್ಯೇಕ ಗುಂಪಾಗಿ ಗುರುತಿಸಿಕೊಳ್ಳಲು ನಿರ್ಧರಿಸಿದ್ದಾರೆ. ರಾಹುಲ್ ಶಿವಾಲೆ ಅವರನ್ನು ಕೆಳಮನೆಯ ಲ್ಲಿ ಪಕ್ಷದ ನಾಯಕರಾಗಿ ನೇಮಿಸಲಾಗಿದೆ. ಇದನ್ನು ಸ್ಪೀಕರ್ ಆಗಿರುವ ಓಂ ಬಿರ್ಲಾ ಅವರಿಗೆ ಮನವರಿಕೆ ಮಾಡಲಾಗಿದೆ. ಯಾವತ್ಮಲ್ ಸಂಸದೆಯಾಗಿರುವ ಭಾವನಾ ಗಾವಳಿ ಅವರು ಲೋಕಸಭೆಯಲ್ಲಿ ಈ ಗುಂಪಿನ ಮುಖ್ಯ ವಿಪ್ ಆಗಲಿದ್ದಾರೆ. ಸ್ಪೀಕರ್ ಓಂ ಬಿರ್ಲಾ ಅವರು ಈ ಎರಡೂ ಆಯ್ಕೆಗೆ ಸಮ್ಮತಿಯನ್ನು ಸೂಚಿಸಿದ್ದಾರೆ.
ಉದ್ಧವ್ ಠಾಕ್ರೆ ಬಣದ ವಿನಾಯಕ್ ರಾವತ್ ಅವರು ಇದುವರೆಗೆ ಲೋಕಸಭೆಯಲ್ಲಿ ಶಿವಸೇನೆಯ ನಾಯಕರಾಗಿದ್ದರು. ರಾಜನ್ ವಿಚಾರೆ ಮುಖ್ಯ ಸಚೇತಕರಾಗಿದ್ದರು. ೧೯ ಸಂಸದರಲ್ಲಿ ೧೨ ಮಂದಿ ಒಂದು ಗುಂಪಿನಲ್ಲಿ ಇರುವುದರಿಂದ ಮೂರನೇ ಎರಡು ಬಹುಮತದ ನೆಲೆಯಲ್ಲಿ ಸ್ಪೀಕರ್ ಮಾನ್ಯತೆ ನೀಡಿದ್ದಾರೆ. ಆದರೆ, ಚಿಹ್ನೆ ಯಾರಿಗೆ ಎನ್ನುವುದನ್ನು ಆಯೋಗ ನಿರ್ಧರಿಸಬೇಕಾಗಿದೆ.
ಉದ್ಧವ್ ಠಾಕ್ರೆ ಕೇವಿಯೆಟ್
ಈ ನಡುವೆ, ಶಿವಸೇನೆಯ ಆಧಿಪತ್ಯ, ಚಿಹ್ನೆ ಮತ್ತಿತರ ಯಾವುದೇ ಸಂಗತಿಗಳಿದ್ದರೂ ತಮ್ಮನ್ನು ಒಂದು ಮಾತು ಕೇಳಬೇಕು ಎಂದು ಉದ್ಧವ್ ಠಾಕ್ರೆ ಅವರು ಚುನಾವಣಾ ಆಯೋಗಕ್ಕೆ ಕೇವಿಯೆಟ್ ಸಲ್ಲಿಸಿದ್ದಾರೆ. ತಮ್ಮನ್ನು ಕೇಳದೆ ಯಾವುದೇ ಆದೇಶ ಹೊರಡಿಸಬಾರದು ಎಂದು ಮನವಿ ಮಾಡಿದ್ದಾರೆ.
ಶಿಂಧೆ ಬಣವೇ ಪ್ರಬಲ
ಜೂನ್ ೨೦ರಂದು ಬಂಡಾಯವೆದ್ದ ಏಕನಾಥ್ ಶಿಂಧೆ ಬಣ ಎಲ್ಲ ಹಂತಗಳಲ್ಲಿ ಮೇಲುಗೈಯನ್ನು ಸಾಧಿಸುತ್ತಲೇ ಸಾಗಿದೆ. ಶಿವಸೇನೆಯ ೫೬ ಶಾಸಕರಲ್ಲಿ ೪೧ ಮಂದಿ ಏಕನಾಥ ಶಿಂಧೆ ಬಣವನ್ನು ಸೇರಿದ್ದು, ಈಗ ಬಿಜೆಪಿ ಜತೆ ಸೇರಿ ಸರಕಾರ ರಚಿಸಿದೆ. ಉಳಿದ ೧೫ ಶಾಸಕರ ವಿರುದ್ಧ ಆದಿತ್ಯ ಠಾಕ್ರೆ ಒಬ್ಬರನ್ನು ಹೊರತುಪಡಿಸಿ ಉಳಿದ ಎಲ್ಲರೂ ಶಿಂಧೆ ಜತೆ ಸೇರಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ಇತ್ತ ಸಂಸದರ ಪೈಕಿ ಮಹಾರಾಷ್ಟ್ರದ ೧೮ರಲ್ಲಿ ೧೨ ಮಂದಿ ಶಿಂಧೆ ಅವರ ಜತೆಗಿದ್ದಾರೆ. ಇದನ್ನು ಆಧರಿಸಿ ಒಂದು ವೇಳೆ ಚಿಹ್ನೆಗಾಗಿ ಕಾದಾಟ ನಡೆದರೆ ಏಕನಾಥ್ ಬಣವೇ ಗೆಲ್ಲುವುದು ಬಹುತೇಕ ಖಚಿತ. ಈ ನಡುವೆ, ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ಅಗಿರುವ ರಾಹುಲ್ ನಾರ್ವೇಕರ್ ಅವರು ಶಿಂಧೆ ಬಣಕ್ಕೆ ಅಧಿಕೃತ ಮಾನ್ಯತೆಯನ್ನು ನೀಡಿದ್ದಾರೆ.
ಇದನ್ನೂ ಓದಿ| Maha politics: ಶಿಂಧೆ ಬೆಂಬಲಿಗ 12 ಶಿವಸೇನಾ ಸಂಸದರಿಗೆ ವೈ ಭದ್ರತೆ, ಇನ್ನೂ 14 ಶಾಸಕರೂ ಉದ್ಧವ್ ಟೀಮಿಗೆ ಕೈ!