ಮುಂಬೈ: ಮಹಾರಾಷ್ಟ್ರ ವಿಕಾಸ ಅಘಾಡಿ ಸರಕಾರದಲ್ಲಿ ಸಚಿವರಾಗಿದ್ದ ಏಕನಾಥ್ ಶಿಂಧೆ ಬಂಡಾಯವೆದ್ದು ಮಹಾರಾಷ್ಟ್ರದಲ್ಲಿ ರಾಜಕೀಯ ಬಿರುಗಾಳಿ (Maha politics) ಸೃಷ್ಟಿಸಿದ್ದಲ್ಲದೆ ಇದೀಗ ಅವರು ಮುಖ್ಯಮಂತ್ರಿ ಹುದ್ದೆಗೇರುವುದೂ ಖಚಿತಪಟ್ಟಿದೆ. ಶಿವಸೇನೆ ಬಂಡಾಯ ಪಡೆ ಮತ್ತು ಬಿಜೆಪಿ ಮೈತ್ರಿ ಸರಕಾರದಲ್ಲಿ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗುತ್ತಾರೆ ಎಂದೇ ಭಾವಿಸಲಾಗಿತ್ತಾದರೂ ಅಚ್ಚರಿಯ ಬೆಳವಣಿಗೆಯಲ್ಲಿ ಶಿಂಧೆಯೇ ಮುಖ್ಯಮಂತ್ರಿಯಾಗುತ್ತಾರೆ ಎಂದು ಫಡ್ನವೀಸ್ ಘೋಷಿಸಿದ್ದಾರೆ.
ಹಾಗಿದ್ದರೆ ಈ ಏಕನಾಥ ಶಿಂಧೆ ಯಾರು?
ಶಿಂಧೆ ಎಂವಿಎ ಸರಕಾರದಲ್ಲಿ ನಗರ ವ್ಯವಹಾರಗಳ ಸಚಿವರಾಗಿದ್ದರು. ಇವರು ಶಿವಸೇನೆಯ ಪ್ರಭಾವಿ ನಾಯಕ. ಮುಂಬಯಿಯ ಪಕ್ಕದಲ್ಲಿರುವ ಥಾಣೆ ವಿಧಾನಸಭೆ ಕ್ಷೇತ್ರದಿಂದ ಆರಿಸಿ ಬಂದಿರುವ ಶಾಸಕ. ಮುಂಬಯಿಯಲ್ಲೂ ಪಕ್ಷವನ್ನು ಬಲಪಡಿಸಿದವರಲ್ಲಿ ಇವರೂ ಒಬ್ಬರು.
ಶಿಂಧೆ ಮಹಾರಾಷ್ಟ್ರ ವಿಧಾನಸಭೆಗೆ ನಾಲ್ಕು ಅವಧಿಗೆ ಸತತವಾಗಿ ಚುನಾಯಿತರಾಗಿದ್ದಾರೆ- 2004, 2009, 2014 ಮತ್ತು 2019ರಲ್ಲಿ. 2014ರ ಗೆಲುವಿನ ನಂತರ ಅವರು ಶಿವಸೇನೆಯ ಶಾಸಕಾಂಗ ಪಕ್ಷದ ನಾಯಕರಾಗಿ ಮತ್ತು ತರುವಾಯ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದರು. ಹಲವು ಸಮಯದಿಂದ ಪಕ್ಷದಲ್ಲಿ ಇನ್ನಷ್ಟು ಮಹತ್ವದ ಸ್ಥಾನಗಳಿಗೆ ಅವರು ಆಕಾಂಕ್ಷಿಯಾಗಿದ್ದು, ಅದು ದೊರೆಯದೆ ಹೋಗಿರುವುದರಿಂದ ಅಸಮಾಧಾನ ಹೊಂದಿದ್ದರು ಎಂದು ಹೇಳಲಾಗಿದೆ.
ಇದನ್ನೂ ಓದಿ: ಮಹಾರಾಷ್ಟ್ರ ಮಹಾ ಅʼಗಾಡಿʼ ಸರ್ಕಾರ ಪಂಕ್ಚರ್?; ಶುರುವಾದಂತಿದೆ ಆಪರೇಶನ್ ಕಮಲ!
ಏಕನಾಥ್ ಅವರ ಪುತ್ರ ಶ್ರೀಕಾಂತ್ ಶಿಂಧೆ ಕಲ್ಯಾಣ್ ಕ್ಷೇತ್ರದಿಂದ ಲೋಕಸಭಾ ಸಂಸದರು. ಅವರ ಸಹೋದರ ಪ್ರಕಾಶ್ ಶಿಂಧೆ ಕೌನ್ಸಿಲರ್ ಆಗಿದ್ದಾರೆ.
ಶಿಂಧೆ ಅವರ ಜೀವನದಲ್ಲಿ ದುರಂತದ ಕಥೆಯಿದೆ. ಅವರು ಹಿಂದೆ ಥಾಣೆಯಲ್ಲಿ ಆಟೋ ಚಾಲಕರಾಗಿದ್ದರು. ನಂತರ ಶಿವಸೇನೆಯಿಂದ ಕಾರ್ಪೊರೇಟರ್ ಆದರು. ಆಗ ತಮ್ಮ ಇಬ್ಬರು ಮಕ್ಕಳನ್ನು ಅವರು ದುರಂತದಲ್ಲಿ ಕಳೆದುಕೊಂಡಿದ್ದರು. ಸತಾರಾದಲ್ಲಿ ಅವರ ಕಣ್ಣ ಮುಂದೆಯೇ ಅವರ ಇಬ್ಬರು ಮಕ್ಕಳು ನೀರಿನಲ್ಲಿ ಮುಳುಗಿ ಸತ್ತಿದ್ದರು. ಆ ಸಂದರ್ಭದಲ್ಲಿ ರಾಜಕೀಯದಿಂದ ನಿವೃತ್ತರಾಗುವ ಚಿಂತನೆ ಅವರಲ್ಲಿತ್ತು. ಆದರೆ ಅವರ ರಾಜಕೀಯ ಗುರು ಆನಂದ ದಿಘೆ ಅವರು ಶಿಂಧೆಯವರನ್ನು ಮತ್ತೆ ಪಾಲಿಟಿಕ್ಸ್‌ಗೆ ಸೆಳೆದಿದ್ದರು. ನಂತರ ಅವರು ಥಾಣೆ ನಗರಸಭೆಗೆ ಅಧ್ಯಕ್ಷರಾದರು. ಈ ಸಂದರ್ಭದಲ್ಲಿ ರಾಜ್ ಠಾಕ್ರೆ ಅವರ ಬಂಡಾಯದ ಬಳಿಕ, ಪಕ್ಷದ ರ‍್ಯಾಲಿಗಳಿಗೆ ದೊಡ್ಡ ಸಂಖ್ಯೆಯಲ್ಲಿ ಜನರನ್ನು ಸೆಳೆಯತೊಡಗಿದರು. ಇದು ಅವರನ್ನು ಮಹತ್ವದ ಸ್ಥಾನಗಳತ್ತ ಒಯ್ದಿತ್ತು. ಇದೀಗ ಹಿಂದುತ್ವದ ಹೆಸರಲ್ಲಿ ಬಂಡಾಯವೆದ್ದು ಅಘಾಡಿ ಸರಕಾರದ ಪತನಕ್ಕೆ ಕಾರಣವಾಗಿದ್ದಲ್ಲದೆ, ಮುಖ್ಯಮಂತ್ರಿ ಗಾದಿಯನ್ನೂ ಒಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರದ ಮೈತ್ರಿ ಸರಕಾರ: ಉರುಳುವುದೇ? ಉಳಿಯುವುದೇ?