ಮುಂಬಯಿ: ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ನೇತೃತ್ವದಲ್ಲಿ ಹೊಸ ಸರಕಾರ ರಚನೆಯಾದ ಬಳಿಕ ಇದೀಗ ಬಹುಮತ ಸಾಬೀತಿಗೆ ಮೊದಲೇ ಸ್ಪೀಕರ್ ಆಯ್ಕೆಯ ಕದನಕ್ಕೆ ಸದನ ಅಣಿಯಾಗಬೇಕಾಗಿದೆ. ಶನಿವಾರ ಮಹಾರಾಷ್ಟ್ರ ವಿಧಾನಸಭೆಯ ಅಧಿವೇಶನ ಆರಂಭಗೊಂಡಿದ್ದು, ಮೊದಲ ದಿನ ಸ್ಪೀಕರ್ ಹುದ್ದೆಗಾಗಿ ನಾಮಪತ್ರ ಸಲ್ಲಿಕೆ ನಡೆಯುತ್ತಿದೆ. ಭಾನುವಾರ ಸ್ಪೀಕರ್ ಆಯ್ಕೆಗೆ ಮತದಾನ ನಡೆಯಲಿದೆ. ಸೋಮವಾರ ಏಕನಾಥ್ ಶಿಂಧೆ ಅವರು ಸದನದಲ್ಲಿ ಮತ ಯಾಚನೆ ಮಾಡಲಿದ್ದಾರೆ.
ಸ್ಪೀಕರ್ ಹುದ್ದೆಗೆ ಬಿಜೆಪಿ ಕೊಲಾಬಾ ಶಾಸಕ ರಾಹುಲ್ ನಾರ್ವೇಕರ್ ಅವರು ಶಿವಸೇನೆ ಬಂಡಾಯ ಬಣ ಮತ್ತು ಬಿಜೆಪಿ ಮಿತ್ರ ಕೂಟದ ಅಭ್ಯರ್ಥಿಯಾಗಲಿದ್ದಾರೆ. ವಿಶೇಷವೆಂದರೆ ಮಹಾ ವಿಕಾಸ ಅಘಾಡಿ ಮಿತ್ರ ಕೂಟದ ಕಡೆಯಿಂದ ಶಿವಸೇನೆಯ ಅಭ್ಯರ್ಥಿಯೇ ಕಣಕ್ಕೆ ಇಳಿಯಲಿರುವುದು! ಶಾಸಕ ರಾಜನ್ ಸಾಳ್ವಿ ಅವರು ಎಂವಿಎ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ.
ಸೇನೆ, ಎನ್‌ಸಿಪಿಯಲ್ಲಿದ್ದ ನಾರ್ವೇಕರ್!
ಶಿವಸೇನೆಯ ಬಂಡಾಯ ಬಣದ ನಾಯಕ ಏಕನಾಥ್ ಶಿಂಧೆ ಅವರಿಗೇ ಮುಖ್ಯಮಂತ್ರಿ ಹುದ್ದೆ ನೀಡುವ ಮೂಲಕ ಮಾಸ್ಟರ್ ಸ್ಟ್ರೋಕ್ ನೀಡಿದ್ದ ಬಿಜೆಪಿ ಸ್ಪೀಕರ್ ಚುನಾವಣೆಯಲ್ಲಿ ಹೊಸ ಕರಾಮತ್ತು ತೋರಿಸಿದೆ! ಅದು ಟಿಕೆಟ್ ಕೊಟ್ಟಿರುವ ಕೊಲಾಬಾ ಶಾಸಕ ರಾಹುಲ್ ನಾರ್ವೇಕರ್ ಈ ಹಿಂದೆ ಶಿವಸೇನೆ ಮತ್ತು ಎನ್‌ಸಿಪಿಯಲ್ಲಿದ್ದು ಮೂರು ವರ್ಷದ ಹಿಂದಷ್ಟೇ ಬಿಜೆಪಿ ಸೇರಿದ್ದರು.
೪೫ ವರ್ಷದ ರಾಹುಲ್ ನರ್ವೇಕರ್ ೧೯೯೯ರಿಂದ ೨೦೧೪ರವರೆಗೆ ೧೫ ವರ್ಷ ಕಾಲ ಶಿವಸೇನೆಯಲ್ಲಿದ್ದರು. ೨೦೧೪ರಲ್ಲಿ ಅವರು ವಿಧಾನ ಪರಿಷತ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಅವರಿಗೆ ಟಿಕೆಟ್ ಕೊಟ್ಟಿರಲಿಲ್ಲ. ಇದರಿಂದ ಬೇಸರಗೊಂಡು ಎನ್‌ಸಿಪಿ ಸೇರಿದ್ದರು. ೨೦೧೯ರಲ್ಲಿ ಎನ್‌ಸಿಪಿ ಟಿಕೆಟ್‌ನಲ್ಲಿ ಮಾವಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಸೋಲು ಕಂಡಿದ್ದರು. ಬಳಿಕ ಅವರು ರಾಜ್ಯ ವಿಧಾನಸಭೆ ಚುನಾವಣೆಗೆ ಮುನ್ನ ಬಿಜೆಪಿ ಸೇರಿದ್ದರು. ಕೊಲಾಬಾದಿಂದ ಗೆದ್ದು ಶಾಸಕರಾದರು.
ಶಿವಸೇನೆಯ ನಾಯಕನದೇ ಸವಾಲು!
ನಾರ್ವೇಕರ್ ಅವರಿಗೆ ಸ್ಪರ್ಧೆ ನೀಡಲಿರುವ ರಾಜನ್ ಸಾಳ್ವಿ ಅವರು ರತ್ನಗಿರಿ ಜಿಲ್ಲೆಯ ರಾಜಪುರದ ಶಾಸಕರು. ಇವರು ಶಿವಸೇನೆಯ ಉದ್ಧವ್ ಠಾಕ್ರೆ ಬಣದಲ್ಲಿ ಉಳಿದಿರುವ ಕೆಲವೇ ಶಾಸಕರಲ್ಲಿ ಒಬ್ಬರು. ಶಿವಸೇನೆಯ ಎರಡು ಬಂಡಾಯ ಬಣಗಳ ಹೋರಾಟವನ್ನು ಜೀವಂತವಾಗಿಡುವ ಉದ್ದೇಶದಿಂದ ಉದ್ಧವ್ ಬಣದ ಶಾಸಕನನ್ನೇ ಸ್ಪರ್ಧೆಗೆ ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಮತ್ತು ಎನ್‌ಸಿಪಿಗಳು ಸಾಳ್ವಿ ಅವರಿಗೆ ಬೆಂಬಲ ಘೋಷಿಸಿವೆ ಮತ್ತು ಎರಡೂ ಪಕ್ಷಗಳ ಹಿರಿಯ ನಾಯಕರು ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದರು.
ಬಿಜೆಪಿ ಶಾಸಕನ ಗೆಲುವು ನಿಶ್ಚಿತ
ಸ್ಪೀಕರ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನರ್ವೇಕರ್ ಗೆಲ್ಲುವುದು ಬಹುತೇಕ ಖಚಿತವಾಗಿದೆ. ಯಾಕೆಂದರೆ, ಬಿಜೆಪಿ ತನ್ನ ಸ್ವಂತ ಬಲವಾದ ೧೦೬ ಶಾಸಕರು, ೧೭ ಪಕ್ಷೇತರರು ಮತ್ತು ೩೯ ಮಂದಿ ಶಿವಸೇನಾ ಬಂಡಾಯ ಶಾಸಕರ ಬಲವನ್ನು ಹೊಂದಿದೆ.
ಮೂರು ವರ್ಷ ಸ್ಪೀಕರೇ ಇರಲಿಲ್ಲ!
ನಿಜವೆಂದರೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಕಳೆದ ಮೂರು ವರ್ಷಗಳಿಂದ ಸ್ಪೀಕರೇ ಇರಲಿಲ್ಲ. ಮಹಾ ವಿಕಾಸ ಅಘಾಡಿ ಸರಕಾರ ಸ್ಥಾಪನೆ ಬೆನ್ನಿಗೆ ಕಾಂಗ್ರೆಸ್‌ನ ನಾನಾ ಪಾಟೋಲೆ ಅವರನ್ನು ಸ್ಪೀಕರ್ ಆಗಿ ಆಯ್ಕೆ ಮಾಡಲಾಗಿತ್ತು. ಆದರೆ, ಸ್ವಲ್ಪ ಸಮಯದಲ್ಲೇ ಅವರನ್ನು ಕಾಂಗ್ರೆಸ್ ರಾಜ್ಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಅವರು ಸ್ಪೀಕರ್ ಹುದ್ದೆ ಬಿಟ್ಟು ರಾಜ್ಯಾಧ್ಯಕ್ಷರಾದ ಬಳಿಕ ಹೊಸ ಸ್ಪೀಕರ್ ಆಯ್ಕೆ ನಡೆಯಲೇ ಇಲ್ಲ. ಕಳೆದ ಮೂರು ವರ್ಷಗಳಿಂದ ಎಲ್ಲ ಶಿಷ್ಟಾಚಾರಗಳನ್ನು ಡೆಪ್ಯೂಟಿ ಸ್ಪೀಕರ್ ನರಹರಿ ಜೈರ್ವಾಲ್ ಅವರೇ ನೆರವೇರಿಸುತ್ತಿದ್ದಾರೆ.
ಇದನ್ನೂ ಓದಿ| Maha politics: ಜುಲೈ 4ರಂದು ಶಿಂಧೆ ವಿಶ್ವಾಸಮತ ಯಾಚನೆ, ತಡೆ ನೀಡುವಂತೆ ಸುಪ್ರೀಂ ಮೊರೆ ಹೊಕ್ಕ ಉದ್ಧವ್ ಟೀಮ್