Site icon Vistara News

Maha politics: ನಾಳೆ ಸಂಜೆ 5 ಗಂಟೆಗೆ ಅಧಿವೇಶನ ಫಿಕ್ಸ್‌, ವಿಶ್ವಾಸಮತ ಸಾಬೀತುಪಡಿಸಲು ಠಾಕ್ರೆಗೆ ಆದೇಶ

Maha vidhanaBhavab

ಮುಂಬಯಿ: ಮಹಾರಾಷ್ಟ್ರ ರಾಜಕಾರಣಕ್ಕೆ ಸಂಬಂಧಿಸಿದ ಮಹತ್ವದ ಬೆಳವಣಿಗೆಯಲ್ಲಿ, ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಮಹಾ ವಿಕಾಸ ಅಘಾಡಿ ಸರಕಾರಕ್ಕೆ ಬುಧವಾರ ಸೂಚಿಸಿದ್ದಾರೆ. ಗುರುವಾರ ಸಂಜೆ ಐದು ಗಂಟೆಗೆ ವಿಧಾನಸಭೆಯ ಅಧಿವೇಶನ ಕರೆಯಲಾಗಿದ್ದು, ಅಲ್ಲಿ ಸರಕಾರ ತನಗಿರುವ ಬಹುಮತವನ್ನು ಸಾಕ್ಷೀಕರಿಸಬೇಕು ಎಂದು ರಾಜ್ಯಪಾಲರಾಗಿರುವ ಭಗತ್‌ ಸಿಂಗ್‌ ಕೋಶ್ಯಾರಿ ಅವರು ಸಿಎಂ ಉದ್ಧವ್‌ ಠಾಕ್ರೆ ಅವರಿಗೆ ಸೂಚಿಸಿದ್ದಾರೆ.

ಈ ಬೆಳವಣಿಗೆ ಒಂಬತ್ತು ದಿನಗಳಿಂದ ನಡೆಯುತ್ತಿರುವ ಬಂಡಾಯ ರಾಜಕಾರಣಕ್ಕೆ ಹೊಸ ತಿರುವು ನೀಡುವ ಸಾಧ್ಯತೆ ಕಂಡುಬಂದಿದೆ. ಆದರೆ, ಇದೇ ವೇಳೆ ಉದ್ಧವ್‌ ಠಾಕ್ರೆ ಬಣ ಬಹುಮತ ಸಾಬೀತುಪಡಿಸಬೇಕೆಂಬ ಸೂಚನೆಯ ವಿರುದ್ಧ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದೆ.

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಅವರು ಮಂಗಳವಾರ ದೆಹಲಿಯಲ್ಲಿ ಪಕ್ಷದ ಹಿರಿಯ ನಾಯಕರಾದ ಅಮಿತ್‌ ಶಾ ಮತ್ತು ಜೆ.ಪಿ. ನಡ್ಡಾ ಅವರ ಜತೆಗೆ ಸಮಗ್ರವಾಗಿ ಚರ್ಚಿಸಿದ ಬಳಿಕ ರಾತ್ರಿ ಮುಂಬಯಿಗೆ ಆಗಮಿಸಿ ರಾಜ್ಯಪಾಲರನ್ನು ಭೇಟಿಯಾಗಿದ್ದರು. ಈ ವೇಳೆ ವಿಶ್ವಾಸಮತ ಸಾಬೀತುಪಡಿಸುವಂತೆ ಉದ್ಧವ್‌ ಠಾಕ್ರೆ ಅವರಿಗೆ ಸೂಚಿಸುವಂತೆ ಮನವಿ ಮಾಡಿದ್ದರು. ಪ್ರತಿಪಕ್ಷ ಬಿಜೆಪಿಯ ಪತ್ರವನ್ನು ಆಧಾರವಾಗಿಟ್ಟುಕೊಂಡು ಇದೀಗ ರಾಜ್ಯಪಾಲರು ಮಹಾವಿಕಾಸ ಅಘಾಡಿ ಸರಕಾರಕ್ಕೆ ವಿಶ್ವಾಸಮತ ಯಾಚಿಸಲು ಸೂಚನೆ ನೀಡಿದ್ದಾರೆ.

ನಾಳೆ ಸಂಜೆ ಅಧಿವೇಶನ
ವಿಶ್ವಾಸಮತ ಯಾಚನೆಗೆ ಪೂರಕವಾಗಿ ಡೆಪ್ಯೂಟಿ ಸ್ಪೀಕರ್‌ ನರಹರಿ ಜೈರ್ವಾಲ್‌ ಅವರು ವಿಧಾನಸಭೆಯ ವಿಶೇಷ ಅಧಿವೇಶನ ಕರೆದಿದ್ದಾರೆ. ಈ ಅಧಿವೇಶನದಲ್ಲಿ ಸಿಎಂ ಉದ್ಧವ್‌ ಠಾಕ್ರೆ ಅವರು ವಿಶ್ವಾಸ ಮತ ಕೋರಿ ಒಂದು ಸಾಲಿನ ನಿರ್ಣಯವನ್ನು ಮಂಡಿಸಬೇಕಾಗಿರುತ್ತದೆ. ಅದಕ್ಕಿಂತ ಮೊದಲು ಅವರು ಕಳೆದ ಒಂಬತ್ತು ದಿನಗಳಿಂದ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಮಂಡಿಸುವ ಸಾಧ್ಯತೆ ಇರುತ್ತದೆ.

ಉದ್ಧವ್‌ ಠಾಕ್ರೆ ಅವರು ವಿಶ್ವಾಸಮತ ಯಾಚಿಸಿ ಭಾವುಕ ಭಾಷಣ ಮಾಡಿ ರಾಜೀನಾಮೆ ಸಲ್ಲಿಸುತ್ತಾರಾ ಅಥವಾ ಬಲಾಬಲ ಪರೀಕ್ಷೆಗೆ ಒಡ್ಡಿಕೊಳ್ಳುತ್ತಾರಾ ಎಂಬ ಕುತೂಹಲವಿದೆ.

ಈ ನಡುವೆ, ಉದ್ಧವ ಠಾಕ್ರೆ ಬಣ ಅಧಿವೇಶನ ಕರೆದಿರುವ ರಾಜ್ಯಪಾಲರ ನಿರ್ಣಯವನ್ನೇ ಪ್ರಶ್ನಿಸಿ ಕೋರ್ಟ್‌ ಮೆಟ್ಟಿಲು ಹತ್ತಿದೆ. ಸುಪ್ರೀಂಕೋರ್ಟ್‌ ಯಾವ ತೀರ್ಮಾನವನ್ನು ಹೇಳಲಿದೆ ಎನ್ನುವುದು ಕೂಡಾ ತುಂಬಾ ಪ್ರಮುಖವಾಗಿದೆ.

ಶಿಂಧೆ ಟೀಮ್‌ ರೆಡಿ
ಈ ನಡುವೆ, ವಿಶ್ವಾಸಮತ ಯಾಚನೆಗೆ ವೇದಿಕೆ ಸಿದ್ಧವಾಗುತ್ತಿದ್ದಂತೆಯೇ ಗುವಾಹಟಿಯಲ್ಲಿರುವ ಶಿವಸೇನೆಯ ಏಕನಾಥ್‌ ಶಿಂಧೆ ಬಣದ ನಾಯಕರು ಗುರುವಾರ ಸಂಜೆ ಐದು ಗಂಟೆಗೆ ಸರಿಯಾಗಿ ವಿಧಾನಸಭೆಗೆ ಆಗಮಿಸಲು ಪ್ಲ್ಯಾನ್‌ ಮಾಡಿಕೊಂಡಿದ್ದಾರೆ. ಶಿಂಧೆ ಬಣದ ೧೦ ಶಾಸಕರ ಒಂದು ಗುಂಪು ಬುಧವಾರವೇ ಮುಂಬಯಿಗೆ ಬರುತ್ತಿದ್ದರೆ, ೪೦ ಜನರು ಗುವಾಹಟಿಯಿಂದ ನೇರವಾಗಿ ಗೋವಾಕ್ಕೆ ತೆರಳಿ ಗುರುವಾರ ಸಮಯಕ್ಕೆ ಸರಿಯಾಗಿ ವಿಧಾನಸಭೆಗೆ ಬರಲು ನಿರ್ಧರಿಸಲಾಗಿದೆ.

ಹಿಂದಿನ ಸುದ್ದಿ | Maha politics: ರಾಜ್ಯಪಾಲರ ಭೇಟಿಯಾದ ಫಡ್ನವಿಸ್‌, ಬಹುಮತ ಸಾಬೀತುಪಡಿಸುವಂತೆ ಠಾಕ್ರೆಗೆ ಸೂಚಿಸಲು ಮನವಿ

Exit mobile version