ಮುಂಬಯಿ: ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಕೇವಲ ಶಿವಸೇನೆಗೆ ಸೀಮಿತವಾಗುವಂತೆ ಕಾಣುತ್ತಿಲ್ಲ. ಇದರ ಬದಲಾಗಿ ಇತರ ಪಕ್ಷಗಳ ಮೇಲೂ ದೊಡ್ಡ ಪರಿಣಾಮ ಉಂಟು ಮಾಡುವ ಸಾಧ್ಯತೆಗಳು ನಿಚ್ಛಳವಾಗಿವೆ. ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್ ಮಹಾ ವಿಕಾಸ ಅಘಾಡಿ ಸರಕಾರದಿಂದ ಹೊರಬರಲು ನಿರ್ಧಿರಿಸಿದೆ ಎಂಬ ಮಾಹಿತಿ ಕೇಳಿಬರುತ್ತಿದೆ.
ನಿಜವೆಂದರೆ, ಭಾನುವಾರ ನಡೆದ ಸ್ಪೀಕರ್ ಆಯ್ಕೆ ಸಂದರ್ಭದಲ್ಲೇ ಈ ಅಂಶ ಸ್ವಲ್ಪ ಮಟ್ಟಿಗೆ ಗೋಚರವಾಗಿತ್ತು. ಸೋಮವಾರ ವಿಧಾನಸಭೆಯಲ್ಲಿ ನಡೆದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ವಿಶ್ವಾಸಮತ ಯಾಚನೆಯಲ್ಲಿ ಇದು ಇನ್ನಷ್ಟು ಸ್ಪಷ್ಟಗೊಂಡಿದೆ. ಮಹಾ ವಿಕಾಸ ಅಘಾಡಿ ಕೂಟದಲ್ಲಿ ಮೂಲದಲ್ಲಿ ೧೬೯ ಶಾಸಕರು ಇದ್ದರು. ಅವರ ಪೈಕಿ ೩೯ ಶಿವಸೇನಾ ಶಾಸಕರು ಮತ್ತು ೧೧ ಪಕ್ಷೇತರರು ಬಿಟ್ಟು ಹೋದ ಬಳಿಕ ೧೧೯ ಶಾಸಕರು ಜತೆಗಿರಬೇಕಿತ್ತು. ಆದರೆ, ಸ್ಪೀಕರ್ ಚುನಾವಣೆಯಲ್ಲಿ ೧೧೨ ಮಂದಿ ಮಾತ್ರ ಅಘಾಡಿ ಅಭ್ಯರ್ಥಿಯಾಗಿದ್ದ ರಾಜನ್ ಸಾಳ್ವಿ ಪರ ಮತ ಚಲಾಯಿಸಿದ್ದಾರೆ. ಈ ಸಂಖ್ಯೆ ಶಿಂಧೆ ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿ ೯೯ಕ್ಕೆ ಇಳಿದಿದೆ.
ಏಕನಾಥ್ ಶಿಂಧೆ ಅವರು ವಿಶ್ವಾಸಮತ ಗೆಲ್ಲುವುದು ಖಚಿತವಾಗಿದ್ದ ಹಿನ್ನೆಲೆಯಲ್ಲಿ ಕೆಲವು ಶಾಸಕರು ಬಂದಿರಲಿಲ್ಲ ಎನ್ನುವುದು ನಿಜವಾದರೂ ಕೆಲವರು ಮಾಹಿತಿ ನೀಡದೆಯೇ ಗೈರು ಹಾಜರಾಗಿದ್ದಾರೆ ಎನ್ನಲಾಗಿದೆ. ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್‌ನ ಕೆಲವು ಪ್ರಮುಖ ಶಾಸಕರೇ ಮತದಾನದಿಂದ ದೂರ ಉಳಿದಿದ್ದಾರೆ ಎಂದು ತಿಳಿದುಬಂದಿದೆ. ಹಿರಿಯ ನಾಯಕರಾದ ಅಶೋಕ್ ಚೌಹಾನ್ ಮತ್ತು ವಿಜಯ್ ವಡೆಟ್ಟಿವಾರ್ ಮತದಾನದಿಂದ ದೂರ ನಿಂತ ಪ್ರಮುಖರಲ್ಲಿ ಸೇರಿದ್ದಾರೆ.
ಕಾಂಗ್ರೆಸ್ ಮತ್ತು ಎನ್‌ಸಿಪಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಪೂರ್ವ ಮೈತ್ರಿಯೊಂದಿಗೆ ಕಣಕ್ಕಿಳಿದು ಎನ್‌ಸಿಪಿ ೫೩ ಮತ್ತು ಕಾಂಗ್ರೆಸ್ ೪೪ ಸ್ಥಾನಗಳನ್ನು ಗೆದ್ದಿತ್ತು. ಅತ್ಯಂತ ವಿಶೇಷ ಸಂದರ್ಭದಲ್ಲಿ ಈ ಎರಡು ಪಕ್ಷಗಳು ಶಿವಸೇನೆಯೊಂದಿಗೆ ಸೇರಿ ಮಹಾ ವಿಕಾಸ ಅಘಾಡಿ ಕೂಟವನ್ನು ರಚಿಸಿದ್ದವು. ಇದೀಗ ಶಿವಸೇನೆಯ ಬಂಡಾಯದ ನೆಲೆಯಲ್ಲಿ ಕೂಟ ಅಧಿಕಾರ ಕಳೆದುಕೊಂಡಿದೆ. ಶರದ್ ಪವಾರ್ ಅವರ ಒತ್ತಾಸೆಯೊಂದಿಗೆ ಹುಟ್ಟಿಕೊಂಡಿರುವ ಈ ಕೂಟವನ್ನು ಮುಂದುವರಿಸುವುದರಲ್ಲಿ ಅರ್ಥವಿಲ್ಲ ಎನ್ನುವುದು ಕಾಂಗ್ರೆಸ್ ವಾದ.
ನಿಜವೆಂದರೆ, ಶಿವಸೇನೆಯ ಉದ್ಧವ್ ಠಾಕ್ರೆ ಬಣ ಇನ್ನೂ ಅಘಾಡಿ ಕೂಟವನ್ನೇ ನೆಚ್ಚಿಕೊಂಡಿದೆ. ಸ್ಪೀಕರ್ ಹುದ್ದೆಗೆ ಅಘಾಡಿ ಕೂಟದಿಂದ ಸ್ಪರ್ಧಿಸಿದ್ದು ಕೂಡಾ ಶಿವಸೇನೆಯ ಆಭ್ಯರ್ಥಿಯೇ. ಆದರೆ, ಶಿವಸೇನೆಯನ್ನು ನೆಚ್ಚಿಕೊಂಡು ಬಹುಕಾಲ ಕೂಟದಲ್ಲಿ ಉಳಿಯುವುದು ಸರಿಯಲ್ಲ ಎಂಬ ಅಭಿಪ್ರಾಯ ಕಾಂಗ್ರೆಸ್‌ನಲ್ಲಿದೆ. ಅದಕ್ಕಿಂತಲೂ ಮುಖ್ಯವಾಗಿ ಸದ್ಯವೇ ಮುಂಬಯಿ ಮಹಾನಗರ ಪಾಲಿಕೆ ಚುನಾವಣೆ ನಡೆಯಲಿದ್ದು, ಅದಕ್ಕಾಗಿ ಸ್ವತಂತ್ರವಾಗಿ ಪ್ಲ್ಯಾನ್‌ಗಳನ್ನು ಮಾಡುವುದು ಕಾಂಗ್ರೆಸ್ ಯೋಜನೆ. ಈ ಹಂತದಲ್ಲಿ ಎನ್‌ಸಿಪಿ ಜತೆ ಹೋಗುತ್ತದೋ, ಒಂಟಿಯಾಗಿಯೇ ಹೋರಾಟ ನಡೆಸುವುದೇ ಎಂದು ಕಾದು ನೋಡಬೇಕಾಗಿದೆ.
ಇದನ್ನೂ ಓದಿ| Maha politics: ಸಿಎಂ ಆಗಿ ವಿಶ್ವಾಸ ಮತ ಗೆದ್ದ ಏಕನಾಥ್ ಶಿಂಧೆ, 164 ಶಾಸಕರ ಬೆಂಬಲ, ಅಘಾಡಿಗೆ ಕೇವಲ 99