Site icon Vistara News

Maha politics | ಮಹಾರಾಷ್ಟ್ರ ಸಂಪುಟ ವಿಸ್ತರಣೆಗೆ ದಿಲ್ಲಿ ನಾಯಕರ ಜತೆ ಶಿಂಧೆ, ಫಡ್ನವಿಸ್‌ ಫೈನಲ್‌ ಪ್ಲ್ಯಾನಿಂಗ್

Amit Shah

ನ‌ವ ದೆಹಲಿ: ಮಹಾರಾಷ್ಟ್ರದ ನೂತನ ಬಿಜೆಪಿ-ಶಿವಸೇನಾ-ಶಿಂಧೆ ಬಣದ ಸರಕಾರದ ನೂತನ ಸಚಿವ ಸಂಪುಟ ವಿಸ್ತರಣೆಯ ಪ್ಲ್ಯಾನಿಂಗ್‌ ದಿಲ್ಲಿಯಲ್ಲಿ ಆರಂಭಗೊಂಡಿದೆ. ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಅವರು ಶುಕ್ರವಾರ ದಿಲ್ಲಿಗೆ ಆಗಮಿಸಿದ್ದಾರೆ. ರಾತ್ರಿ ಬಿಜೆಪಿಯ ಹಿರಿಯ ನಾಯಕ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಶನಿವಾರ ಇತರ ಹಲವು ನಾಯಕರ ಜತೆ ಮಾತುಕತೆ ನಡೆಸಿ ಸಂಪುಟ ವಿಸ್ತರಣೆಯ ರೂಪುರೇಷೆ ಸಿದ್ಧಪಡಿಸಲಿದ್ದಾರೆ.

ಶುಕ್ರವಾರ ದಿಲ್ಲಿಗೆ ಆಗಮಿಸಿರುವ ಮಹಾರಾಷ್ಟ್ರದ ಇಬ್ಬರು ನಾಯಕರು ಅಮಿತ್‌ ಶಾ ಅವರನ್ನು ಭೇಟಿ ಮಾಡಿದ್ದಾರೆ. ಅವರು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಉಪಾಧ್ಯಕ್ಷ ಎಂ. ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಲಿದ್ದಾರೆ. ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗಳ ಭೇಟಿ ಶಿಷ್ಟಾಚಾರಕ್ಕೆ ಸಂಬಂಧಿಸಿದ್ದಾದರೆ, ಉಳಿದವರ ಜತೆಗಿನ ಮಾತುಕತೆ ರಾಜಕೀಯವಾಗಿ ಮಹತ್ವ ಪಡೆದಿದೆ.

ಅಧಿಕಾರ ಹಂಚಿಕೆ ಸೂತ್ರ ಚರ್ಚೆ
ಮಹಾರಾಷ್ಟ್ರ ಸದನದಲ್ಲಿ ಅಮಿತ್‌ ಶಾ ಅವರನ್ನು ಭೇಟಿ ಮಾಡಿದ ವೇಳೆ ಹೊಸ ಸಂಪುಟದಲ್ಲಿ ಯಾವ ಪಕ್ಷಕ್ಕೆ ಎಷ್ಟು ಪ್ರಾತಿನಿಧ್ಯ ಇರಬೇಕು, ಯಾರಿಗೆ ಮಂತ್ರಿ ಖಾತೆ ಕೊಡಬೇಕು ಎನ್ನುವ ಬಗ್ಗೆ ಚರ್ಚೆ ನಡೆದಿರುವ ಸಾಧ್ಯತೆಗಳಿವೆ.
ʻʻನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ನೀವಿಬ್ಬರೂ ಜನತೆಗೆ ವಿಶ್ವಾಸಾರ್ಹ ಸೇವೆಯನ್ನು ನೀಡುತ್ತೀರಿ ಮತ್ತು ಮಹಾರಾಷ್ಟ್ರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತೀರಿ ಎನ್ನುವ ನಂಬಿಕೆ ನನಗಿದೆʼʼ ಎಂದು ಶಿಂಧೆ ಮತ್ತು ಫಡ್ನವಿಸ್‌ ಅವರು ಭೇಟಿಯ ಚಿತ್ರದೊಂದಿಗೆ ಅಮಿತ್‌ ಶಾ ಟ್ವೀಟ್‌ ಮಾಡಿದ್ದಾರೆ.

ಜುಲೈ ೧೧ರ ಬಳಿಕ ಸಂಪುಟ ವಿಸ್ತರಣೆ?
ಶಾಸಕರ ಅನರ್ಹತೆಗೆ ಸಂಬಂಧಿಸಿ ಶಿವಸೇನೆಯ ಎರಡು ಬಣಗಳು ನೀಡಿರುವ ಅರ್ಜಿಗಳ ವಿಚಾರಣೆ ಜುಲೈ ೧೧ರಂದು ಸುಪ್ರೀಂಕೋರ್ಟ್‌ನಲ್ಲಿ ನಡೆಯಲಿದೆ. ಅದರ ಬಳಿಕವೇ ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆಗಳು ಹೆಚ್ಚಿವೆ. ಜೂನ್‌ ೨೨ರಂದು ಕರೆದ ಶಿವಸೇನಾ ಶಾಸಕಾಂಗ ಪಕ್ಷ ಸಭೆಗೆ ಬಂದಿಲ್ಲ ಎಂಬ ಕಾರಣಕ್ಕೆ, ವಿಪ್‌ ಉಲ್ಲಂಘಿಸಿದ ಆರೋಪದಲ್ಲಿ ಉದ್ಧವ್‌ ಠಾಕ್ರೆ ಬಣ ಶಿಂಧೆ ಗ್ರೂಪಿನ ೧೬ ಶಾಸಕರ ಅನರ್ಹತೆ ಕೋರಿ ಡೆಪ್ಯೂಟಿ ಸ್ಪೀಕರ್‌ಗೆ ಮನವಿ ಸಲ್ಲಿಸಿತ್ತು.
ಈ ನಡುವೆ, ಬಿಜೆಪಿ ಜತೆ ಸೇರಿಕೊಂಡು ಸರಕಾರ ರಚಿಸಿದ ಏಕನಾಥ್‌ ಶಿಂಧೆ ಬಣ ತಮ್ಮದೇ ನಿಜವಾದ ಶಿವಸೇನೆ ಎಂದು ಹೇಳಿಕೊಂಡಿದೆ. ಸ್ವತಂತ್ರವಾಗಿ ಶಾಸಕಾಂಗ ಪಕ್ಷ ನಾಯಕನನ್ನೂ ಆಯ್ಕೆ ಮಾಡಿಕೊಂಡಿರುವ ಈ ಟೀಮ್‌ ವಿಶ್ವಾಸ ಮತದ ವೇಳೆ ಸರಕಾರದ ವಿರುದ್ಧ ಮತ ಚಲಾಯಿಸಿದ್ದನ್ನೇ ಮುಂದಿಟ್ಟುಕೊಂಡು ೧೫ ಶಾಸಕರ ಅನರ್ಹತೆ ಆಗ್ರಹಿಸಿ ಹೊಸ ಸ್ಪೀಕರ್ ರಾಹುಲ್‌ ನಾರ್ವೇಕರ್‌ಗೆ ಮನವಿ ಸಲ್ಲಿಸಿದೆ. ಇದನ್ನು ಪ್ರಶ್ನಿಸಿ ಉದ್ಧವ್‌ ಠಾಕ್ರೆ ಬಣ ಸುಪ್ರೀಂಕೋರ್ಟ್‌ ಮೊರೆ ಹೊಕ್ಕಿದೆ. ಸುಪ್ರೀಂಕೋರ್ಟ್‌ ಇದೀಗ ಎರಡೂ ಪ್ರಕರಣಗಳನ್ನು ಜುಲೈ ೧೧ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.

ಇದನ್ನೂ ಓದಿ| Maha politics: ಶಿವಸೇನೆ ಶಾಸಕಾಂಗ ಪಕ್ಷ ನಾಯಕರಾಗಿ ಶಿಂಧೆ, ಈಗ ಉದ್ಧವ್‌ ಟೀಮ್‌ಗೆ ಅನರ್ಹತೆ ಭೀತಿ!

Exit mobile version