Site icon Vistara News

Maha politics: ಶಿಂಧೆ ಸರಕಾರಕ್ಕೆ ಬಿಗ್‌ ರಿಲೀಫ್‌, 16 ಶಾಸಕರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳದಂತೆ ಸುಪ್ರೀಂ ಸೂಚನೆ

ನವ ದೆಹಲಿ: ಮಹಾರಾಷ್ಟ್ರದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಬಿಜೆಪಿ ಮತ್ತು ಶಿವಸೇನಾ ಶಿಂಧೆ ಬಣದ ನೇತೃತ್ವದ ಸರಕಾರಕ್ಕೆ ಸುಪ್ರೀಂಕೋರ್ಟ್‌ ಸೋಮವಾರ ಬಿಗ್‌ ರಿಲೀಫ್‌ ನೀಡಿದೆ. ರಾಜ್ಯದಲ್ಲಿನ ಬಿಕ್ಕಟ್ಟಿಗೆ ಸಂಬಂಧಿಸಿ ಉದ್ಧವ್‌ ಠಾಕ್ರೆ ಬಣ ಸಲ್ಲಿಸಿದ ಅರ್ಜಿಯ ತುರ್ತು ವಿಚಾರಣೆಗೆ ನಿರಾಕರಿಸಿರುವ ಸುಪ್ರೀಂಕೋರ್ಟ್‌, ಮಂಗಳವಾರವೂ ಅದನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ ಇಲ್ಲ ಎಂದಿದೆ.

ಶಿವಸೇನೆಯ ಶಿಂಧೆ ಬಣವನ್ನು ಸರಕಾರ ರಚನೆಗೆ ಆಹ್ವಾನಿಸಿದ ಮಹಾರಾಷ್ಟ್ರ ರಾಜ್ಯಪಾಲರ ಕ್ರಮವನ್ನು ಪ್ರಶ್ನಿಸಿ ಉದ್ಧವ್‌ ಠಾಕ್ರೆ ಬಣ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು. ಅದರ ಜತೆಗೆ ಶಿಂಧೆ ಬಣದ ೧೬ ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಒತ್ತಾಯಿಸಿ ಡೆಪ್ಯೂಟಿ ಸ್ಪೀಕರ್‌ ಅವರಿಗೆ ಸಲ್ಲಿಸಿದ್ದ ಮನವಿಯ ಕುರಿತಾದ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಸೋಮವಾರ ಕೈಗೆತ್ತಿಕೊಳ್ಳಬೇಕಾಗಿತ್ತು. ಆದರೆ, ಸುಪ್ರೀಂಕೋರ್ಟ್‌ ಯಾವ ವಿಚಾರವನ್ನೂ ತಕ್ಷಣ ಕೈಗೆತ್ತಿಕೊಳ್ಳುವುದಿಲ್ಲ ಎಂದು ಹೇಳಿದೆ.

ಸ್ಪೀಕರ್‌ಗೆ ಸೂಚನೆ
ಶಿವಸೇನೆಯ ಶಿಂಧೆ ಬಣ ಶಾಸಕಾಂಗ ಪಕ್ಷ ಸಭೆಗೆ ಹಾಜರಾಗದಿರುವ ಮೂಲಕ ವಿಪ್‌ ಉಲ್ಲಂಘಿಸಿದೆ. ಈ ಕಾರಣಕ್ಕೆ ಶಿಂಧೆ ಸೇರಿ ಸೇರಿದಂತೆ ೧೬ ಶಾಸಕರನ್ನು ಪಕ್ಷದಿಂದ ಅನರ್ಹಗೊಳಿಸಬೇಕು ಎಂದು ಉದ್ಧವ್‌ ಠಾಕ್ರೆ ಬಣ ಡೆಪ್ಯೂಟಿ ಸ್ಪೀಕರ್‌ ನರಹರಿ ಜೈರ್ವಾಲ್‌ ಅವರಿಗೆ ಮನವಿ ಮಾಡಿತ್ತು. ಅವರು ೧೬ ಶಾಸಕರಿಗೆ ನೋಟಿಸ್‌ ನೀಡಿದ ಹಂತದಲ್ಲಿ ಪ್ರಕರಣ ಸುಪ್ರೀಂಕೋರ್ಟ್‌ ಮೆಟ್ಟಿಲು ಹತ್ತಿತ್ತು. ವಿಚಾರಣೆಯನ್ನು ಜುಲೈ ೧೧ಕ್ಕೆ ಸುಪ್ರೀಂಕೋರ್ಟ್‌ ಮರು ನಿಗದಿ ಮಾಡಿತ್ತು.

ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿಂಧೆ ಬಣದ ಹೊಸ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಆಯ್ಕೆಯಾದ ಹೊಸ ಸ್ಪೀಕರ್‌, ಶಿವಸೇನೆಯ ಶಿಂಧೆ ಬಣದ ರಾಹುಲ್‌ ನಾರ್ವೇಕರ್‌ ಅವರ ಮುಂದೆ ಈಗ ಈ ಅನರ್ಹತೆಯ ಅರ್ಜಿ ಇದೆ. ಸುಪ್ರೀಂಕೋರ್ಟ್‌ ಅವರಿಗೂ ಸೂಚನೆಯೊಂದನ್ನು ನೀಡಿದ್ದು, ಈ ಅರ್ಜಿಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಂತೆ ಸೂಚಿಸಿದೆ.

ಇದನ್ನೂ ಓದಿ| Maha politics: ಶಿಂಧೆ ಸಚಿವ ಸಂಪುಟ ವಿಸ್ತರಣೆ ಮುಂದಿನ ವಾರ, 13 ಸಚಿವರ ಸೇರ್ಪಡೆ ನಿರೀಕ್ಷೆ

Exit mobile version