ಮುಂಬಯಿ: ಸುಪ್ರೀಂಕೋರ್ಟ್‌ನಲ್ಲಿ ಸಿಕ್ಕ ಮೊದಲ ಕಾನೂನು ಜಯದಿಂದ ಬೀಗುತ್ತಿರುವ ಶಿವಸೇನೆಯ ಬಂಡಾಯ ಬಣ ಮುಂದೆ ಯಾವ ಹೆಜ್ಜೆ ಇಡಲಿದೆ ಎಂಬ ಕುತೂಹಲ ಎಲ್ಲೆಡೆ ಇದೆ. ಒಂದು ಮೂಲದ ಪ್ರಕಾರ, ಸದ್ಯ ಗುವಾಹಟಿಯ ರ‍್ಯಾಡಿಸನ್ ಹೋಟೆಲ್‌ನಲ್ಲಿ ತಂಗಿರುವ ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ತಂಡ ಅವಿಶ್ವಾಸ ಸೂಚನೆ ಗೊತ್ತುವಳಿಯ ಹೊಸ ದಾಳ ಉರುಳಿಸಲು ಸಜ್ಜಾಗುತ್ತಿದೆ(Maha politics).
ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲೇ ತಮ್ಮ ಬಣದ ೩೮ ಶಾಸಕರು ಆಗಲೇ ಮಹಾ ವಿಕಾಸ ಅಘಾಡಿ ಸರಕಾರಕ್ಕೆ ನೀಡಿದ ಬೆಂಬಲವನ್ನು ಹಿಂಪಡೆದಿದ್ದೇವೆ ಎಂಬ ಅಂಶವನ್ನು ಉಲ್ಲೇಖಿಸಲಾಗಿದೆ. ಆದರೆ, ನಿಜದಲ್ಲಿ ಅದನ್ನು ರಾಜ್ಯಪಾಲರಿಗೆ ಇದುವರೆಗೂ ಈ ಗುಂಪು ತಿಳಿಸಿಲ್ಲ, ಅವರ ಜತೆ ಸಮಾಲೋಚನೆ ನಡೆಸಿಲ್ಲ. ಇದೀಗ ತಮ್ಮ ತಲೆ ಮೇಲೆ ತೂಗುತ್ತಿದ್ದ ಅನರ್ಹತೆಯ ತೂಗುಗತ್ತಿ ಸರಿಯುತ್ತಿದ್ದಂತೆಯೇ ಅದನ್ನು ನೇರವಾಗಿ ರಾಜ್ಯಪಾಲರಿಗೆ ತಿಳಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ.
ಒಂದು ಮೂಲದ ಪ್ರಕಾರ, ಶಿಂಧೆ ಬಣದ ಕೆಲವರು ಸೋಮವಾರ ರಾತ್ರಿ ಇಲ್ಲವೇ ಮಂಗಳವಾರ ಮುಂಜಾನೆಯೊಳಗೆ ರಾಜ್ಯಪಾಲರಾದರ ಭಗತ್ ಸಿಂಗ್ ಕೋಶ್ಯಾರಿ ಅವರನ್ನು ಭೇಟಿಯಾಗಿ ತಮಗೆ ಮಹಾ ಅಘಾಡಿ ಸರಕಾರದ ಮೇಲೆ ವಿಶ್ವಾಸವಿಲ್ಲ ಎನ್ನುವುದನ್ನು ಪತ್ರದ ಮೂಲಕ ತಿಳಿಸಲಿದೆ. ಒಂದು ಹಂತದಲ್ಲಿ ಏಕನಾಥ್ ಶಿಂಧೆ ಅವರು ಆಗಲೇ ಗುವಾಹಟಿಯಿಂದ ಮುಂಬಯಿಗೆ ಹೊರಟಿದ್ದಾರೆ ಎಂದು ಹೇಳಲಾಯಿತಾದರೂ ಕೊನೆಗೆ ಅವರು ಇನ್ನೂ ಹೋಟೆಲ್‌ನಲ್ಲೇ ಇದ್ದಾರೆ ಎನ್ನುವುದು ಬೆಳಕಿಗೆ ಬಂತು.
ಬಲಾಬಲ ಪರೀಕ್ಷೆ ಎದುರಿಸಲು ಸಿದ್ಧ
ʻʻನಾವು ಮಹಾರಾಷ್ಟ್ರ ಅಸೆಂಬ್ಲಿಯಲ್ಲಿ ಬಲಾಬಲ ಪರೀಕ್ಷೆಗೆ ಸಿದ್ಧರಿದ್ದೇವೆ. ಆದರೆ, ನಮ್ಮ ಬಣಕ್ಕೆ ಪ್ರತ್ಯೇಕ ಮಾನ್ಯತೆ ನೀಡಬೇಕುʼʼ ಎಂದು ಶಿಂಧೆ ಬಣದ ಶಾಸಕ ದೀಪಕ್ ಕೇಸರ್‌ಕರ್ ಭಾನುವಾರ ಹೇಳಿದ್ದರು. ಹೀಗಾಗಿ ಶಿಂಧೆ ಬಣಕ್ಕೆ ವಿಧಾನಸಭೆಯಲ್ಲೇ ತಮ್ಮ ಶಕ್ತಿ ಪ್ರದರ್ಶನ ಮಾಡುವ ಮನಸ್ಸಿದೆ ಎನ್ನುವುದು ಸ್ಪಷ್ಟವಾಗಿದೆ. ಸೋಮವಾರ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆದು ಬಿಗ್ ರಿಲೀಫ್ ಸಿಕ್ಕಿದ ಬಳಿಕ ಸಭೆ ಸೇರಿದ ಶಿಂಧೆ ಬಣವೂ ಈ ಸಾಧ್ಯತೆಯ ಬಗ್ಗೆಯೇ ಹೆಚ್ಚು ಚರ್ಚೆ ಮಾಡಿದೆ.
ಶಿಂಧೆ ಬಣಕ್ಕೆ ಸದ್ಯ ೧೫ ದಿನಗಳ ರಿಲೀಫ್ ಸಿಕ್ಕಿದ್ದು ನಿಜವಾದರೂ ಅಷ್ಟೂ ದಿನ ಗುವಾಹಟಿಯ ಹೋಟೆಲಲ್ಲೇ ಇರಬೇಕಾದ ಎನ್ನುವುದು ಶಾಸಕರ ಪ್ರಶ್ನೆ. ಸಹಜವಾಗಿ ಹೆಚ್ಚಿನ ಶಾಸಕರು ತಮ್ಮ ಮನೆಗಳಿಗೆ ಮರಳಲು ಬಯಸಿದ್ದಾರೆ. ಹೀಗಾಗಿ ಮುಂಬಯಿಗೆ ಬಂದು ಮುಂದಿನ ದಾಳ ಉರುಳಿಸುವುದೇ ಈಗಿರುವ ದಾರಿ ಎಂದು ಈ ಬಣ ನಂಬಿದೆ. ಇತ್ತ ಸುಪ್ರೀಂ ಕೋರ್ಟ್ ಕೂಡಾ ಎಲ್ಲ ಶಾಸಕರು ಮತ್ತು ಅವರ ಮನೆಗಳಿಗೆ ಭದ್ರತೆ ಒದಗಿಸುವಂತೆ ಸೂಚಿಸಿದೆ.
ಅವಿಶ್ವಾಸ ವ್ಯಕ್ತಪಡಿಸಿದರೆ ಮುಂದೇನು?
ಒಂದೊಮ್ಮೆ ಏಕನಾಥ್ ಶಿಂಧೆ ಬಣದಲ್ಲಿರುವ ೩೭ ಪ್ಲಸ್ ಬಂಡಾಯ ಶಾಸಕರು ರಾಜ್ಯಪಾಲರನ್ನು ಭೇಟಿಯಾಗಿ ಅವಿಶ್ವಾಸವನ್ನು ವ್ಯಕ್ತಪಡಿಸಿದರೆ, ಮಹಾ ವಿಕಾಸ ಅಘಾಡಿ ಸರಕಾರದ ಬಲ ಮ್ಯಾಜಿಕ್ ಸಂಖ್ಯೆ (೧೪೩)ಕ್ಕಿಂತ ಕೆಳಗೆ ಇಳಿಯುತ್ತದೆ. ಈ ಹಂತದಲ್ಲಿ ರಾಜ್ಯಪಾಲರಾದ ಭಗತ್ ಸಿಂಗ್ ಕೋಶ್ಯಾರಿ ಅವರು ಉದ್ಧವ್ ಠಾಕ್ರೆ ಅವರಿಗೆ ವಿಶ್ವಾಸಮತ ಸಾಬೀತುಪಡಿಸುವಂತೆ ಕೋರಬಹುದು. ಅಥವಾ ಈ ಹಂತದಲ್ಲಿ ಭಾರತೀಯ ಜನತಾ ಪಕ್ಷವೇನಾದರೂ ಮಧ್ಯಪ್ರವೇಶ ಮಾಡಿ ಸರಕಾರದ ವಿಶ್ವಾಸಮತ ಕಳೆದುಕೊಂಡಿದೆ ಎಂದು ಹೇಳಿದರೆ ಅವಿಶ್ವಾಸ ಗೊತ್ತುವಳಿಗೆ ಅವಕಾಶ ಕೊಡಬಹುದು. ಮುಂದೆ ಸದನದಲ್ಲಿ ಬಲಾಬಲ ಪರೀಕ್ಷೆ ನಡೆಯಬೇಕಾಗುತ್ತದೆ.
ಆಗ ಏಕನಾಥ್ ಶಿಂಧೆ ಬಣದ ನಿಲುವು ಏನಾಗಿರುತ್ತದೆ ಎನ್ನುವುದು ತುಂಬ ಮುಖ್ಯವಾಗುತ್ತದೆ. ಒಂದೊಮ್ಮೆ ಅದು ನೇರವಾಗಿ ಬಿಜೆಪಿಯನ್ನು ಬೆಂಬಲಿಸಿದರೆ ಮತ್ತೊಮ್ಮೆ ಅನರ್ಹತೆಯ ತೂಗುಗತ್ತಿ ತೂಗಲು ಆರಂಭವಾಗುತ್ತದೆ!
ಇದನ್ನೂ ಓದಿ| maha politics: ಶಿಂಧೆ ಟೀಮ್‌ಗೆ ಸುಪ್ರೀಂ ರಿಲೀಫ್, ವಿಚಾರಣೆ ಜುಲೈ 11ಕ್ಕೆ ಮುಂದೂಡಿಕೆ, ಅಲ್ಲಿವರೆಗೆ 16 ಶಾಸಕರು ಸೇಫ್