ಮುಂಬಯಿ: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಶಿವಸೇನೆಯ ಬಂಡಾಯ ಬಣದ ನಾಯಕ ಏಕನಾಥ್ ಶಿಂಧೆ ಅವರು ಜುಲೈ ೪ರಂದು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮಾಡುವ ನಿರೀಕ್ಷೆ ಇದೆ. ಜುಲೈ ೨ರಿಂದ ವಿಧಾನಸಭೆ ಅಧಿವೇಶನ ಆರಂಭವಾಗಲಿದೆ. ಈ ನಡುವೆ ವಿಶ್ವಾಸ ಮತ ಯಾಚನೆಗೆ ತಡೆಯಾಜ್ಞೆ ನೀಡಬೇಕು ಎಂಬ ಉದ್ಧವ್ ಠಾಕ್ರೆ ಬಣದ ಬೇಡಿಕೆಯನ್ನು ಸುಪ್ರೀಂಕೋರ್ಟ್ ತಳ್ಳಿ ಹಾಕಿದೆ.
ಜೂನ್ ೨ರಂದು ರಾತ್ರಿ ಶಿವಸೇನೆಯ ಶಾಸಕರೊಂದಿಗೆ ಮುಂಬಯಿಂದ ಸೂರತ್ ರೆಸಾರ್ಟ್‌ಗೆ ಹೋಗಿ ಬಂಡಾಯದ ಬಾವುಟ ಹಾರಿಸಿದ ಏಕನಾಥ್ ಶಿಂಧೆ ಅವರು ತಮ್ಮ ಮಿಷನ್ ಬಂಡಾಯವನ್ನು ಯಶಸ್ವಿಗೊಳಿಸಿ ಜೂನ್ ೩೦ರಂದು ಮಹಾರಾಷ್ಟ್ರದ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಅವರಿಗೆ ಬಿಜೆಪಿ ಮತ್ತು ಪಕ್ಷೇತರರು ಬೆಂಬಲ ನೀಡಿದ್ದಾರೆ. ಆದರೆ, ಸರಕಾರದ ಒಟ್ಟಾರೆ ಬಲಾಬಲ ಸದನದಲ್ಲಿ ಸಾಬೀತಾಗಬೇಕಾಗಿದೆ. ಇದಕ್ಕಾಗಿ ವಿಧಾನಸಭಾ ಅಧಿವೇಶನ ಕರೆಯಲಾಗಿದೆ.
ಜೂನ್ ೨ರಂದು ವಿಧಾನ ಸಭಾ ಅಧಿವೇಶನ ಆರಂಭವಾಗುತ್ತಿದ್ದಂತೆಯೇ ಮೊದಲು ಸ್ಪೀಕರ್ ಆಯ್ಕೆ ಪ್ರಕ್ರಿಯೆ ನಡೆಯಬೇಕಾಗುತ್ತದೆ. ಹಾಗಾಗಿ ಮೊದಲ ದಿನ ಸ್ಪೀಕರ್ ಮತ್ತು ಉಪ ಸ್ಪೀಕರ್ ಹುದ್ದೆಗೆ ನಾಮಪತ್ರ ಸಲ್ಲಿಕೆ ನಡೆಯಲಿದೆ. ಜುಲೈ ಮೂರರಂದು ಸ್ಪೀಕರ್ ಆಯ್ಕೆಗೆ ಮತದಾನ ನಡೆಯಲಿದೆ. ಅದಾದ ಬಳಿಕ ನೂತನ ಸ್ಪೀಕರ್ ನೇತೃತ್ವದಲ್ಲಿ ಶಿಂಧೆ ಅವರು ಮತ ಯಾಚನೆ ಮಾಡಲಿದ್ದಾರೆ.
ಯಾರಿಗೆ ಸ್ಪೀಕರ್ ಹುದ್ದೆ?
ಮಹಾ ವಿಕಾಸ ಅಘಾಡಿ ಸರಕಾರದಲ್ಲಿ ಆರಂಭದ ಕೆಲವು ತಿಂಗಳು ಬಿಟ್ಟರೆ ಮುಂದೆ ಸ್ಪೀಕರ್ ಹುದ್ದೆ ಖಾಲಿಯಾಗೇ ಇತ್ತು. ಸರಕಾರದಲ್ಲಿ ಮುಖ್ಯಮಂತ್ರಿ ಹುದ್ದೆಯನ್ನು ಶಿವಸೇನೆಗೆ, ಸ್ಪೀಕರ್ ಹುದ್ದೆಯನ್ನು ಕಾಂಗ್ರೆಸ್‌ಗೆ ಮತ್ತು ಡೆಪ್ಯೂಟಿ ಸ್ಪೀಕರ್ ಹುದ್ದೆಯನ್ನು ಎನ್‌ಸಿಪಿಗೆ ನೀಡಲಾಗಿತ್ತು. ಅದರಂತೆ ನಾನಾ ಪಾಟೋಲೆ ಅವರು ಸ್ಪೀಕರ್ ಆಗಿ ಅಯ್ಕೆಯಾಗಿದ್ದರು. ಆದರೆ, ಕೆಲವೇ ಸಮಯದಲ್ಲಿ ೨೦೧೯ರಲ್ಲೇ ಅವರನ್ನು ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಹೀಗಾಗಿ ಸ್ಪೀಕರ್ ಹುದ್ದೆ ಖಾಲಿಯಾಗಿತ್ತು. ಆದರೆ, ಬಳಿಕ ಅದನ್ನು ತುಂಬುವ ಪ್ರಯತ್ನವೇ ನಡೆದಿರಲಿಲ್ಲ.
ಈ ಬಾರಿ ಸ್ಪೀಕರ್ ಹುದ್ದೆಗೆ ಶಿವಸೇನೆಯ ಶಾಸಕರನ್ನ ಆಯ್ಕೆ ಮಾಡಲಾಗುತ್ತದೋ, ಅದನ್ನು ಬಿಜೆಪಿಗೆ ಬಿಟ್ಟುಕೊಡಲಾಗುವುದೋ ಎನ್ನುವುದು ಸ್ಪಷ್ಟವಾಗಿಲ್ಲ. ಬಹುತೇಕ ಬಿಜೆಪಿ ಶಾಸಕರೊಬ್ಬರು ಆಯ್ಕೆಯಾಗುವ ಸಾಧ್ಯತೆ ಇದೆ.
ನಿಜವೆಂದರೆ, ಸ್ಪೀಕರ್ ಆಯ್ಕೆಯ ಸಂದರ್ಭದಲ್ಲೇ ಯಾವ ಮೈತ್ರಿಕೂಟ ಹೆಚ್ಚು ಬಲ ಹೊಂದಿದೆ ಎನ್ನುವುದು ಸ್ಪಷ್ಟವಾಗಲಿದೆ. ಇದು ಸರಕಾರದ ವಿಶ್ವಾಸಮತದ ಮುನ್ಸೂಚನೆಯನ್ನು ನೀಡಲಿದೆ.
ಸುಪ್ರೀಂಕೋರ್ಟ್ ಮೊರೆ ಹೊಕ್ಕ ಉದ್ಧವ್ ಟೀಮ್
ಈ ನಡುವೆ ಬಂಡಾಯ ಬಣಕ್ಕೆ ಕಾನೂನು ಕಿರಿಕಿರಿ ಮೂಲಕ ತಡೆಯೊಡ್ಡುವ ಉದ್ಧವ್ ಠಾಕ್ರೆ ಬಣದ ಪ್ರಯತ್ನ ಮತ್ತೆ ವಿಫಲವಾಗಿದೆ. ಡೆಪ್ಯೂಟಿ ಸ್ಪೀಕರ್ ಅವರ ಮುಂದೆ ಬಾಕಿ ಇರುವ ಶಿವಸೇನೆಯ ೧೬ ಬಂಡಾಯ ಶಾಸಕರ ಅರ್ಜಿ ವಿಚಾರಣೆ ಮುಕ್ತಾಯವಾಗುವವರೆಗೆ ವಿಶ್ವಾಸ ಮತ ಯಾಚನೆಗೆ ಅವಕಾಶ ನೀಡಬಾರದು ಎಂದು ಕೋರಿ ಉದ್ಧವ್ ಠಾಕ್ರೆ ಬಣದಲ್ಲಿರುವ ಸಚೇತಕ ಸುನಿಲ್ ಪ್ರಭು ಸುಪ್ರೀಂಕೋರ್ಟ್ ಮೊರೆ ಹೊಕ್ಕಿದ್ದರು.
ಆದರೆ, ಸುಪ್ರೀಂಕೋರ್ಟ್ ಯಾವುದೇ ತಡೆಯಾಜ್ಞೆ ನೀಡಲು ಒಪ್ಪಿಲ್ಲ. ಅನರ್ಹತೆ ಕುರಿತ ಮುಂದಿನ ವಿಚಾರಣೆ ನಡೆಯುವ ಜುಲೈ ೧೧ರಂದೇ ಈ ಅರ್ಜಿಯ ವಿಚಾರಣೆಯನ್ನೂ ನಡೆಸಲಾಗುವುದು ಎಂದು ಅದು ಹೇಳಿದೆ. ಇದು ಉದ್ಧವ್ ಠಾಕ್ರೆ ಬಣಕ್ಕೆ ದೊಡ್ಡ ಹಿನ್ನಡೆ ಎಂದು ಭಾವಿಸಲಾಗಿದೆ.
ಆದರೆ, ಸರಕಾರ ರಚನೆಗೆ ಮತ್ತೆ ಮತ್ತೆ ಕಿರಿಕಿರಿ ಮಾಡುವುದನ್ನು ಮುಂದುವರಿಸಿರುವುದು ಉದ್ಧವ್ ಠಾಕ್ರೆ ಬಣ ತನ್ನ ದ್ವೇಷ ಸಾಧನೆಯನ್ನು ಮುಂದುವರಿಸುವ ಇಚ್ಛೆಯನ್ನು ಹೊಂದಿರುವುದರ ಸೂಚನೆ ಎಂದು ವ್ಯಾಖ್ಯಾನಿಸಲಾಗಿದೆ. ಇದನ್ನೂ ಓದಿ | ಬಿಜೆಪಿಯ ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರ ಸಿಎಂ ಹುದ್ದೆ ಬಿಟ್ಟುಕೊಟ್ಟಿದ್ದೇಕೆ?