ಮುಂಬಯಿ/ ನವ ದೆಹಲಿ : ಇದುವರೆಗೆ ಮುಂಬಯಿ ಮತ್ತು ಗುವಾಹಟಿ ನಡುವೆ ನಡೆಯುತ್ತಿದ್ದ ಶಿವಸೇನೆಯೊಳಗಿನ ಬಂಡಾಯ ಸಮರ ಈಗ ರಾಜಕೀಯ ಅಖಾಡದಿಂದ ಕಾನೂನು ಹೋರಾಟದತ್ತ ಸಾಗುವ ಲಕ್ಷಣ ಗೋಚರಿಸಿದೆ. ಎರಡೂ ಬಣಗಳು ಇದೀಗ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತುವ ಮಾತಾಡಿವೆ. ಸೋಮವಾರ ಸಂಜೆಯೊಳಗೆ ಇದರ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ. ಆದರೆ, ಯಾರು ಮೊದಲು ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತುತ್ತಾರೆ ಎನ್ನುವುದು ಈಗ ಉಳಿದಿರುವ ಕುತೂಹಲ.
ಸಂಸದ ಅರವಿಂದ ಸಾವಂತ್ ಹೇಳಿದ್ದೇನು?
ಶಿವಸೇನೆಯಲ್ಲಿ ನಡೆಯುತ್ತಿರುವ ಈ ಬಂಡಾಯ ಹೋರಾಟ ಕೇವಲ ರಾಜಕೀಯವಲ್ಲ. ಅದು ಕಾನೂನಾತ್ಮಕ ಹೋರಾಟವಾಗಿ ಪರಿವರ್ತನೆಯಾಗಿದೆ ಎಂದು ಶಿವಸೇನೆಯ ಸಂಸದರಾಗಿರುವ ಅರವಿಂದ ಸಾವಂತ್ ಹೇಳಿದರು. ಏಕನಾಥ್ ಶಿಂಧೆ ಬಣದಲ್ಲಿರುವ ೧೬ ಶಾಸಕರ ವಿರುದ್ಧ ನಾವು ಆರಂಭಿಸಿರುವ ಅನರ್ಹತೆ ಹೋರಾಟದಲ್ಲಿ ಖಂಡಿತ ಜಯ ಸಿಗಲಿದೆ. ನಾವು ಸುಪ್ರೀಂಕೋರ್ಟ್‌ನ ಹಿಂದಿನ ತೀರ್ಪುಗಳನ್ನು ಗಮನಿಸಿ, ವಕೀಲರ ಜತೆ ಚರ್ಚಿಸಿಯೇ ಶಾಸಕರ ವಿರುದ್ಧ ಅನರ್ಹತೆಯ ದೂರನ್ನು ನೀಡಿದ್ದೇವೆ. ನಾನು ಕಾನೂನಿನ ಮುಂದಿನ ದಾರಿಗಳ ಬಗ್ಗೆ ಮಾತನಾಡುವುದಕ್ಕಾಗಿಯೇ ದೆಹಲಿಗೆ ಬಂದಿದ್ದೇನೆ ಎಂದರು.
ನಾವು ಸುಪ್ರೀಂಕೋರ್ಟ್‌ನ ಹಿರಿಯ ವಕೀಲರ ಜತೆ ಮಾತನಾಡಿ ಶಾಸಕರ ಅನರ್ಹತೆಗೆ ಮನವಿ ಮಾಡಿದ್ದೇವೆ. ಒಮ್ಮೆ ಅವರ ವಿರುದ್ಧ ತೆಗೆದುಕೊಂಡಾಗಲಷ್ಟೇ ಅವರಿಗೆ ಇದರ ಬಿಸಿ ತಟ್ಟಲಿದೆ ಎಂದು ರೆಬೆಲ್ ಶಾಸಕರನ್ನು ಉಲ್ಲೇಖಿಸಿ ಹೇಳಿದರು.
ಯಾರ ಮೇಲೆ ಅನರ್ಹತೆ ಅಸ್ತ್ರ?
ಶಿವಸೇನೆಯ ಶಾಸಕರಾದ ಏಕನಾಥ್ ಶಿಂಧೆ, ಚಿಮನ್ ರಾವ್ ಪಟೇಲ್, ಬಾಲಾಜಿ ಕಲ್ಯಾಣ್‌ಕರ್, ಸಂಜಯ್ ರಾಯ್ ಮುಲ್ಕರ್, ರಮೇಶ್ ಬೋರ್ನಾರೆ, ಮಹೇಶ್ ಶಿಂಧೆ, ಅಬ್ದುಲ್ ಸತ್ತಾರ್, ಸಂದೀಪನ್ ರಾವ್ ಭೂಮ್ರೇ, ಭರತ್ ಶೇಟ್ ಗೋಗವಾಲೆ, ಸಂಜಯ್ ಶಿರ್ಸಾಟ್, ಯಾಮಿನಿ ಜಾಧವ್, ಲತಾ ಸೋನಾವಾನೆ, ಅನಿಲ್ ಭಾಭರ್, ತಾನಾಜಿ ಸಾವಂತ್, ಬಾಲಾಜಿ ಕಿನಿಕರ್ ಮತ್ತು ಪ್ರಕಾಶ್ ಸುರ್ವೆ ಅವರ ವಿರುದ್ಧ ಅನರ್ಹತೆ ಅಸ್ತ್ರವನ್ನು ಪ್ರಯೋಗ ಮಾಡಲಾಗಿದೆ. ಇವರೆಲ್ಲರೂ ತಮಗೆ ನೀಡಿರುವ ನೋಟಿಸ್‌ಗೆ ಸೋಮವಾರ ಸಂಜೆ ೫.೩೦ರೊಳಗೆ ಡೆಪ್ಯೂಟಿ ಸ್ಪೀಕರ್‌ಗೆ ಉತ್ತರ ನೀಡಬೇಕಾಗಿದೆ.
ರೆಬೆಲ್ ಶಾಸಕರ ಹೋರಾಟವೇನು?
ಏಕನಾಥ್ ಶಿಂಧೆ ಅವರ ಟೀಮ್‌ನ ಪ್ರಕಾರ, ಈ ಅನರ್ಹತೆ ಅಸ್ತ್ರ ಯಾವ ಕಾರಣಕ್ಕೂ ಫಲಿಸುವುದಿಲ್ಲ. ಯಾಕೆಂದರೆ, ಶಿವಸೇನೆಯ ಶಾಸಕಾಂಗ ಪಕ್ಷ ನಾಯಕನ ಸ್ಥಾನದಿಂದ ಏಕನಾಥ್ ಶಿಂಧೆ ಅವರನ್ನು ಕಿತ್ತು ಅಜಯ್ ಚೌಧರಿ ಅವರನ್ನು ನೇಮಿಸಿದ್ದೇ ಅಕ್ರಮ ಎನ್ನುವುದು ಅವರ ವಾದ.
ಹಾಗಾಗಿ ಡೆಪ್ಯೂಟಿ ಸ್ಪೀಕರ್ ನೀಡಿರುವ ನೋಟಿಸ್‌ಗೆ ಉತ್ತರ ಕೊಡುವ ಜತೆಗೆ ಈ ಶಾಸಕಾಂಗ ಪಕ್ಷ ನಾಯಕನ ಬದಲಾವಣೆಯನ್ನೂ ಪ್ರಶ್ನಿಸುವುದಾಗಿ ಈ ಟೀಮ್ ಹೇಳಿದೆ. ಉದ್ಧವ್ ಠಾಕ್ರೆ ಬಣದಲ್ಲಿ ಶಾಸಕರೇ ಇಲ್ಲ. ಹೀಗಿರುವಾಗ ಅವರು ನೇಮಿಸಿದ ಶಾಸಕಾಂಗ ಪಕ್ಷ ನಾಯಕನ ಆಯ್ಕೆ ಹೇಗೆ ಸಿಂಧುವಾಗುತ್ತದೆ ಎನ್ನುವುದು ಅವರ ಪ್ರಶ್ನೆ. ಇದನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಅವರು ಹೇಳಿದ್ದಾರೆ.
ಇದರೊಂದಿಗೆ ಎರಡೂ ಬಣಗಳು ಖಡಾಖಡಿ ಕಾನೂನು ಸಮರಕ್ಕೆ ಅಣಿಯಾಗುತ್ತಿವುದು ಸ್ಪಷ್ಟ.
ಇದನ್ನೂ ಓದಿ| ಶಿಂಧೆ ಟೀಮ್‌ಗೆ ಅನರ್ಹತೆ ತೂಗುಗತ್ತಿ, 16 ರೆಬೆಲ್‌ಗಳಿಗೆ ಡೆಪ್ಯುಟಿ ಸ್ಪೀಕರ್ ನೋಟಿಸ್, ಉತ್ತರಿಸಲು 2 ದಿನ ಟೈಮ್